ಭಾರೀ ಮಳೆಗೆ ಮುಂಬೈನ ಅಂಧೇರಿಯಲ್ಲಿ ಸೇತುವೆ ಕುಸಿತ
ಮುಂಬೈ, ಜುಲೈ 03 : ಅಂಧೇರಿ ಪಶ್ಚಿಮ ಮತ್ತು ಪೂರ್ವಕ್ಕೆ ಸಂಪರ್ಕ ಕಲ್ಪಿಸುವ ಗೋಖಲೆ ರಸ್ತೆಯಲ್ಲಿರುವ ಮೇಲು ಸೇತುವೆ ಮಂಗಳವಾರ ಬೆಳಿಗ್ಗೆ 7.30ಕ್ಕೆ ಕುಸಿದುಬಿದ್ದಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಸೇತುವೆಯಡಿ ಇನ್ನೂ ಕೆಲವರು ಸಿಲುಕಿರುವ ಶಂಕೆಯಿದೆ.
ಮುಂಬೈನಲ್ಲಿ ಸೋಮವಾರ ರಾತ್ರಿ ಭಾರೀ ಮಳೆ ಸುರಿದಿದ್ದು, 18 ಗಂಟೆಗಳ ಅವಧಿಯಲ್ಲಿ 9 ಸೆಂ.ಮೀ. ಮಳೆಯಾಗಿದೆ. ಈ ಮಳೆಯ ಹೊಡೆತಕ್ಕೆ ಇತ್ತೀಚೆಗೆ ರಿಪೇರಿಯಾಗಿದ್ದ ಗೋಖಲೆ ರಸ್ತೆ ಕುಸಿದುಬಿದ್ದಿದೆ. ನ್ಯಾಷನಲ್ ಡಿಸಾಸ್ಟರ್ ರೆಸ್ಪಾನ್ಸ್ ಫೋರ್ಸ್ ಸ್ಥಳಕ್ಕೆ ಧಾವಿಸಿದ್ದು, ಜನರ ರಕ್ಷಣೆಯಲ್ಲಿ ತೊಡಗಿದೆ.

ಸೇತುವೆ ಕುಸಿದಿರುವುದರಿಂದ ಪಶ್ಚಿಮ ರೈಲು ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗಿದೆ. ಅಂಧೇರಿಯ ರೈಲು ನಿಲ್ದಾಣದ 7 ಮತ್ತು 8ನೇ ಪ್ಲಾಟ್ ಫಾರಂ ಮೇಲೆಯೇ ಸೇತುವೆ ಕುಸಿದುಬಿದ್ದಿದೆ. ಈ ಸೇತುವೆಯನ್ನು ಮುಂಬೈ ಕಾರ್ಪೊರೇಷನ್ ನಿರ್ವಹಿಸುತ್ತಿದೆ.

ಮುಂಬೈನ ಕೆಲವೆಡೆ 11 ಸೆಂ.ಮೀ.ಗೂ ಹೆಚ್ಚು ಮಳೆಯಾಗಿದ್ದು, ಮಂಗಳವಾರ ಮತ್ತು ಬುಧವಾರವೂ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಮುಂಬೈನಲ್ಲಿರುವ ಕೆಲ ಕಳಪೆ ಕಟ್ಟಡಗಳು, ಸೇತುವೆ ಮುಂತಾದ ನಿರ್ಮಾಣಗಳ ಬಗ್ಗೆ ಕೂಡಲೆ ಕ್ರಮ ತೆಗೆದುಕೊಳ್ಳದಿದ್ದರೆ ಮುಂಬೈ ಸರ್ವನಾಶವಾಗುವುದರಲ್ಲಿ ಸಂದೇಹವಿಲ್ಲ ಎಂದು ಅಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹಾರ್ಬರ್ ರೈಲ್ವೇ ನಿಲ್ದಾಣದ ಅಂಧೇರಿಯಿಂದ ಬಾಂದ್ರಾ ರೈಲ್ವೇ ನಿಲ್ದಾಣದ ಎಲ್ಲಾ ರೈಲುಗಳ ಸಂಚಾರ ವ್ಯತ್ಯಯವಾಗಲಿದ್ದು, ಛತ್ರಪತಿ ಶಿವಾಜಿ ರೈಲು ನಿಲ್ದಾಣದಿಂದ ಬಾಂದ್ರಾ ನಡುವಿನ ಎಲ್ಲಾ ರೈಲುಗಳೂ ಎಂದಿನಂತೆ ಕಾರ್ಯನಿರ್ವಹಿಸಲಿವೆ.












Click it and Unblock the Notifications