ಮಹಾರಾಷ್ಟ್ರದಲ್ಲಿ ನಾನೇ ದೊಡ್ಡಣ್ಣ: ಬಿಜೆಪಿಗೆ ಶಿವಸೇನಾ ಸಂದೇಶ
ಮುಂಬೈ, ಜನವರಿ 28: ಮುಂಬರುವ ಲೋಕಸಭೆ ಚುನಾವಣೆ ವೇಳೆಗೆ ಮೈತ್ರಿ ಮಾಡಿಕೊಳ್ಳುವ ಸಂಬಂಧ ಚರ್ಚಿಸಲು ಮತ್ತು ಕಾರ್ಯತಂತ್ರ ರೂಪಿಸಲು ಶಿವಸೇನಾ ಸೋಮವಾರ ಸಭೆ ನಡೆಸಿದೆ.
ಸಭೆಯ ಅಂತ್ಯದ ಬಳಿಕ ವಿವರಗಳನ್ನು ನೀಡದೆ ಇದ್ದರೂ, ಪಕ್ಷದ ಮುಖಂಡ ಸಂಜಯ್ ರಾವತ್ ಪಕ್ಷವು ಮಹಾರಾಷ್ಟ್ರದಲ್ಲಿ ಯಾವುದೇ ಮೈತ್ರಿ ಪಕ್ಷಕ್ಕೆ 'ದೊಡ್ಡಣ್ಣ'ನಾಗಿಯೇ ಇರುತ್ತದೆ ಎಂದಿದ್ದಾರೆ.
'ಮಹಾರಾಷ್ಟ್ರದಲ್ಲಿ ಶಿವಸೇನಾ ದೊಡ್ಡಣ್ಣನಂತೆ (ಬಿಜೆಪಿ ಮತ್ತು ಇತರೆ ಮಿತ್ರ ಪಕ್ಷಗಳಿಗೆ). ಹಾಗೆಯೇ ಮುಂದುವರಿಯಲಿದ್ದೇವೆ. ಶಿವಸೇನಾ ಜೊತೆಗೆ ಮೈತ್ರಿಗೆ ಬಿಜೆಪಿಯಿಂದ ಯಾವುದೇ ಪ್ರಸ್ತಾಪವಿಲ್ಲ. ನಮ್ಮ ಬಳಿ ಮೈತ್ರಿ ಮಾಡಿಕೊಳ್ಳಲು ಇಚ್ಛಿಸುವವರು ಅದರ ಬಗ್ಗೆ ಮಾತನಾಡುತ್ತಿದ್ದಾರೆ. ನಾವು ಯಾವುದೇ ಪ್ರಸ್ತಾಪಕ್ಕೂ ಕಾಯುತ್ತಿಲ್ಲ' ಎಂದು ರಾವತ್ ಹೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಕಳೆದ ವರ್ಷ ಜನವರಿಯಲ್ಲಿ ಶಿವಸೇನಾ ಹೇಳಿತ್ತು. ಆದರೆ, ಇತ್ತೀಚಿನ ಬೆಳವಣಿಗೆಗಳಲ್ಲಿ ಬಿಜೆಪಿಯು ಸೇನಾ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗುವ ಸೂಚನೆಗಳು ಕಂಡುಬಂದಿವೆ.
ಶಿವಸೇನಾವನ್ನು ಜತೆಯಲ್ಲಿಯೇ ಇಟ್ಟುಕೊಂಡು ಚುನಾವಣೆ ಎದುರಿಸಲು ಬಿಜೆಪಿ ಉದ್ದೇಶಿಸಿದೆ. ಹೀಗಾಗಿ ರಾಜ್ಯ, ಕೇಂದ್ರ ಸರ್ಕಾರಗಳ ಮೇಲೆ ಹಾಗೂ ಪ್ರಧಾನಿ ವಿರುದ್ಧವೂ ಶಿವಸೇನಾ ವಾಗ್ದಾಳಿ ನಡೆಸುತ್ತಿದ್ದರೂ ಬಿಜೆಪಿ ಮೌನವಹಿಸಿದೆ.












Click it and Unblock the Notifications