World Cup: ಸಣ್ಣ ಬುಕ್‌ಲೆಟ್‌ನಲ್ಲಿ ವಿಶ್ವಕಪ್ ಇತಿಹಾಸ, ಮಂಗಳೂರಿಗನ ವಿಭಿನ್ನ ಕ್ರಿಕೆಟ್ ಕ್ರೇಝ್ ಬಗ್ಗೆ ನೀವು ತಿಳಿಯಲೇಬೇಕು
ಮಂಗಳೂರು, ನವೆಂಬರ್, 06: ದೇಶದೆಲ್ಲೆಡೆ ಈಗ ಕ್ರಿಕೆಟ್ ತಾಪ ಆವರಿಸಿದೆ. ಎಲ್ಲೆಲ್ಲೂ ವಿಶ್ವಕಪ್ ಕ್ರಿಕೆಟ್‌ನದ್ದೇ ಮಾತು. ವರ್ಲ್ಡ್‌ಕಪ್ ಕ್ರಿಕೆಟ್ ಅಂದರೆ ಎಲ್ಲರಿಗೂ ಕ್ರೇಜ್. ಆದರೆ ಇಲ್ಲೊಬ್ಬರು ವಿಶಿಷ್ಟವಾದ ಕ್ರಿಕೆಟ್ ಕ್ರೇಝ್ ಹೊಂದಿದ್ದು, ಇವರು ಕ್ರೇಝ್ ಏನೆಂದು ಕೇಳಿದರೆ ನೀವೇ ಆಶ್ಚರ್ಯ ಪಡುವುದಂತೂ ಗ್ಯಾರಂಟಿ.
ಮಂಗಳೂರು ನಗರದ ಬೈಕಂಪಾಡಿ ಮೀನಕಳಿಯ ನಿವಾಸಿ ಗಣೇಶ್ ಮೆಂಡನ್ ಬೋಳೂರು ವಿಶ್ವಕಪ್ ಕ್ರಿಕೆಟ್‌ನ ವಿಶೇಷ ಆಸಕ್ತರು. ವಿಶ್ವಕಪ್ ಕ್ರಿಕೆಟ್ ಪಂದ್ಯ ಆರಂಭವಾದರೆ ಸಾಕು ಇವರು ವರ್ಲ್ಡ್ ಕಪ್‌ನ ಸವಿಸ್ತಾರ ಮಾಹಿತಿಯಿರುವ ಬುಕ್ ಲೆಟ್ ಅನ್ನು ಮುದ್ರಿಸಿ ಎಲ್ಲರಿಗೂ ಉಚಿತವಾಗಿ ಹಂಚುತ್ತಾರೆ. ಈ ಬಾರಿಯೂ 2,500 ಪ್ರತಿ ಬುಕ್ ಲೆಟ್ ಮಾಡಿ ಹಂಚಿದ್ದಾರೆ. ಇದರಲ್ಲಿ ವರ್ಲ್ಡ್ ಕಪ್‌ನ ಎಲ್ಲಾ ಪಂದ್ಯಾಟದ ಸಂಪೂರ್ಣ ಶೆಡ್ಯುಲ್ ವಿವರವನ್ನು ನೀಡಲಾಗಿದೆ.

ಯಾವ ಯಾವ ತಂಡದೊಂದಿಗೆ ಮ್ಯಾಚ್ ದಿನ, ಸಮಯ ಹಾಗೂ ಎಲ್ಲಿ ನಡೆಯಲಿದೆ ಎಂಬ ಮಾಹಿತಿ ನೀಡಲಾಗಿದೆ. ಅಲ್ಲದೆ ಈವರೆಗೆ ವರ್ಲ್ಡ್ ಕಪ್‌ನಲ್ಲಿ ಗೆದ್ದು ಬೀಗಿದವರ ವಿವರದಿಂದ ಹಿಡಿದು, ಸ್ಕೋರ್ ವಿವರಗಳು, ವರ್ಲ್ಡ್‌ಕಪ್ ಯಾವ ವರ್ಷ ನಡೆದಿದೆ, ವಿಕೆಟ್ ಪಡೆದ ವಿವರ, ಬಾಲ್ ವಿವರಗಳು ಸೇರಿದಂತೆ ಸವಿವರವಾದ ಮಾಹಿತಿಯಿದೆ.
ಜೊತೆಗೆ 1975ರಿಂದ 2023ರವರೆಗಿನ ವರ್ಲ್ಡ್ ಕಪ್ ಕ್ರಿಕೆಟ್‌ನಲ್ಲಿ ಭಾಗವಹಿಸಿರುವ ಇಂಡಿಯಾ ಟೀಮ್‌ನ ಆಟಗಾರರ ವಿವರಗಳನ್ನು ನೀಡಲಾಗಿದೆ. ಹೀಗೆ ಸವಿವರ ಮಾಹಿತಿಯ ಈ ಬುಕ್ ಲೆಟ್ ಅನ್ನು ಆರ್ಟ್ ಪೇಪರ್‌ನಲ್ಲಿ ಮುದ್ರಿಸಲಾಗಿದೆ. ಅಂಗೈ ಅಗಲ ಗಾತ್ರದ ಈ ಬುಕ್ ಲೆಟ್ ಅನ್ನು ಆರಾಮವಾಗಿ ಪಾಕೆಟ್‌ನಲ್ಲಿಟ್ಟು ಕೊಳ್ಳಬಹುದು. ಬೇಕಾದಾಗ ಮಾಹಿತಿಯನ್ನು ನೋಡಬಹುದು.
ಈ ಬುಕ್ ಲೆಟ್‌ಗೆ ಯಾವ ಹಣವನ್ನು ಪಡೆಯದೆ ಗಣೇಶ ಮೆಂಡನ್ ಅವರು ಉಚಿತವಾಗಿ ನೀಡುತ್ತಾರೆ. ಈ ಬುಕ್ ಲೆಟ್ ಪ್ರಿಂಟ್‌ಗೆ ಆ್ಯಡ್ ಪಡೆದು ಹಣ ಹೊಂದಿಸುತ್ತಾರೆ. ಅಂಗಡಿ ಅಂಗಡಿಗಳಿಗೆ, ಕ್ರಿಕೆಟ್ ಕ್ರೇಝ್ ಹೊಂದಿದವರಿಗೆ, ಕ್ರೇಝ್ ಇಲ್ಲದವರಿಗೂ ಹಂಚುತ್ತಾರೆ. ಯಾಕೆಂದರೆ ಎಲ್ಲರಿಗೂ ವರ್ಲ್ಡ್ ಕಪ್ ಕ್ರಿಕೆಟ್ ವೀಕ್ಷಿಸಬೇಕು. ಭಾರತ ತಂಡ ಜಯಿಸಬೇಕೆನ್ನುದೇ ಇದರ ಹಿಂದಿನ ಉದ್ದೇಶ ಎಂದು ಗಣೇಶ್ ಮೆಂಡನ್ ಹೇಳುತ್ತಾರೆ.
ಇದೇ ರೀತಿ ಅವರು ವಲ್ಡ್ ಕಪ್, ಫುಟ್ ಬಾಲ್ ಮ್ಯಾಚ್ ಸಂದರ್ಭದಲ್ಲೂ ಬುಕ್‌ಲೆಟ್ ಮಾಡಿ ಹಂಚುತ್ತಾರೆ ಗಣೇಶ್ ಮೆಂಡನ್. ಇದಲ್ಲದೆ ಉರಗ ರಕ್ಷಣೆಯಲ್ಲೂ ಸದಾ ಮುಂದಿರುವ ಇವರು, ಶಾಲೆ ತೊರೆದು ಮನೆಯಲ್ಲಿ ಉಳಿಯುವ ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಕಳುಹಿಸುವ ಪ್ರಯತ್ನವನ್ನು ಮಾಡುತ್ತಾರೆ.












Click it and Unblock the Notifications