Vande Bharat Express: ತಿರುವನಂತಪುರಂ-ಮಂಗಳೂರು ರೈಲು, ಪ್ರಯಾಣಿಕರಿಗೆ ಗುಡ್‌ನ್ಯೂಸ್
ಮಂಗಳೂರು, ಜನವರಿ 14: ಕೇರಳ ರಾಜ್ಯದ 2ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಶೀಘ್ರದಲ್ಲೇ 16 ಬೋಗಿಯ ರೈಲಾಗಿ ಪರಿವರ್ತನೆಯಾಗಲಿದೆ. ಪ್ರಸ್ತುತ 8 ಬೋಗಿಯನ್ನು ಹೊಂದಿರುವ ವಂದೇ ಭಾರತ್ ರೈಲಿನ ಬೋಗಿಗಳ ಸಂಖ್ಯೆ ಏರಿಕೆಯಾದರೆ ಸೀಟುಗಳ ಸಂಖ್ಯೆ 512 ಹೆಚ್ಚಾಗಲಿದ್ದು, ಇದರಿಂದಾಗಿ ಕರ್ನಾಟಕದ ಕರಾವಳಿ ಜನರಿಗೆ ಅನುಕೂಲಗಲಿದೆ. ಈಗಾಗಲೇ ರಾಜ್ಯದ ಮೊದಲ ವಂದೇ ಭಾರತ್ ರೈಲಿನ ಬೋಗಿಗಳ ಸಂಖ್ಯೆಯನ್ನು 20ಕ್ಕೆ ಏರಿಕೆ ಮಾಡಲಾಗಿದೆ.
ಸದ್ಯ 8 ಬೋಗಿಯನ್ನು ಹೊಂದಿರುವ ರೈಲು ನಂಬರ್ 20631/ 20632 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ತಿರುವನಂತಪುರಂ- ಮಂಗಳೂರು-ತಿರುವನಂತಪುರಂ ನಡುವೆ ವಯಾ ಅಲಾಪ್ಪುಝಾ ಸಂಚಾರವನ್ನು ನಡೆಸುತ್ತದೆ. ಇದು ಕೇರಳ ರಾಜ್ಯದ 2ನೇ ವಂದೇ ಭಾರತ್ ರೈಲಾಗಿದ್ದು, ಶೀಘ್ರವೇ ಇದು 16 ಬೋಗಿಯ ರೈಲಾಗಿ ಸಂಚಾರವನ್ನು ನಡೆಸಲಿದೆ.

ಭಾರತೀಯ ರೈಲ್ವೆ ಈಗಾಗಲೇ ಈ ವಂದೇ ಭಾರತ್ ರೈಲಿನ ಬೋಗಿಯನ್ನು 8 ರಿಂದ 16ಕ್ಕೆ ಏರಿಕೆ ಮಾಡಲು ಅನುಮತಿ ನೀಡಿದೆ. ಆದ್ದರಿಂದ ರೈಲಿನಲ್ಲಿ ಒಟ್ಟು 1024 ಸೀಟುಗಳು ಲಭ್ಯವಾಗಲಿವೆ. ಯಾವ ದಿನಾಂಕದಿಂದ ರೈಲಿಗೆ ಹೆಚ್ಚುವರಿ ಬೋಗಿ ಅಳವಡಿಕೆ ಮಾಡಲಾಗುತ್ತದೆ? ಎಂದು ಇನ್ನೂ ಘೋಷಣೆ ಮಾಡಿಲ್ಲ.
ಭಾರೀ ಬೇಡಿಕೆ ಇರುವ ರೈಲು: ತಿರುವನಂತಪುರಂ-ಮಂಗಳೂರು-ತಿರುವನಂತಪುರಂ ನಡುವೆ ವಯಾ ಅಲಾಪ್ಪುಝಾ ರೈಲಿಗೆ ಇರುವ ಬೇಡಿಕೆ, ಪ್ರಯಾಣಿಕರ ಸಂಖ್ಯೆ ಮುಂತಾದ ಅಂಶಗಳನ್ನು ಪರಿಶೀಲನೆ ನಡೆಸಿದ ಬಳಿಕ ಭಾರತೀಯ ರೈಲ್ವೆ ಈ ರೈಲು ಬೋಗಿಗಳ ಸಂಖ್ಯೆಯನ್ನು 16ಕ್ಕೆ ಏರಿಕೆ ಮಾಡಲು ಒಪ್ಪಿಗೆ ಕೊಟ್ಟಿದೆ.
ಕೆಲವೇ ದಿನಗಳ ಹಿಂದೆ ತಿರುವನಂತಪುರಂ-ಕಾಸರಗೋಡು (20634/ 20633) ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು 16 ರಿಂದ 20 ಬೋಗಿಯ ರೈಲಾಗಿ ಪರಿವರ್ತನೆ ಮಾಡಲಾಗಿದೆ. ಇದು ಕೇರಳ ರಾಜ್ಯದ ಮೊದಲ ವಂದೇ ಭಾರತ್ ರೈಲು. ಈಗ 2ನೇ ವಂದೇ ಭಾರತ್ ರೈಲಿಗೆ ಸಹ ಹೆಚ್ಚುವರಿ ಬೋಗಿ ಅಳವಡಿಕೆ ಮಾಡಲಾಗುತ್ತಿದೆ.
ದೇಶದ 38 ವಂದೇ ಭಾರತ್ ರೈಲುಗಳು ಸಂಪೂರ್ಣ ಭರ್ತಿಯಾಗಿ ಸಂಚಾರ ನಡೆಸಲು ಪ್ರಯಾಸ ಪಡುತ್ತಿವೆ. ದೇಶದಲ್ಲಿ 17 ವಂದೇ ಭಾರತ್ ರೈಲುಗಳು ಮಾತ್ರ ನಿರಂತರವಾಗಿ ಶೇ 100ರಷ್ಟು ಪ್ರಯಾಣಿಕರಿಂದ ತುಂಬಿ ಸಂಚಾರ ನಡೆಸುತ್ತಿವೆ. ಇವುಗಳಲ್ಲಿ ಕೇರಳದ ಎರಡು ರೈಲುಗಳು ಸೇರಿದೆ. ಅದರಲ್ಲಿ ತಿರುವನಂತಪುರಂ-ಮಂಗಳೂರು-ತಿರುವನಂತಪುರಂ ರೈಲು ಸಹ ಒಂದು.
ತಿರುವನಂತಪುರಂ-ಮಂಗಳೂರು-ತಿರುವನಂತಪುರಂ ನಡುವಿನ ವಯಾ ಅಲಾಪ್ಪುಝಾ ವಂದೇ ಭಾರತ್ ರೈಲು ಬೆಳಗ್ಗೆ 6.25ಕ್ಕೆ ಮಂಗಳೂರಿನಿಂದ ಹೊರಡಲಿದೆ, ತಿರುವನಂತಪುರಕ್ಕೆ ಮಧ್ಯಾಹ್ನ 3.05ಕ್ಕೆ ತಲುಪುತ್ತದೆ. ವಾಪಸ್ ಹೋಗುವ ಮಾರ್ಗದಲ್ಲಿ ರೈಲು ತಿರುವನಂತಪುರಂನಿಂದ ಸಂಜೆ 4.05ಕ್ಕೆ ಹೊರಟು, ಮಂಗಳೂರು ಸೆಂಟ್ರಲ್ ನಿಲ್ದಾಣವನ್ನು 12.40ಕ್ಕೆ ತಲುಪುತ್ತದೆ.
ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 12ರಂದು ಮಂಗಳೂರು ಸೆಂಟ್ರಲ್-ಕಾಸರಗೋಡು-ತಿರುವನಂತಪುರಂ ನಡುವಿನ ವಂದೇ ಭಾರತ್ ರೈಲು ಸೇವೆಗೆ ಚಾಲನೆ ನೀಡಿದ್ದರು. ಬಳಿಕ ಪ್ರಯಾಣಿಕರ ಒತ್ತಾಯದಂತೆ ಕಾಸರಗೋಡು-ತಿರುವನಂತಪುರಂ ನಡುವೆ ಸಂಚಾರ ನಡೆಸುತ್ತಿದ್ದ ರೈಲನ್ನು ಕರ್ನಾಟಕ ಕರಾವಳಿಯ ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಲಾಗಿತ್ತು.












Click it and Unblock the Notifications