ವಾಟ್ಸಾಪ್ ಸಂದೇಶ ನಂಬಿದ ಅನಂತಕುಮಾರ್ ಹೆಗಡೆ ಹೇಳಿದ್ದು ಸುಳ್ಳು ಎಂದ ಫಡ್ನವಿಸ್!

ಮುಂಬೈ, ಡಿಸೆಂಬರ್ 2: ಬಹುಮತ ಇಲ್ಲದೆ ಇದ್ದರೂ ಎನ್‌ಸಿಪಿಯ ಅಜಿತ್ ಪವಾರ್ ಜತೆ ಸೇರಿ ದೇವೇಂದ್ರ ಫಡ್ನವಿಸ್ ಅವರು ಸರ್ಕಾರ ರಚಿಸುವುದರ ಹಿಂದೆ ಮಹತ್ತರ ಉದ್ದೇಶವಿತ್ತು. ಬಳಕೆಯಾಗದೆ ಉಳಿದಿದ್ದ ನಿಧಿಯನ್ನು ಶಿವಸೇನಾ-ಎನ್‌ಸಿಪಿ-ಕಾಂಗ್ರೆಸ್ ಸರ್ಕಾರ ದುರ್ಬಳಕೆ ಮಾಡಿಕೊಳ್ಳಲು ಅವಕಾಶ ನೀಡಬಾರದು ಎಂಬ ಉದ್ದೇಶದಿಂದಲೇ ಫಡ್ನವಿಸ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು ಎಂಬ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಅವರ ಹೇಳಿಕೆ ಸತ್ಯಕ್ಕೆ ದೂರ ಎಂದು ಸ್ವತಃ ದೇವೇಂದ್ರ ಫಡ್ನವಿಸ್ ಸ್ಪಷ್ಟಪಡಿಸಿದ್ದಾರೆ.

ಹಂಗಾಮಿ ಮುಖ್ಯಮಂತ್ರಿಯಾಗಿ ತಾವು ಕೇಂದ್ರ ಸರ್ಕಾರಕ್ಕೆ ಯಾವುದೇ ಹಣವನ್ನು ಹಿಂದಿರುಗಿಸಿಲ್ಲ ಮತ್ತು ಯಾವುದೇ ನೀತಿ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ ಎಂದು ಫಡ್ನವಿಸ್ ತಿಳಿಸಿದ್ದಾರೆ.

ಬುಲೆಟ್ ಟ್ರೈನಿಗಾಗಿ ತೆಗೆದಿರಿಸಿದ್ದ ಬಹುಮೊತ್ತದ ಅನುದಾನದ ಮೇಲೆ ಸೋನಿಯಾ ಗಾಂಧಿ ಕಣ್ಣಿತ್ತು. ಶಿವಸೇನೆ ಕೈಕೊಡುವುದರ ಅರಿವಿರದ ಬಿಜೆಪಿ, ತಮ್ಮ ಸರ್ಕಾರ ಬಂದಾಗ ಅದನ್ನು ಸದುಪಯೋಗಪಡಿಸಿಕೊಳ್ಳುವ ಆಶಯ ಹೊಂದಿತ್ತು. ಆದರ ಶಿವಸೇನಾದ ಕಣ್ಣೂ ಆ ಹಣದ ಮೇಲೆ ಬಿದ್ದಾಗ ಅದು ತನ್ನ ದಾರಿ ಬದಲಿಸಿತು. ಬಿಜೆಪಿಯೊಡನೆ ಇದ್ದರೆ ಆ ದುಡ್ಡು ತಮಗೆ ಸಿಗುವುದಿಲ್ಲ ಎಂಬ ಸತ್ಯದ ಅರಿವಿದ್ದ ಕಾರಣ ಆಟ ಶುರುಮಾಡಿತು. ಹೀಗಾಗಿ ಫಡ್ನವಿಸ್ ಚಾಣಕ್ಯ ನೀತಿಯಿಂದ ಅಜಿತ್ ಪವಾರ್ ಜತೆ ಡೀಲ್ ಮಾಡಿಕೊಂಡು ಮುಖ್ಯಮಂತ್ರಿಯಾಗಿ ಮೂರು ದಿನಗಳಲ್ಲಿ ಯಶಸ್ವಿಯಾಗಿ ಕೇಂದ್ರದ ಬೊಕ್ಕಸಕ್ಕೆ ಆ ಹಣವನ್ನು ವರ್ಗಾಯಿಸಿದ್ದರು ಎಂದು ವಾಟ್ಸಾಪ್‌ನಲ್ಲಿ ನಕಲಿ ಸಂದೇಶ ಹರಿದಾಡುತ್ತಿದೆ.

ಯಾವುದೇ ಹಣ ಕಳಿಸಿಲ್ಲ

ಯಾವುದೇ ಹಣ ಕಳಿಸಿಲ್ಲ

'ಈ ಹೇಳಿಕೆ ಸಂಪೂರ್ಣವಾಗಿ ಸುಳ್ಳು. ಅಂತಹ ಯಾವುದೇ ಘಟನೆ ನಡೆದಿಲ್ಲ. ಬುಲೆಟ್ ರೈಲು ಯೋಜನೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರವು ಭೂಸ್ವಾಧೀನದ ಕಾರ್ಯ ಹೊರತುಪಡಿಸಿ ಬೇರೆ ಯಾವುದೇ ಪಾತ್ರ ನಿರ್ವಹಿಸಿಲ್ಲ' ಎಂದು ದೇವೇಂದ್ರ ಫಡ್ನವಿಸ್ ತಿಳಿಸಿದ್ದಾರೆ.

ಹಾಗೆಯೇ, ಕೇಂದ್ರ ಸರ್ಕಾರವು ಯಾವುದೇ ಹಣದ ವಾಪಸಾತಿಗಾಗಿ ಕೇಳಿಲ್ಲ ಮತ್ತು ಮಹಾರಾಷ್ಟ್ರ ಸರ್ಕಾರವು ಅಂತಹ ಯಾವುದೇ ಬೇಡಿಕೆಯಂತೆ ಅನುದಾನವನ್ನು ಕೂಡ ಮರಳಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಹೇಳಿಕೆ ಸತ್ಯವಲ್ಲ

ಹೇಳಿಕೆ ಸತ್ಯವಲ್ಲ

ಅನಂತ್ ಕುಮಾರ್ ಹೆಗಡೆ ನೀಡಿದ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ವಾಟ್ಸಾಪ್‌ನಿಂದ ಫಾರ್ವರ್ಡ್ ಆದ ಸಂದೇಶವನ್ನೇ ನಂಬಿ ಅದರ ಆಧಾರದಲ್ಲಿ ಅವರು ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ.

ಎನ್‌ಸಿಪಿ ಜತೆ ಸೇರಿ ರಚಿಸಲಾದ ಅಲ್ಪಾಯುಷಿ ಸರ್ಕಾರದಲ್ಲಿ ಫಡ್ನವಿಸ್ ಸರ್ಕಾರ ತೆಗೆದುಕೊಂಡು ಏಕೈಕ ನಿರ್ಧಾರವೆಂದರೆ ರೈತರಿಗೆ ಅನುದಾನ ಬಿಡುಗಡೆ ಮಾಡಿರುವುದು ಮಾತ್ರ ಎಂದು ತಿಳಿಸಿವೆ.

ವಾಟ್ಸಾಪ್ ಸಂದೇಶ ನಂಬಿದ್ದ ಹೆಗಡೆ

ವಾಟ್ಸಾಪ್ ಸಂದೇಶ ನಂಬಿದ್ದ ಹೆಗಡೆ

ಬಹುಮತ ಸಾಬೀತುಪಡಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಅಜಿತ್ ಪವಾರ್ ಉಪ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ನಂತರ ಫಡ್ನವಿಸ್ ಕೂಡ ಮುಖ್ಯಮಂತ್ರಿ ಹುದ್ದೆ ತ್ಯಜಿಸಿದ್ದರು. ಅದರ ಮರುದಿನವೇ ವಾಟ್ಸಾಪ್‌ನಲ್ಲಿ ಈ ಸಂದೇಶ ಹರಿದಾಡತೊಡಗಿತ್ತು. ಇಂಗ್ಲಿಷ್ ಭಾಷೆಯಲ್ಲಿ ಬಂದ ಈ ಸಂದೇಶವನ್ನು ಕನ್ನಡಕ್ಕೆ ಅನುವಾದ ಮಾಡಲಾಗಿದೆ ಎಂದು ಬರೆಯಲಾಗಿತ್ತು. ಅನಂತ್ ಕುಮಾರ್ ಹೆಗಡೆ ಕೂಡ ಈ ವಾಟ್ಸಾಪ್ ಸಂದೇಶವನ್ನೇ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದರು.

ಅನಂತ್ ಕುಮಾರ್ ಹೆಗಡೆ ಹೇಳಿದ್ದೇನು?

ಅನಂತ್ ಕುಮಾರ್ ಹೆಗಡೆ ಹೇಳಿದ್ದೇನು?

'ಮಹಾರಾಷ್ಟ್ರದಲ್ಲಿ ಬಿಜೆಪಿ ಬಹುಮತ ಇಲ್ಲದಿದ್ದರೂ 80 ತಾಸು ನಮ್ಮವರು ಮುಖ್ಯಮಂತ್ರಿ ಆದರು. ಬಹುಮತ ಇಲ್ಲದಿದ್ದರೂ ಏಕೆ ಸಿಎಂ ಆದರು ಅನ್ನುವ ಪ್ರಶ್ನೆ ಎಲ್ಲರದ್ದಾಗಿತ್ತು. ಇದಕ್ಕೆ ಕಾರಣ ಮುಖ್ಯಮಂತ್ರಿ ನಿಯಂತ್ರಣದಲ್ಲಿದ್ದ 40 ಸಾವಿರ ಕೋಟಿ ಹಣ. ಕಾಂಗ್ರೆಸ್, ಎನ್‌ಸಿಪಿ, ಶಿವಸೇನಾ ಅಧಿಕಾರಕ್ಕೆ ಬಂದರೆ ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದರು. ಅದಕ್ಕಾಗಿಯೇ ನಾಟಕ ಮಾಡಿಯಾದರೂ ಅಧಿಕಾರಕ್ಕೆ ಬಂದು ಹಣ ತಲುಪಿಸುವ ಜಾಗದಲ್ಲಿ ತಲುಪಿಸಿದ್ದೇವೆ. ಸಂಪೂರ್ಣ ಹಣವನ್ನು ಕೇಂದ್ರಕ್ಕೆ ವಾಪಸ್ ಕಳುಹಿಸಲಾಗಿದೆ' ಎಂದು ಹೆಗಡೆ ಹೇಳಿಕೆ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+