'ತಾಕತ್ ಇದ್ರೆ ಸುನೀಲ್ ಕುಮಾರ್ ಕನ್ನಡದಲ್ಲೇ ಮತಯಾಚನೆ ಮಾಡಿ ಗೆಲ್ಲಲಿ'
ಮಂಗಳೂರು, ಅಕ್ಟೋಬರ್ 11: ತುಳುಭಾಷೆಯನ್ನು ರಾಜ್ಯದ ಅಧೀಕೃತ ಭಾಷೆಯನ್ನಾಗಿ ಮಾಡಬೇಕೆಂದು ತುಳು ಪರ ಸಂಘಟನೆಗಳು ಒತ್ತಾಯಿಸಿದೆ. ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿದ ತುಳು ಪರ ಸಂಘಟನೆಗಳು ಹಾಗೂ ತುಳುಚಿತ್ರ ರಂಗದ ಕಲಾವಿದರು, ಸರ್ಕಾರ ತುಳು ವಿರೋಧಿ ನೀತಿಯನ್ನು ಅನುಸರಿಸುತ್ತಿದೆ, ತುಳುನಾಡಿನಿಂದ ಆಯ್ಕೆಯಾದ ಜನಪ್ರತಿನಿಧಿಗಳು ತುಳು ಭಾಷೆಯನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಪ್ಪೆ ಬಾಸೆ ಪೊರುಂಬಾಟ ಕೂಟ ತುಳುನಾಡು ವತಿಯಿಂದ ಮಂಗಳೂರಿನ ಕ್ಲಾಕ್ ಟವರ್ ಮುಂಭಾಗದಲ್ಲಿ 'ಅಪ್ಪೆ ಬಾಸೆ ಮಾನಾದಿಗೆಗ್ ಪ್ರತಿಭಟನೆ'ಯಲ್ಲಿ ತುಳುಚಿತ್ರರಂಗದ ಕಲಾವಿದರು, ರಂಗಭೂಮಿ ನಟರು ಹಾಗೂ ತುಳುಪರ ಹೋರಾಟಗಾರರು ಭಾಗಿಯಾಗಿದ್ದರು.
ಕಾಂತಾರ ಚಿತ್ರದಲ್ಲಿ ಬಳಕೆಯಾದ ಹದಿನಾರು ವರ್ಷದ ಹಿಂದಿನ ತುಳು ಆಲ್ಬಮ್ ಸಾಂಗ್!
ಪ್ರತಿಭಟನೆಯಲ್ಲಿ ಮಾತನಾಡಿದ ತುಳುಪರ ಹೋರಾಟಗಾರ ಸುದರ್ಶನ್ ಸುರತ್ಕಲ್, ತುಳುನಾಡಿಗೆ ಅನ್ಯಾಯ ಮಾಡಿದ ಯಾರನ್ನೂ ಇಷ್ಟರವರೆಗೆ ದೈವಗಳು ಬಿಟ್ಟಿಲ್ಲ. ತುಳುನಾಡಿನ ಜೀವನದಿ ನೇತ್ರಾವತಿ ನದಿ ತಿರುವು ಯೋಜನೆ ತಂದ ಸಂದರ್ಭ ಹೋರಾಟಗಾರರು ದೈವದ ಮುಂದೆ ಪ್ರಾರ್ಥಿಸಿದ್ದರು. ಈ ಯೋಜನೆ ತಂದ ಇಬ್ಬರು ರಾಜಕೀಯ ನಾಯಕರು ಈಗ ಮೂಲೆಗುಂಪಾಗಿದ್ದಾರೆ. ಆರ್ಟಿಕಲ್ 347ರ ಪ್ರಕಾರ ತುಳುಭಾಷೆಯನ್ನು ರಾಜ್ಯ ಅಧಿಕೃತ ಭಾಷೆಯನ್ನಾಗಿ ಅಕ್ಟೋಬರ್ 25ರೊಳಗೆ ಮಾಡದಿದ್ದಲ್ಲಿ ತುಳುಭಾಷಿಗರು ಎಲ್ಲಾ ದೈವಸ್ಥಾನಗಳಿಗೆ ಹೋಗಿ ಸಚಿವರುಗಳನ್ನು ದೈವಗಳು ನೋಡಲೆಂದು ಪ್ರಾರ್ಥಿಸಬೇಕು ಎಂದು ಸುದರ್ಶನ ಸುರತ್ಕಲ್ ಸೂಚನೆ ನೀಡಿದ್ದಾರೆ. ಜೊತೆಗೆ ನವೆಂಬರ್ 1ರಂದು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಬಂದ್‌ಗೆ ಕರೆ ಕೊಡಬೇಕು ಎಂದಿದ್ದಾರೆ.
ಪ್ರತಿಭಟನೆಯನ್ನು ಉದ್ದೇಶಿಸಿ ತುಳು ರಂಗಭೂಮಿ ಹಾಗೂ ಸಿನಿಮಾ ನಿರ್ದೇಶಕ ವಿಜಯಕುಮಾರ್ ಕೊಡಿಯಾಲಬೈಲ್ ಮಾತನಾಡಿದ್ದು, ಕನ್ನಡ ಹಾಗೂ ತುಳು ಭಾಷೆ ತುಳುಭಾಷಿಗರ ಎರಡು ಕಣ್ಣುಗಳಿದ್ದಂತೆ. ಯಾವತ್ತೂ ನಾವು ಕನ್ನಡವನ್ನು ನಿರ್ಲಕ್ಷ್ಯ ಮಾಡುವುದಿಲ್ಲ. ನಮ್ಮ ನೆಲದಲ್ಲಿ ನಾವು ತುಳುವನ್ನೇ ಬಳಸುತ್ತೇವೆ.
ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರಿಸಲು ಅತೀ ಎತ್ತರದ ಪೋಸ್ಟ್ ಆಫೀಸ್ನಿಂದ ಪ್ರಧಾನಿಗೆ ಪತ್ರ
ಕರಾವಳಿಯಲ್ಲಿ ಕನ್ನಡವನ್ನು ಕಡ್ಡಾಯ ಮಾಡಲು ಹೊರಟಿರುವ ಸಚಿವ ಸುನಿಲ್ ಕುಮಾರ್ ಕಾರ್ಕಳದಲ್ಲಿ ಕನ್ನಡದಲ್ಲೇ ಮತಯಾಚನೆ ಮಾಡಿ ಗೆದ್ದು ಬರಲಿ. ಆಗ ನಾವು ಈ ತುಳು ಹೋರಾಟವನ್ನು ಕೈಬಿಡುತ್ತೇವೆ. ಈ ಪ್ರತಿಭಟನೆ ಯಲ್ಲಿ ಮುಂಚೂಣಿಯಲ್ಲಿರಬೇಕಾದ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ ಕತ್ತಲೆಸಾರ್ ಸರ್ಕಾರದ ಭಯದಿಂದ ಪ್ರತಿಭಟನೆಯಲ್ಲಿ ಭಾಗವಹಿಸಿಲ್ಲ. ತುಳುವಿನ ಉಳಿವಿಗಾಗಿ, ತುಳುವಿನ ಗೌರವ ಕ್ಕಾಗಿ ಮತ್ತಷ್ಟು ಪ್ರತಿಭಟಿಸಲು ಸಿದ್ಧ ಎಂದು ಹೇಳಿದ್ದಾರೆ.
ತುಳುಪರ ಹೋರಾಟಗಾರ ದಿಲ್ ರಾಜ್ ಆಳ್ವ ಮಾತನಾಡಿ, ತುಳುಭಾಷೆಯ ಉಳಿವಿಗೆ ಯಾವುದೇ ರೀತಿಯಲ್ಲಿ ಕೊಡುಗೆಯನ್ನು ಕೊಡದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಗೆ ಮೊದಲಾಗಿ ಬೀಗ ಜಡಿಯಬೇಕು. ತುಳು 8ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಲು ತಾಂತ್ರಿಕ ದೋಷ ಇದೆ ಎಂದು ಜನಪ್ರತಿನಿಧಿಗಳು ಹೇಳುತ್ತಿದ್ದರು. ಆದರೆ ಈವರೆಗೆ ಅದು ಸರಿಯಾಗಲೇ ಇಲ್ಲ. ಇಂದು ಸಚಿವ ಸುನಿಲ್ ಕುಮಾರ್ ಕರ್ನಾಟಕದಲ್ಲಿ ತುಳು ಮಾತನಾಡಲೇ ಬಾರದು ಕನ್ನಡವನ್ನೇ ಬಳಸಬೇಕೆಂದು ಹೇಳುತ್ತಿದ್ದಾರೆ. ಈ ಮೂಲಕ ತುಳುವರನ್ನು ಕನ್ನಡಕ್ಕೆ ಮತಾಂತರ ಮಾಡುತ್ತಿದ್ದಾರೆ. ಆದ್ದರಿಂದ ತುಳು ಭಾಷೆ ಅಧಿಕೃತ ಭಾಷೆ ಆಗುವವರೆಗೂ ನಾವು ಹೋರಾಟ ಕೈಬಿಡುವುದಿಲ್ಲ ಎಂದು ಹೇಳಿದ್ದಾರೆ.