ಮಂಗಳೂರು: ಹಿಂದೂಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ; ವಿವಾದ ಹೊತ್ತಿಸಿದ ಜಾತ್ರೋತ್ಸವ ಬ್ಯಾನರ್
ಮಂಗಳೂರು, ಜನವರಿ 31: ಕರಾವಳಿಯಲ್ಲಿ ಆಗಾಗ ಧರ್ಮ ಧರ್ಮಗಳ ನಡುವೆ ವೈಷಮ್ಯಗಳು ಉಂಟಾಗುತ್ತಲೇ ಇರುತ್ತವೆ. ಈಗೊಂದು ಬ್ಯಾನರ್ ಕರಾವಳಿಯಲ್ಲಿ ಭಾರೀ ಚರ್ಚೆ ಮತ್ತು ಆಕ್ಷೇಪಕ್ಕೆ ಕಾರಣವಾಗಿದೆ. ಆಕ್ಷೇಪಾರ್ಹ ಬ್ಯಾನರ್‌ಗೆ ಮಾಜಿ ಸಚಿವರು ತೀವ್ರ ವಿರೋಧ ವ್ಯಕ್ತಪಡಿಸಿದರೆ, ಹಾಲಿ ಸಚಿವರು ಅದನ್ನು ಸಮರ್ಥಿಸಿಕೊಂಡಿದ್ದಾರೆ. ಉಳ್ಳಾಲದ ಶ್ರೀವೈದ್ಯನಾಥ ಕ್ಷೇತ್ರದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಅಳವಡಿಸಿದ ಬ್ಯಾನರ್ ಈಗ ಚರ್ಚೆಗೆ ಗ್ರಾಸವಾಗಿದೆ.
ಕರಾವಳಿ ಕೋಮು ಸೂಕ್ಷ್ಮ ಪ್ರದೇಶವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಾಗ ಕೋಮು ಸಾಮರಸ್ಯಕ್ಕೆ ಧಕ್ಕೆಯಾಗುವಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಸದ್ಯ ಈಗೊಂದು ಬ್ಯಾನರ್ ಭಾರೀ ಚರ್ಚೆ ಮತ್ತು ಆಕ್ಷೇಪಕ್ಕೆ ಹಾಗೂ ಪರ- ವಿರೋಧಕ್ಕೆ ಕಾರಣವಾಗಿದೆ.
ಮಂಗಳೂರು ಹೊರವಲಯದ ಉಳ್ಳಾಲ ಬೈಲ್‌ನಲ್ಲಿ ಹಾಕಲಾಗಿದ್ದ ಬ್ಯಾನರ್ ಈಗ ಚರ್ಚೆಗೆ ಕಾರಣವಾಗಿದೆ. ಉಳ್ಳಾಲದ ವೈದ್ಯನಾಥ ದೇವಸ್ಥಾನದಲ್ಲಿ, ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ವೈದ್ಯನಾಥ ಛತ್ರಪತಿ ಶಾಖೆ ವತಿಯಿಂದ "ನೀವು ನೀಡುವ ವ್ಯಾಪಾರ ದೈವ ದೇವರುಗಳ ಪಾವಿತ್ರ್ಯತೆ ಹಾಳು ಮಾಡುವ ಅಪಹಾಸ್ಯ ಮಾಡುವ ಸಮಾಜಕ್ಕೆ ಆಗದಿರಲಿ, ದೇವರನ್ನು ಪೂಜಿಸುವ ಹಿಂದೂ ಭಾಂದವರಿಗೆ ಆಗಲಿ ಈ ನೆಲ, ದೈವ- ದೇವರನ್ನು ಪೂಜಿಸುವವರಿಗೆ ಮಾತ್ರ ಇಲ್ಲಿ ವ್ಯಾಪಾರ ಮಾಡಲು ಅವಕಾಶ,' ಅಂತಾ ಬ್ಯಾನರ್ ಅಳವಡಿಸಲಾಗಿದೆ.

ಇಲ್ಲಿನ ಜಾತ್ರೆ ವೇಳೆ ಈ ಬ್ಯಾನರ್ ಹಾಕಲಾಗಿದ್ದು, ಉಳ್ಳಾಲ ಪೊಲೀಸರು ಅದನ್ನು ತಕ್ಷಣ ತೆರವುಗೊಳಿಸಿದ್ದರು. ಈ ಬ್ಯಾನರ್‌ನ ಉದ್ದೇಶ, ಹಿಂದೂಗಳ ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ವ್ಯಾಪಾರ ಮಾಡಲು ಬೇರೆ ಧರ್ಮದವರಿಗೆ ಮತ್ತು ದೇವರನ್ನು ನಂಬದವರಿಗೆ ಅವಕಾಶ ಕೊಡಬೇಡಿ ಎಂಬುದಾಗಿತ್ತು. ಬದಲಿಗೆ ಹಿಂದೂಗಳಿಗೆ ಮಾತ್ರ ನೀಡಿ ಅಂತಾ ಸಂದೇಶ ನೀಡಲಾಗಿತ್ತು.
ಇದನ್ನು ಮಾಜಿ ಸಚಿವ, ಮಂಗಳೂರು ಶಾಸಕ ಯು.ಟಿ. ಖಾದರ್ ವಿರೋಧಿಸಿದ್ದಾರೆ. ಈ ರೀತಿ ಕೋಮು ದ್ವೇಷ ಸಾರುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಬ್ಯಾನರ್ ಪ್ರಿಂಟ್ ಮಾಡುವವರ ಮೇಲೆ ಕೂಡ ಕ್ರಮ ಜರುಗಿಸಬೇಕು ಎಂದು ಕಿಡಿಕಾರಿದ್ದಾರೆ.
ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿರುವ ಯು.ಟಿ. ಖಾದರ್, ಇದು ಸಮಾಜದ್ರೋಹಿಗಳ ಕೃತ್ಯ. ರಾತ್ರಿ ಯಾರೂ ಇರದ ಸಂದರ್ಭದಲ್ಲಿ ಈ ಬ್ಯಾನರ್ ಅಳವಡಿಸಿದ್ದಾರೆ. ಈ ಬ್ಯಾನರ್ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಬ್ಯಾನರ್ ಪ್ರಿಂಟ್ ಮಾಡಿದವರ ಲೈಸೆನ್ಸ್ ರದ್ದು ಮಾಡಬೇಕೆಂದು ಯು.ಟಿ. ಖಾದರ್ ಆಗ್ರಹಿಸಿದ್ದಾರೆ.

ಇನ್ನು ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಈ ವಿಚಾರವನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ. ಇದರ ಬಗ್ಗೆ ಸಂಪೂರ್ಣ ವಿವರ ನನಗೆ ಗೊತ್ತಿಲ್ಲ. ಕಾರ್ಯಕರ್ತರಿಗೆ ಯಾವುದೇ ಹಂತದಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳುವುದು ನನ್ನ ಮೊದಲ ಆದ್ಯತೆ. ನಿಯಮಾವಳಿಗಳ ಮತ್ತು ಚೌಕಟ್ಟಿನ ಅಡಿಯಲ್ಲಿ ಯಾವುದಿದೆ ಅದನ್ನು ಎಲ್ಲಾ ಕಡೆ ಮಾಡುವ ಅವಕಾಶವನ್ನು ನಾನು ಮಾಡಿ ಕೊಡುತ್ತೇನೆ. ಕಾರ್ಯಕರ್ತರು ನಮ್ಮ ಪಾರ್ಟಿಯ ಜೀವಾಳ. ನಾನು ಕೂಡ ಸಾಮಾನ್ಯ ಕಾರ್ಯಕರ್ತನಾಗಿ ಬಂದಿದ್ದರಿಂದ ಅವರ ಮನಸ್ಥಿತಿ ಗೊತ್ತಿದೆ. ಕಾರ್ಯಕರ್ತರ ಧ್ವನಿಯಾಗಿ, ಸಚಿವನಾಗಿ ಕೆಲಸ ಮಾಡುತ್ತೇನೆ ಅಂತಾ ಹೇಳಿದ್ದಾರೆ.
Recommended Video
ಸದ್ಯ ಕರಾವಳಿಯಲ್ಲಿ ಆಗುವ ಬೆಳವಣಿಗೆ ರಾಜ್ಯ- ದೇಶವ್ಯಾಪಿ ಪರಿಣಾಮ ಬೀರುತ್ತದೆ. ಆದ್ದರಿಂದ ಕೋಮುದ್ವೇಷ ಹರಡುವ ಮುನ್ನವೇ ಸಂಬಂಧಪಟ್ಟವರು ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ.












Click it and Unblock the Notifications