ಕದ್ರಿ ಮಠದಲ್ಲಿ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ವಾಸ್ತವ್ಯ
ಮಂಗಳೂರು, ಅಕ್ಟೋಬರ್ 4: ಕೇರಳದಲ್ಲಿ ನಡೆಯುತ್ತಿರುವ 'ಜನರಕ್ಷಾ ಯಾತ್ರೆ'ಯಲ್ಲಿ ಭಾಗವಹಿಸಲು ಆಗಮಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇಂದು ಮಂಗಳೂರಿನಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.
ಕೇರಳದಲ್ಲಿ ನಡೆಯುತ್ತಿರುವ ಆರ್.ಎಸ್.ಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಿರಂತರ ಹತ್ಯೆಯನ್ನು ಖಂಡಿಸಿ ಬಿಜೆಪಿ ಆಯೋಜಿಸಿರುವ ಬೃಹತ್ ಜನರಕ್ಷಾ ಯಾತ್ರೆಯ ನೇತೃತ್ವವನ್ನು ಇಂದು ಯೋಗಿ ಆದಿತ್ಯನಾಥ್ ವಹಿಸಿದ್ದಾರೆ. ಸುಮಾರು 10 ಕಿಲೋ ಮೀಟರ್ ಉದ್ದದ ಪಾದಯಾತ್ರೆಯಲ್ಲಿ ಭಾಗವಹಿಸಿದ ನಂತರ ಯೋಗಿ ಆದಿತ್ಯನಾಥ ಮತ್ತೆ ಮಂಗಳೂರಿಗೆ ಮರಳಲಿದ್ದಾರೆ.

ಕದ್ರಿ ಯೋಗೇಶ್ವರ ಮಠದಲ್ಲಿ ವಾಸ್ತವ್ಯ
ಕೇರಳದಿಂದ ಹಿಂದಿರುಗುವ ಯೋಗಿ ಆದಿತ್ಯನಾಥ ಮಂಗಳೂರಿನ ಕದ್ರಿಯಲ್ಲಿರುವ ನಾಥ ಸಂಪ್ರದಾಯದ ಕದ್ರಿ ಯೋಗೇಶ್ವರ ಮಠದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಈ ಹಿನ್ನಲೆಯಲ್ಲಿ ಯೋಗೇಶ್ವರ ಮಠದಲ್ಲಿ ಚಟುವಟಿಕೆಗಳು ಚುರುಕುಗೊಂಡಿವೆ. ಮಠದ ಆವರಣದಲ್ಲಿ ಸ್ವಚ್ಚತಾ ಕಾರ್ಯ ನಡೆಯುತ್ತಿದ್ದು ಪೊಲೀಸ್ ಭದ್ರತೆಗೆ ವ್ಯವಸ್ಥೆ ಮಾಡಲಾಗಿದೆ.

ಮಠದಲ್ಲೇ ಭೋಜನ ಸ್ವೀಕಾರ
ಇಂದು ಮುಂಜಾನೆಯಿಂದಲೇ ಮಠದ ಆವರಣಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಂದು ರಾತ್ರಿ ಮಂಗಳೂರಿಗೆ ಆಗಮಿಸಿ ಯೋಗೇಶ್ವರ ಮಠದಲ್ಲಿ ವಾಸ್ತವ್ಯ ಹೂಡಲಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಲ್ಲಿಯೇ ಭೋಜನ ಸ್ವೀಕರಿಸಲಿದ್ದಾರೆ.

ನಾಥ ಸಂಪ್ರದಾಯದ ಮೊದಲ ಮುಖ್ಯಮಂತ್ರಿ
ನಾಥ ಸಂಪ್ರದಾಯದ ಯೋಗಿಗಳಲ್ಲೊಬ್ಬರು ಮುಖ್ಯಮಂತ್ರಿ ಸ್ಥಾನಕ್ಕೇರಿರುವುದು ಇದೇ ಮೊದಲು. ಈ ಹಿಂದೆ ಎರಡು ಬಾರಿ ಯೋಗಿ ಆದಿತ್ಯನಾಥ ಈ ಮಠಕ್ಕೆ ಭೇಟಿ ನೀಡಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಯೋಗಿ ಆದಿತ್ಯನಾಥ್ ಕದ್ರಿಯ ಯೋಗೇಶ್ವರ ಮಠಕ್ಕೆ ಭೇಟಿ ನೀಡುತ್ತಿದ್ದಾರೆ.

ಮಠದಲ್ಲಿ ಸಂಭ್ರಮದ ವಾತಾವರಣ
ಯೋಗಿ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಾಥ ಪಂಥದ ಕದ್ರಿಯಲ್ಲಿರುವ ಯೋಗೇಶ್ವರ ಮಠದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ನಾಥ ಸಂಪ್ರದಾಯದ ಮುಖ್ಯಸ್ಥರಾಗಿರುವ ಯೋಗಿ ಆದಿತ್ಯನಾಥರಿಗೂ ಮಂಗಳೂರಿನ ಈ ಕದ್ರಿ ಯೋಗೇಶ್ವರ ಮಠಕ್ಕೂ ಅವಿನಾಭಾವ ಸಂಬಂಧವಿದ್ದು 12 ವರ್ಷಕ್ಕೊಮ್ಮೆ ಇಲ್ಲಿ ನಡೆಯುವ ರಾಜರ ಆಯ್ಕೆಯಲ್ಲಿ ಗೋರಖ್ ಪುರ ಮಠ ಮಹತ್ವದ ಪಾತ್ರ ವಹಿಸುತ್ತದೆ. ಕಳೆದ ಬಾರಿ ಇಲ್ಲಿ ನಡೆದ ರಾಜರ ಪಟ್ಟಾಭಿಷೇಕಕ್ಕೆ ಆದಿತ್ಯನಾಥ ಆಗಮಿಸಿದ್ದರು.

ಮಠಾಧೀಶರ ಆಯ್ಕೆಯಲ್ಲಿ ಗೋರಖ್ ಪುರ ಪ್ರಮುಖ ಪಾತ್ರ
ಮಂಗಳೂರಿನ ನಾಥ ಸಂಪ್ರದಾಯದ ಯೋಗೇಶ್ವರ ಮಠದ ಮಠಾಧೀಶರನ್ನು ಅಥವಾ ರಾಜರನ್ನು ನೇಮಿಸುವಲ್ಲಿ ನಾಥ ಸಂಪ್ರದಾಯದ ಮೂಲಮಠ ಗೋರಖ್ ಪುರ ಹಾಗೂ ಅವದೂತ್ ಭೇಷ್ ಬಾರಹ ಪಂಥ ಯೋಗಿ ಮಹಾಸಭಾ ಮುಖ್ಯಪಾತ್ರವಹಿಸುತ್ತದೆ.
ಪ್ರತಿ 12 ವರ್ಷಕ್ಕೆ ಒಮ್ಮೆ ನಡೆಯುವ ಯೋಗೇಶ್ವರ ಮಠದ ಮಠಾಧೀಶರ ಅಥವಾ ನಾಥ ಸಂಪ್ರದಾಯದ ರಾಜನನ್ನು ಆಯ್ಕೆ ಮಾಡುವುದೇ ಗೋರಖ್ ಪುರ ಮಠದ ಮಠಾಧೀಶ. ಪ್ರಸ್ತುತ ಗೋರಖ್ ಪುರದ ಮಠದ ಮಠಾಧೀಶರಾಗಿರುವ ಯೋಗಿ ಆದಿತ್ಯನಾಥ ಕಳೆದ ಬಾರಿ ಯೋಗೇಶ್ವರ ಮಠದ ಮಠಾಧೀಶರ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.












Click it and Unblock the Notifications