ಮುಂಬೈ : ಬ್ರಿಟಿಷ್ ಯುವತಿ ಮೇಲೆ ಲೈಂಗಿಕ ಕಿರುಕುಳ

ಬ್ರಿಟಿಷ್ ಯುವತಿ ತನ್ನ ಇಬ್ಬರು ಸ್ನೇಹಿತೆಯರೊಂದಿಗೆ ಆಟೋದಲ್ಲಿ ಬರುತ್ತಿದ್ದಾಗ ರಸ್ತೆ ದಾಟುತ್ತಿದ್ದ ಗೌರವ್ ಗುಪ್ತಾ ಆಕೆಯ ಅಂಗವನ್ನು ಸ್ಪರ್ಶಿಸಿದ್ದಾನೆ ಮತ್ತು ಪರಾರಿಯಾಗಲು ಯತ್ನಿಸಿದ್ದಾನೆ. ಯುವತಿ ಕೂಗಿಕೊಂಡಾಗ ಸಾರ್ವಜನಿಕರೊಂದಿಗೆ ಮೂವರು ಪೊಲೀಸರು ಕೂಡ ಗುಪ್ತಾನನ್ನು ಬೆನ್ನತ್ತಿ ಹಿಡಿದಿದ್ದಾರೆ. ಸಾರ್ವಜನಿಕರು ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಗೌರವ್ ಗುಪ್ತಾ ಬಹುರಾಷ್ಟ್ರೀಯ ಉಡುಗೊರೆ ಉತ್ಪಾದನಾ ಸಂಸ್ಥೆಯೊಂದರಲ್ಲಿ ಸೇಲ್ಸ್‌ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಅದೇ ಸ್ಥಳಕ್ಕೆ ಕೆಲಸಕ್ಕೆಂದು ಬಂದಿದ್ದಾಗ ಅಚಾನಕ್ಕಾಗಿ ಮಹಿಳೆಯನ್ನು ತನ್ನ ಕೈ ಸ್ಪರ್ಶಿಸಿತು ಎಂದು ಗುಪ್ತಾ ಪೊಲೀಸರಿಗೆ ಹೇಳಿದ್ದಾನೆ. ಪೊಲೀಸರು ಜಾಗೃತರಾಗಿದ್ದರಿಂದ ಆತನನ್ನು ಸುಲಭವಾಗಿ ಬಂಧಿಸಲು ಸಾಧ್ಯವಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿ ನಾಸಿರ್ ಪಠಾಣ್ ಹೇಳಿದ್ದಾರೆ.
ಒಶಿವಾರಾ ಪೊಲೀಸ್ ಠಾಣೆಯಲ್ಲಿ ಗೌರವ್ ಗುಪ್ತಾ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಲೈಂಗಿಕ ಕಿರುಕುಳಕ್ಕೊಳಗಾದ ಯುವತಿ ಮತ್ತು ಆಕೆಯ ಇಬ್ಬರು ಸ್ನೇಹಿತೆಯರ ಹೇಳಿಕೆಗಳನ್ನೂ ಪಡೆದುಕೊಳ್ಳಲಾಗಿದೆ. ಪ್ರವಾಸಿ ವೀಸಾ ಹೊಂದಿರುವ ಯುವತಿಯರು ಕಳೆದ ಒಂದು ವರ್ಷದಿಂದ ಮುಂಬೈನಲ್ಲಿ ವಾಸಿಸುತ್ತಿದ್ದು, ಹಿಂದಿ ಚಿತ್ರಗಳಲ್ಲಿ ಸಹ ನರ್ತಕಿಯರಾಗಿ ಕೆಲಸ ಮಾಡುತ್ತಿದ್ದಾರೆ.
ಕಳೆದ ತಿಂಗಳು ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಕೂಡ ಇದೇ ರೀತಿ ಒಂಟಿ ಮಹಿಳೆಯೊಬ್ಬಳು ಕಾಮುಕ ಯುವಕರಿಂದ ಜನನಿಬಿಡ ಪ್ರದೇಶದಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಳು. ಮೂವರು ಯುವಕರು ಆಕೆಯ ಮೇಲೆ ದೌರ್ಜನ್ಯವೆಸಗಿದ್ದರು. ಆ ಘಟನೆಯನ್ನು ಸ್ಥಳೀಯ ಪತ್ರಿಕೆಯೊಂದರ ಪತ್ರಕರ್ತರೊಬ್ಬರು ಫ್ಲೈಓವರ್ ಮೇಲಿಂದ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರು.












Click it and Unblock the Notifications