ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನೆ ಮೈತ್ರಿ?
ಮುಂಬೈ, ಅ. 20 : ಮಹಾರಾಷ್ಟ್ರ, ಹರ್ಯಾಣ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟಗೊಂಡಿದೆ. ಹರ್ಯಾಣದಲ್ಲಿ ಯಾರ ಬೆಂಬಲವೂ ಇಲ್ಲದೆ ಬಿಜೆಪಿ ಸರ್ಕಾರ ರಚನೆ ಮಾಡಲಿದೆ. ಆದರೆ, ಮಹಾರಾಷ್ಟ್ರದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಸ್ಪಷ್ಟ ಬಹುಮತ ಲಭಿಸಿಲ್ಲ. ಆದ್ದರಿಂದ ಬಿಜೆಪಿಗೆ ಬೆಂಬಲ ನೀಡುವವರು ಯಾರು? ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ.
ಮಹಾರಾಷ್ಟ್ರ ವಿಧಾನಸಭೆಯ ಒಟ್ಟು 288 ಕ್ಷೇತ್ರಗಳ ಪೈಕಿ 123 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿದೆ. ಆದರೆ, ಸರಳ ಬಹುಮತಕ್ಕೆ 145 ಸೀಟುಗಳು ಅಗತ್ಯವಿದ್ದು, ಸರ್ಕಾರ ರಚನೆ ಮಾಡಲು ಬಿಜೆಪಿಗೆ ಇತರ ಪಕ್ಷಗಳ ಬೆಂಬಲ ಅನಿವಾರ್ಯವಾಗಿದೆ. ಹಳೆಯ ಮಿತ್ರ ಪಕ್ಷ ಶಿವಸೇನೆ 63 ಸ್ಥಾನ ಪಡೆದಿದ್ದು, ಇಬ್ಬರೂ ಸೇರಿಕೊಂಡು ಸರ್ಕಾರ ರಚಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. [ಚುನಾವಣೆ ಸೋಲು -ಗೆಲುವು ಯಾರು ಏನು ಹೇಳಿದ್ರು?]

ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲು ಬಾಹ್ಯ ಬೆಂಬಲ ನೀಡುವುದಾಗಿ 41 ಸ್ಥಾನ ಗಳಿಸಿರುವ ಎನ್‌ಸಿಪಿ ಹೇಳಿದೆ. ಎನ್‌ಸಿಪಿ ವರಿಷ್ಠ ಶರದ್‌ಪವಾರ್ ಅವರ ಆಪ್ತ ಪ್ರಫುಲ್ ಪಟೇಲ್, 'ಮಹಾರಾಷ್ಟ್ರಕ್ಕೆ ಸ್ಥಿರ ಸರ್ಕಾರ ಅಗತ್ಯವಿದೆ. ಆದ್ದರಿಂದ ಬಾಹ್ಯ ಬೆಂಬಲ ನೀಡುವುದಾಗಿ' ಹೇಳಿದ್ದಾರೆ. [ಮಹಾರಾಷ್ಟ್ರ, ಹರಿಯಾಣ ಫಲಿತಾಂಶ ಇಲ್ಲಿದೆ]
ಭಾನುವಾರ ರಾತ್ರಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಜೊತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಸರ್ಕಾರ ರಚನೆ ಸಂಬಂಧ ಮಾತುಕತೆ ನಡೆಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಸೋಮವಾರ ಮಹಾರಾಷ್ಟ್ರ ರಾಜಕೀಯ ದೆಹಲಿಗೆ ಸ್ಥಳಾಂತರಗೊಳ್ಳುವ ಸಾಧ್ಯತೆ ಇದ್ದು, ಅಂತಿಮ ತೀರ್ಮಾನ ಅಲ್ಲಿ ಕೈಗೊಳ್ಳುವ ಸಾಧ್ಯತೆ ಇದೆ.
ಬಿಜೆಪಿ ಜತೆಗಿನ 25 ವರ್ಷಗಳ ದೀರ್ಘಕಾಲೀನ ಮೈತ್ರಿ ಮುರಿದುಕೊಂಡಿದ್ದರೂ, ಚುನಾವಣೆ ನಂತರ ಮರು ಮೈತ್ರಿ ಕುರಿತಾಗಿ ಶಿವಸೇನೆ ಹೇಳುತ್ತಲೇ ಬಂದಿತ್ತು. ಆದ್ದರಿಂದ ಶಿವಸೇನೆ ಜತೆ ಸೇರಿ ಬಿಜೆಪಿ ಸರ್ಕಾರ ರಚಿಸಬೇಕು. ಎಂದು ಪಕ್ಷದ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅಭಿಪ್ರಾಯಪಟ್ಟಿದ್ದಾರೆ.
ಯಾರು ಸಿಎಂ : ಮಹಾರಾಷ್ಟ್ರದಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದರಿಂದ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಚರ್ಚೆಯಾಗುತ್ತಿದೆ. ದಿ.ಗೋಪಿನಾಥ್ ಮುಂಡೆ ಪುತ್ರಿ ಪಂಕಜಾ ಮುಂಡೆ ಹಾಗೂ ದೇವೇಂದ್ರ ಫಡ್ನವಿಸ್ ಅವರ ಹೆಸರು ಕೇಳಿಬರುತ್ತಿವೆ. ಆದರೆ, ಯಾರು ಸಿಎಂ ಎಂಬ ಗುಟ್ಟನ್ನು ಬಿಜೆಪಿ ಬಿಟ್ಟುಕೊಟ್ಟಿಲ್ಲ.












Click it and Unblock the Notifications