ಮಳೆಯ ರುದ್ರತಾಂಡವಕ್ಕೆ ಮುಂಬೈನಲ್ಲಿ ಜಲಪ್ರಳಯ, ತೇಲಾಡುತಿದೆ ವಾಣಿಜ್ಯನಗರಿ
ಮುಂಬೈ, ಜುಲೈ 10 : ವಾಣಿಜ್ಯ ನಗರಿ ಮುಂಬೈನಲ್ಲಿ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆಗಳು, ರೈಲ್ವೆ ಹಳಿಗಳು ಜಲಾವೃತವಾಗಿದ್ದು ಜನರ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಹಲವು ಜಿಲ್ಲೆಗಳಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಕೆಳದ ಎರಡು ದಿನಗಳಿಂದ ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದೆ. ಮುಂಬೈ, ಥಾಣೆ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮಳೆ ಎಡಬಿಡದೇ ಸುರಿಯುತ್ತಿದೆ. ಇನ್ನೂ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.
ಗುರುವಾರದ ತನಕ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ನೌಕಾಪಡೆ, ಪ್ರಕೃತಿ ವಿಕೋಪ ನಿರ್ವಹಣಾ ಪಡೆ ಮಳೆಯಲ್ಲಿ ಸಿಲುಕಿದ ಜನರನ್ನು ರಕ್ಷಿಸುವ ಕಾರ್ಯವನ್ನು ಮಾಡುತ್ತಿವೆ. ರಸ್ತೆಗಳು ಜಲಾವೃತವಾಗಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಮುಂಬೈ ರೈಲು ಸೇವೆ ಮಳೆಯಿಂದಾಗಿ ತಡವಾಗುತ್ತಿದೆ. 10 ರಿಂದ 15 ನಿಮಿಷಕ್ಕೊಂದು ರೈಲುಗಳು ಸಂಚಾರ ನಡೆಸುತ್ತಿವೆ. ಕೆಲವು ಮಾರ್ಗಗಳಲ್ಲಿ ರೈಲ್ವೆ ಹಳಿಗಳು ಜಲಾವೃತವಾಗಿದ್ದು, ರೈಲ್ವೆ ಸೇವೆ ಸ್ಥಗಿತಗೊಂಡಿದೆ. ರೈಲ್ವೆ ನಿಲ್ದಾಣದಲ್ಲಿ ಜನರಿಗೆ ಆಹಾರ, ಟೀ ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.

ರೈಲು ಸೇವೆಗಳು ಸ್ಥಗಿತ
ಭಾರೀ ಮಳೆಯಿಂದಾಗಿ ರೈಲುಗಳ ಸಂಚಾರಕ್ಕೆ ತೊಂದರೆ ಆಗಿದೆ. ರೈಲ್ವೆ ಹಳಿಗಳು ಜಲಾವೃತವಾಗಿದ್ದು, ಕೆಲವು ಮಾರ್ಗಗಳಲ್ಲಿ 10 ರಿಂದ 15 ನಿಮಿಷಕ್ಕೊಂದು ರೈಲುಗಳು ಸಂಚಾರ ನಡೆಸುವತ್ತಿವೆ. ವಾಸಯ್ ಮತ್ತು ವಿಹಾರ್ ನಡುವಿನ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ನಗರದ ಪಶ್ಚಿಮ ಭಾಗದಲ್ಲಿ ರೈಲು ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಕೇಂದ್ರ ಭಾಗದಲ್ಲಿ ರೈಲು ಸಂಚಾರಕ್ಕೆ ಹೆಚ್ಚಿನ ಅಡಚಣೆಯಾಗಿಲ್ಲ. ಚರ್ಚ್‌ಗೇಟ್‌ನಿಂದ ರೈಲ್ವೆ ಸೇವೆ ಎಂದಿನಂತೆ ಇದೆ ಎಂದು ರೈಲ್ವೆ ಇಲಾಖೆ ಹೇಳಿದೆ.

ಹೊರ ರಾಜ್ಯದ ರೈಲು ಸಂಚಾರ
ಮುಂಬೈನಿಂದ ಹೊರ ರಾಜ್ಯಗಳಿಗೆ ತೆರಳುವ ಅನೇಕ ರೈಲುಗಳ ಸಂಚಾರ ಸ್ಥಗಿತಗೊಂಡಿದೆ. ಮುಂಬೈ ಹೊರವಲಯದಲ್ಲಿ ರೈಲ್ವೆ ಹಳಿ ಸಂಪೂರ್ಣವಾಗಿ ಜಲಾವೃತವಾಗಿದೆ. ಮುಂಬೈ-ಅಹಮದಾಬಾದ್ ಶತಾಬ್ದಿ ರೈಲನ್ನು ಸ್ಥಗಿತಗೊಳಿಸಲಾಗಿದೆ. ಮುಂಜಾಗೃತಾ ಕ್ರಮವಾಗಿ ರೈಲಿಗೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ.

ಸರ್ಕಾರಿ ಶಾಲೆಗಳಿಗೆ ರಜೆ
ಭಾರೀ ಮಳೆಯಿಂದಾಗಿ ಮಕ್ಕಳು ಶಾಲೆಗೆ ಆಗಮಿಸುವುದು ಕಷ್ಟವಾಗಿದೆ. ಥಾಣೆಯಲ್ಲಿ ಶಾಲಾ-ಕಾಲೇಜುಗಳಿಗೆ ಇಂದು ರಜೆ ನೀಡಲಾಗಿದೆ. ಮುಂಬೈನಲ್ಲಿ ತಮ್ಮ ಏರಿಯಾದ ಪರಿಸ್ಥಿತಿ ನೋಡಿಕೊಂಡು ರಜೆ ಘೋಷಣೆ ಮಾಡುವಂತೆ ಶಾಲಾ ಮುಖ್ಯಸ್ಥರಿಗೆ ಶಿಕ್ಷಣ ಸಚಿವರು ಸೂಚನೆ ನೀಡಿದ್ದಾರೆ. ಈ ಕುರಿತು ಶಿಕ್ಷಣ ಸಚಿವ ವಿನೋದ್ ತಾವ್ಡೆ ಟ್ವಿಟ್ ಮಾಡಿದ್ದಾರೆ.

ಡಬ್ಬಾವಾಲಾ ಸೇವೆ ಸ್ಥಗಿತ
ಮುಂಬೈ ಎಂದರೆ ನೆನಪಾಗುವುದು ಡಬ್ಬಾವಾಲಾಗಳ ಸೇವೆ. ಆದರೆ, ನಗರದ ಹಲವು ಬಡಾವಣೆಗಳು ಜಲಾವೃತವಾಗಿದೆ. ಸೈಕಲ್‌ನಲ್ಲಿ ಅವರು ಹೋಗಿ ಊಟದ ಡಬ್ಬಿಯನ್ನು ಸಂಗ್ರಹ ಮಾಡುವುದು ಕಷ್ಟವಾಗಿದೆ. ಆದ್ದರಿಂದ, ಜುಲೈ 10ರಂದು ಡಬ್ಬಾವಾಲಾಗಳ ಸೇವೆ ಸ್ಥಗಿತಗೊಳಿಸಲಾಗಿದೆ.
'ಮಳೆಯಿಂದಾಗ ಡಬ್ಬಿಗಳನ್ನು ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ, ಇಂದು ಸೇವೆ ಸ್ಥಗಿತಗೊಳಿಸಲಾಗಿದೆ' ಎಂದು ಡಬ್ಬಾವಾಲಾಗಳ ಅಸೋಸಿಯೇಷನ್ ವಕ್ತಾರ ಸುಭಾಷ್ ತಾಳೇಕರ್ ಹೇಳಿದ್ದಾರೆ.

ಭಾರೀ ಮಳೆ, ಗಾಳಿ
ಮಂಗಳವಾರ ಬೆಳಗ್ಗೆ ನಗರದ ಹಲವು ಕಡೆ ಭಾರೀ ಮಳೆ ಸುರಿದಿದೆ. ಜೋರಾಗಿ ಗಾಳಿ ಬೀಸುತ್ತಿದೆ. ಗ್ರೇಟರ್ ಮುಂಬೈ, ಥಾಣೆ, ರಾಯಘಡ್, ಪಾಲ್ಗಾರ್ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ವಿಮಾನ ಸೇವೆಗೆ ತೊಂದರೆ
ಭಾರೀ ಮಳೆಯಿಂದಾಗಿ ವಿಮಾನ ಸೇವೆಗೂ ತೊಂದರೆಯಾಗಿದೆ. ವಿಮಾನಗಳ ಆಗಮನ ಮತ್ತು ನಿರ್ಗಮನ ಸುಮಾರು 30 ನಿಮಿಷ ತಡವಾಗಲಿದೆ ಎಂದು ಜೆಟ್ ಏರ್ ವೇಸ್ ಹೇಳಿದೆ. ಇಂದು ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರು ಟಿಕೆಟ್ ರದ್ದು ಮಾಡಿದರೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಜನರಿಗೆ ಗೃಹ ಬಂಧನ
ಭಾರೀ ಮಳೆಯ ಹಲವು ಬಡಾವಣೆಗಳು ಜಲಾವೃತವಾಗಿದೆ. ಆದ್ದರಿಂದ, ಹಲವು ಜನರು ಮನೆಯಲ್ಲಿಯೇ ಉಳಿದಿದ್ದು, ಅಗತ್ಯ ವಸ್ತುಗಳಿಗಾಗಿ ಪರದಾಡುತ್ತಿದ್ದಾರೆ. ವಾಸಿಯಲ್ಲಿ ಸುಮಾರು 300 ಜನರು ಮನೆಯಲ್ಲಿಯೇ ಇದ್ದಾರೆ. ಬಡಾವಣೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾದರೆ ಎಲ್ಲರನ್ನೂ ಸ್ಥಳಾಂತರ ಮಾಡಲು ವಿಪತ್ತು ನಿರ್ವಹಣಾ ಪಡೆ ಸಜ್ಜಾಗಿದೆ.

ಹೆಚ್ಚು ಮಳೆ ಎಲ್ಲಿ?
ಸೋಮವಾರ ಬೆಳಗ್ಗೆ 8.30ರಿಂದ ಸಂಜೆ 5.30ರ ತನಕ ಕೋಲಬಾ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗಿದೆ. 104.8 ಮಿ.ಮೀ.ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ದಾಖಲೆಯ ಮಳೆ
ಮುಂಬೈ ನಗರದಲ್ಲಿ ಕೇವಲ 20 ದಿನಗಳಲ್ಲಿ ಶೇ 54 ರಷ್ಟು ಮಳೆಯಾಗಿದೆ. ಮುಂಗಾರು ಆರಂಭವಾದಾಗ ಸುರಿದ ದಾಖಲೆಯ ಮಳೆ ಇದಾಗಿದೆ.

ರಕ್ಷಣಾ ಕಾರ್ಯಕ್ಕೆ ಸಿದ್ಧ
ಪೊಲೀಸ್, ಮುಂಬೈ ಮಹಾನಗರ ಪಾಲಿಕೆ, ನೌಕಾಪಡೆ, ವಿಪತ್ತು ನಿರ್ವಹಣಾ ತಂಡ ಎಲ್ಲವೂ ಸರ್ವ ಸನ್ನದ್ಧವಾಗಿದ್ದು ಜನರನ್ನು ರಕ್ಷಣೆ ಮಾಡುತ್ತಿವೆ. ಸ್ಕೈಮ್ಯಾಟ್ 24 ಗಂಟೆಯಲ್ಲಿ ನಗರದಲ್ಲಿ 150 ಮಿ.ಮೀ. ಮಳೆಯಾಗಬಹುದು ಎಂದು ಮುನ್ಸೂಚನೆ ನೀಡಿದೆ.












Click it and Unblock the Notifications