ಮಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ, ಕೆಲ ಕಾಲೇಜುಗಳಿಗೆ ರಜೆ ಘೋಷಣೆ

ಮಂಗಳೂರು, ಜೂನ್‌, 07: ಮುಗಾರು ಮಳೆ ವಿಳಂಬದಿಂದ ಮಂಗಳೂರು ನಗರದಲ್ಲಿ ನೀರಿಗೆ ಕೊರತೆ ಉಂಟಾಗಿದ್ದು, ಪರಿಣಾಮ ಇಲ್ಲಿನ ಜನತೆ ಭಾರೀ ತೊಂದರೆಗೆ ಒಳಗಾಗಿದ್ದಾರೆ‌. ಈ ಹಿನ್ನೆಲೆಯಲ್ಲಿ ಎಎಂಆರ್ ಡ್ಯಾಂನಿಂದ ಈಗಾಗಲೇ ನೀರು ಬಿಡಲಾಗಿದ್ದು, ಇದರಿಂದ ತುಂಬೆ ಡ್ಯಾಂನಲ್ಲಿ 4 ಮೀಟರ್ ನೀರು ತುಂಬಲಿದೆ. ಮತ್ತೊಂದೆಡೆ ನೀರಿನ ಕೊರತೆ ಹಿನ್ನೆಲೆ ಕೆಲ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿವರ್ಷ ಜೂನ್ ತಿಂಗಳಿನಲ್ಲಿ ಮಳೆ‌ ಇಲ್ಲದೆ ಬರ ಬರುತ್ತದೆ. ಆದರೆ ಈ ಬಾರಿ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಮಳೆ ನಿರೀಕ್ಷಿತ ಸಮಯಕ್ಕೆ ಬಂದಿಲ್ಲ. ಅಲ್ಲದೆ ಈಗಾಗಲೇ ಸುಡುಬಿಸಿಲಿನಿಂದ ಜನರು ತತ್ತರಿಸುತ್ತಿದ್ದು, ಕುಡಿಯುವ ನೀರಿಗೂ ಎಲ್ಲೆಡೆ ಹಾಹಾಕಾರ ಉಂಟಾಗಿದೆ. ಸದ್ಯ ತುಂಬೆ ಡ್ಯಾಂನಲ್ಲಿ 1.86 ಮೀಟರ್‌ ಮಟ್ಟಕ್ಕೆ ನೀರು ಇಳಿದಿದೆ. ಪರಿಣಾಮ ಮಂಗಳೂರು ನಗರದಲ್ಲಿ ನೀರಿನ ಸಮಸ್ಯೆ ಉಂಟಾಗಿದೆ.

Water crisis in Mangaluru, holiday announced for some colleges

ಕಳೆದ ಎರಡು ದಿನಗಳ ಕಾಲ ಪೈಪ್ ಲೈನ್ ಹಾಗೂ ಮೋಟಾರ್ ರಿಪೇರಿ ಕಾಮಗಾರಿ ಹಿನ್ನೆಲೆ ಎರಡು ದಿನಗಳಿಂದ ನೀರು ಪೂರೈಕೆ ಆಗದೆ ಸಮಸ್ಯೆ ಉಂಟಾಗಿತ್ತು. ಆದರೂ ಜಿಲ್ಲಾಡಳಿತ ಶಾಲಾ, ಕಾಲೇಜು ಸೇರಿ ಎಲ್ಲಾ ಕಡೆ ನೀರು ಪೂರೈಸಲು ವ್ಯವಸ್ಥೆ ಮಾಡಲಾಗುತ್ತಿದೆ‌. ಆದರೂ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ.

ಖಾಸಗಿ ಬೋರ್ ವೆಲ್ ಮೂಲಕ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಟ್ಯಾಂಕರ್ ಮೂಲಕವೂ ನೀರಿನ ಪೂರೈಕೆ ಆಗುತ್ತಿದೆ. ಹವಾಮಾನ ವರದಿಯಂತೆ ಮೂರ್ನಾಲ್ಕು ದಿನ ಮಳೆ ಆಗುವ ಮುನ್ಸೂಚನೆ ಇದೆ. ಈ ಮೂಲಕ ನೀರಿನ ಸಮಸ್ಯೆ ಬಗೆಹರಿಯಬಹುದೆಂದು ನಿರೀಕ್ಷಿಸಲಾಗಿದೆ.

ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಮಂಗಳೂರಿನಲ್ಲಿ ನೀರಿಗೆ ಭಾರೀ ಸಂಕಷ್ಟ ತಲೆದೋರಿದೆ. ಇದೀಗ ನೀರಿನ ಸಮಸ್ಯೆಯನ್ನು ಎದುರಿಸಲಾಗದೆ ಮಂಗಳೂರಿನ ವಿವಿ ಕಾಲೇಜಿಗೆ ಆಡಳಿತ ಮಂಡಳಿ ರಜೆ ಘೋಷಿಸಿದೆ. ಮತ್ತೊಂದೆಡೆ ಪದವಿ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿದ ಕಾಲೇಜು ಆಡಳಿತಯು ಸದ್ಯ ಎಲ್ಲಾ ಪದವಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ನಡೆಸಲಿದೆ. ಶೌಚಾಲಯ ಹಾಗೂ ಇತರೆ ಉಪಯೋಗಕ್ಕೆ ನೀರಿನ ಕೊರತೆಯಾಗಿದ್ದು, ಸುಮಾರು 1,800 ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ನೀರಿನ ಸಮಸ್ಯೆಯಿಂದ ರಜೆ ಘೋಷಣೆ ಮಾಡಲಾಗಿದೆ. ಕೆಲವೆಡೆ ಅರ್ಧ ದಿನ ಮಾತ್ರ ತರಗತಿಗಳು ನಡೆಯುತ್ತಿವೆ. ಕೆಲ ಕಾಲೇಜುಗಳಲ್ಲಿ ಆನ್‌ಲೈನ್ ತರಗತಿ ನಡೆಸಲಾಗುತ್ತಿದೆ.

ಮಂಗಳೂರು ನಗರ, ಗ್ರಾಮಾಂತರ ಭಾಗದಲ್ಲಿ ರೇಷನಿಂಗ್‌ ಆಧಾರದಲ್ಲಿ ನೀರಿನ ಸರಬರಾಜು ಆಗುತ್ತಿರುವುದರಿಂದ ಮನೆಗಳು, ಕಚೇರಿಯೊಂದಿಗೆ ಶೈಕ್ಷಣಿಕ ಸಂಸ್ಥೆಗಳಲ್ಲೂ ನೀರಿಗಾಗಿ ಪರದಾಟ ಶುರುವಾಗಿದೆ. ಆದ್ದರಿಂದ ಶಾಲಾ - ಕಾಲೇಜುಗಳಿಗೆ ರಜೆ ಘೋಷಿಸುವ ನಿರ್ಧಾರಕ್ಕೆ ಆಡಳಿತ ಮಂಡಳಿ ಮುಂದಾಗುತ್ತಿದೆ.

ಅವಳಿನಗರದಲ್ಲೂ ನೀರಿನ ಕೊರತೆ

ಮತ್ತೊಂದೆಡೆ ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಕುಡಿಯುವ ನೀರಿಗಾಗಿ ದಿನವೂ ಜನರು ಸರ್ಕಸ್ ಮಾಡುತ್ತಿದ್ದಾರೆ. ಅದೆಷ್ಟೋ ಮನವಿ ಮಾಡಿದರೂ ಕುಡಿಯುವ ನೀರನ್ನು ಪಡೆಯಲು ಜನರಿಗೆ ಸಾಧ್ಯವಾಗುತ್ತಿಲ್ಲ. ಜಲಮಂಡಳಿಯ ಜವಾಬ್ದಾರಿಯನ್ನು ಖಾಸಗೀಕರಣದ ಮೂಲಕ ಎಲ್ ಆ್ಯಂಡ್ ಟಿ ಕಂಪನಿಗೆ ನೀಡಿದೆ. ಆದರೆ ಜನರ ಭವಣೆ ಮಾತ್ರ ಕಡಿಮೆ ಆಗಿಲ್ಲ. ಆದರೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಭರವಸೆ ಮಾತನ್ನು ಮಾತ್ರ ಪಾಲಿಕೆ ಇನ್ನೂ ಕೈ ಬಿಟ್ಟಿಲ್ಲ.

ಈಗಾಗಲೇ ಹೆಚ್ಚಿದ ತಾಪಮಾನದಿಂದ ಜನರು ಕಂಗಾಲಾಗಿದ್ದು, ಕುಡಿಯುವ ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹನಿ ಹನಿ ನೀರಿಗೂ ಹುಬ್ಬಳ್ಳಿ-ಧಾರವಾಡದಲ್ಲಿ ಹಾಹಾಕಾರ ಉಂಟಾಗಿದೆ. ಎಲ್ ಆ್ಯಂಡ್ ಟಿ ಕಂಪನಿಯ ಅವ್ಯವಸ್ಥೆಯಿಂದ ಜನರು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ನೀರು ಬರುತ್ತಿಲ್ಲ ಎನ್ನುವ ಸಮಸ್ಯೆ ಒಂದು ಕಡೆಯಾದರೇ, ಮತ್ತೊಂದೆಡೆ ಪಾಲಿಕೆಯ ಬೇಜವಾಬ್ದಾರಿಯಿಂದ ಜನರು ಬೇಸತ್ತಿದ್ದಾರೆ.

ಹುಬ್ಬಳ್ಳಿ-ಧಾರವಾಡದ ಬಹುತೇಕ ಕಡೆಗಳಲ್ಲಿ ಕುಡಿಯುವ ನೀರು ಬರುತ್ತಿಲ್ಲ. ಅಲ್ಲದೇ ನವನಗರದ ಕಡೆಯ ಕಾರ್ಮಿಕ ಕಾಲೋನಿ ಹಾಗೂ ಎಪಿಎಂಸಿಯಲ್ಲಿರುವ ಬಸವ ಕಾಲೋನಿಯಲ್ಲಿ ಕುಡಿಯಲು ನೀರು ಸಿಗುತ್ತಿಲ್ಲ. ಇದರಿಂದ ಜನರು ಬೀದಿಗೆ ಇಳಿದು ಹೋರಾಟ ಮಾಡುತ್ತಿದ್ದಾರೆ. ಏತನ್ಮಧ್ಯೆ ಮೊನ್ನೆಯಷ್ಟೇ ಚುನಾವಣೆ ಬಹಿಷ್ಕಾರ ಮಾಡಲು ಕೂಡ ಜನರು ಮುಂದಾಗಿರುವುದು ನಿಜಕ್ಕೂ ಚಿಂತಾಜನಕ ಸಂಗತಿಯಾಗಿದೆ ಎಂದು ಇಲ್ಲಿನ ನಿವಾಸಿ ದುರ್ಗಪ್ಪ ಅಸಮಾಧಾನ ವ್ಯಕ್ತಪಡಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+