ಮಹಾರಾಷ್ಟ್ರ ಸರ್ಕಾರ ರಚನೆ ಕಸರತ್ತು; ಗಡ್ಕರಿ, ಠಾಕ್ರೆ ಭೇಟಿ
ಮುಂಬೈ, ನವೆಂಬರ್ 08 : ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕಸರತ್ತು ಮುಂದುವರೆದಿದೆ. ಬಿಜೆಪಿ-ಶಿವಸೇನೆ ನಡುವೆ ಹಗ್ಗ-ಜಗ್ಗಾಟ ನಡೆಯುತ್ತಿದ್ದು, ಶುಕ್ರವಾರ ಅಂತಿಮ ತೀರ್ಮಾನ ಕೈಗೊಳ್ಳುವಂತೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ.
ತವರು ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಬಗೆಹರಿಸಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಮುಂದಾಗಿದ್ದಾರೆ. ಶುಕ್ರವಾರ ಅವರು ಶಿವಸೇನೆ ಮುಖ್ಯಸ್ಥ ಉದ್ಭವ ಠಾಕ್ರೆ ಭೇಟಿಯಾಗಲಿದ್ದಾರೆ.
ಪ್ರಸ್ತುತ ಇರುವ ವಿಧಾನಸಭೆ ಅವಧಿ ನವೆಂಬರ್ 9ರ ಶನಿವಾರ ಅಂತ್ಯಗೊಳ್ಳಲಿದೆ. ಆದರೆ, ಯಾವುದೇ ಪಕ್ಷ ಇನ್ನೂ ಸರ್ಕಾರ ರಚನೆ ಮಾಡುವ ಹಕ್ಕು ಮಂಡನೆ ಮಾಡಿಲ್ಲ. ಇದು ರಾಜ್ಯ ರಾಜಕೀಯದಲ್ಲಿ ಗೊಂದಲಕ್ಕೆ ಕಾರಣವಾಗಿದೆ.
ಯಾವುದೇ ಪಕ್ಷ ಸರ್ಕಾರ ರಚನೆ ಹಕ್ಕು ಮಂಡನೆ ಮಾಡದಿದ್ದರೆ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳ್ಳುವ ಸಾಧ್ಯತೆ ಇದೆ. ಇದು ರಾಜಕೀಯ ಪಕ್ಷಗಳ ಆತಂಕ ಹೆಚ್ಚಿಸಿದೆ. ಚುನಾವಣೆಯಲ್ಲಿ ದೊಡ್ಡ ಪಕ್ಷಗಳಾಗಿ ಹೊರಹೊಮ್ಮಿರುವ ಬಿಜೆಪಿ, ಶಿವಸೇನೆ ನಡುವೆ ಮಾತುಕತೆ ಇನ್ನು ಮುಗಿದಿಲ್ಲ.

ಮೈತ್ರಿಕೂಟದಲ್ಲಿ ಒಮ್ಮತವಿಲ್ಲ
ಚುನಾವಣೆಗೆ ಮುನ್ನವೇ ಬಿಜೆಪಿ-ಶಿವಸೇನೆ 'ಮಹಾಯತಿ' ಎಂಬ ಮೈತ್ರಿಕೂಟವನ್ನು ರಚಿಸಿಕೊಂಡಿದ್ದವು. ಎರಡೂ ಪಕ್ಷಗಳು ಸೇರಿಸಿ ಸರ್ಕಾರ ಮಾಡುವಷ್ಟು ಮ್ಯಾಜಿಕ್ ಸಂಖ್ಯೆ ಇದೆ. ಆದರೆ, ಅಧಿಕಾರ ಹಂಚಿಕೆ ವಿಚಾರದಲ್ಲಿ ಎರಡೂ ಪಕ್ಷಗಳ ನಡುವೆ ಒಮ್ಮತ ಮೂಡಿಲ್ಲ. ಇದು ಸರ್ಕಾರ ರಚನೆ ವಿಳಂಬಕ್ಕೆ ಕಾರಣವಾಗಿದೆ.

ದೇವೇಂದ್ರ ಫಡ್ನವೀಸ್ ಸಿಎಂ
ಮಹಾರಾಷ್ಟ್ರದ ರಾಜಕೀಯಕ್ಕೆ ವಾಪಸ್ ಆಗುವ ಸುದ್ದಿಗಳನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ತಳ್ಳಿ ಹಾಕಿದ್ದಾರೆ. ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿಯೇ ಹೊಸ ಸರ್ಕಾರ ರಚನೆಯಾಗಲಿದೆ ಎಂದು ಹೇಳಿದ್ದಾರೆ. ಇಂದು ಅವರು ಶಿವಸೇನಾ ಮುಖ್ಯಸ್ಥ ಉದ್ಭವ ಠಾಕ್ರೆ ಭೇಟಿಯಾಗಲಿದ್ದು, ಅಂತಿಮ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.

ಶಿವಸೇನೆ ನಾಯಕರ ಹೇಳಿಕೆ
ಶಿವಸೇನಾ ವಕ್ತಾರ ಸಂಜಯ್ ರಾವುತ್, "ಬಿಜೆಪಿಯ ಬೆದರಿಕೆ ತಂತ್ರಗಳು ಇನ್ನು ಮುಂದೆ ನಡೆಯುವುದಿಲ್ಲ. ಸರ್ಕಾರ ರಚನೆಗೆ ನಮ್ಮ ಎದುರು ಬೇರೆ ಆಯ್ಕೆಗಳು ಇವೆ, ಶಿವಸೇನೆಯವರೇ ಮುಖ್ಯಮಂತ್ರಿಯಾಗಲಿದ್ದಾರೆ" ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಹುದ್ದೆಗೆ ಬೇಡಿಕೆ
50:50 ರ ಅನುಪಾತದಲ್ಲಿ ಅಧಿಕಾರ ಹಂಚಿಕೆಯಾಗಬೇಕು ಎಂಬುದು ಶಿವಸೇನೆಯ ಪಟ್ಟು. ಎರಡೂವರೆ ವರ್ಷ ಮುಖ್ಯಮಂತ್ರಿ ಹುದ್ದೆಯನ್ನು ತಮಗೆ ಬಿಟ್ಟುಕೊಡಬೇಕು ಎಂದು ಶಿವಸೇನೆ ಬೇಡಿಕೆ ಇಟ್ಟಿದೆ. ಮುಖ್ಯಮಂತ್ರಿ ಹುದ್ದೆಯ ಬೇಡಿಕೆಯಿಂದಾಗಿಯೇ ಸರ್ಕಾರ ರಚನೆ ಕಸರತ್ತು ಅಂತಿಮಗೊಳ್ಳುತ್ತಿಲ್ಲ.












Click it and Unblock the Notifications