ಅಣಬೆ ಫ್ಯಾಕ್ಟರಿಯಿಂದ ದುರ್ವಾಸನೆ: ಪ್ರತಿಭಟನೆಗಿಳಿದ ಜನರೊಂದಿಗೆ ಅಧಿಕಾರಿಯ ಉದ್ಧಟತನ
ಮಶ್ರೂಮ್ ಫ್ಯಾಕ್ಟರಿಯಿಂದ ಸ್ಥಳೀಯ ಮೂರ್ನಾಲ್ಕು ಕಿಲೋಮೀಟರ್‌ವರೆಗೆ ದುರ್ವಾಸನೆ ಬೀರುತ್ತಿದೆ. ಈ ಸಂಬಂಧ ಸ್ಥಳೀಯರು ಫ್ಯಾಕ್ಟರಿ ಗೇಟ್ ಮುಂಭಾಗ ಪ್ರತಿಭಟನೆ ನಡೆಸಿದ್ದು, ಸ್ಥಳಕ್ಕೆ ಬಂದ ವಾಯುಮಾಲಿನ್ಯ ನಿಯಂತ್ರಣ ಅಧಿಕಾರಿ ರವಿ ಜನರೊಂದಿಗೆ ಉದ್ಧಟತನ ಮೆರೆದಿದ್ದಾರೆ.
ಮಂಗಳೂರು, ಮಾರ್ಚ್ 21: ಅಣಬೆ ಫ್ಯಾಕ್ಟರಿ ವಿರುದ್ಧ ಆಕ್ರೋಶಗೊಂಡ ಜನರ ಜೊತೆ ಉದ್ಧಟತನದಿಂದ ವರ್ತಿಸಿದ ಅಧಿಕಾರಿಯ ವಿರುದ್ಧ ಜನರು ರೊಚ್ಚಿಗೆದ್ದ ಘಟನೆ ಮಂಗಳೂರಿನ ವಾಮಂಜೂರಿನಲ್ಲಿ ನಡೆದಿದೆ. ಮಂಗಳೂರಿನ ತಿರುವೈಲ್ ವಾರ್ಡ್‌ನ ವೈಟ್ ಗ್ರೋವ್ ಅಗ್ರಿ ಎಲ್ಎಲ್‌ಪಿ ಮಶ್ರೂಮ್ ಫ್ಯಾಕ್ಟರಿಯಿಂದ ದುರ್ವಾಸನೆ ಹೊರಹೊಮ್ಮುತ್ತಿದೆ.
ಮಶ್ರೂಮ್ ಫ್ಯಾಕ್ಟರಿಯಿಂದ ಸ್ಥಳೀಯ ಮೂರ್ನಾಲ್ಕು ಕಿಲೋಮೀಟರ್‌ವರೆಗೆ ದುರ್ವಾಸನೆ ಬೀರುತ್ತಿದೆ. ಈ ಸಂಬಂಧ ಸ್ಥಳೀಯರು ಫ್ಯಾಕ್ಟರಿ ಗೇಟ್ ಮುಂಭಾಗ ಪ್ರತಿಭಟನೆ ನಡೆಸಿದ್ದು, ಸ್ಥಳಕ್ಕೆ ಬಂದ ವಾಯುಮಾಲಿನ್ಯ ನಿಯಂತ್ರಣ ಅಧಿಕಾರಿ ರವಿ ಜನರೊಂದಿಗೆ ಉದ್ಧಟತನ ಮೆರೆದಿದ್ದಾರೆ ಎನ್ನಲಾಗಿದೆ.

ಸ್ಥಳೀಯರು ಅಧಿಕಾರಿಯೊಂದಿಗೆ ವಾಗ್ವಾದ ನಡೆಸಿದ್ದು, ಇಲ್ಲಿ ಜೀವನ ಮಾಡೋಕೆ ಸಾಧ್ಯವಿಲ್ಲ. ನೀವು ಒಂದು ವಾರ ಇದ್ದು ನೋಡಿ ಎಂದು ಹೇಳಿದ್ದಾರೆ. ಈ ವೇಳೆ ಅಧಿಕಾರಿ ಜನರ ಜೊತೆ ನಾನು ಇರುತ್ತೇನೆ. ಊಟ ಹಾಕ್ತೀರಾ ಎಂದು ಉದ್ಧಟತನದಿಂದ ಪ್ರಶ್ನಿಸಿದ್ದಾರೆ. ಈ ವೇಳೆ ಅಧಿಕಾರಿ ಮತ್ತು ಜನರ ನಡುವೆ ಮಾತಿನ ಚಕಮಕಿ ನಡೆದಿದೆ.
ಊರಿಡಿ ಗಬ್ಬೆದ್ದು ನಾರುವ ಮಶ್ರೂಮ್ ಫ್ಯಾಕ್ಟರಿಯ ದುರ್ನಾತದಿಂದ ನಮಗೆ ಬದುಕಲು ಸಾಧ್ಯವಿಲ್ಲ. ಊಟ ಮಾಡಲಾಗುತ್ತಿಲ್ಲ, ಉಬ್ಬಸ, ಕೆಮ್ಮು ರೋಗಗಳಿಗೆ ತುತ್ತಾಗುತ್ತಿದ್ದೇವೆ. ಈ ಫ್ಯಾಕ್ಟರಿಯನ್ನು ಇಲ್ಲಿಂದ ಎತ್ತಂಗಡಿ ಮಾಡಿಸಿ ಎಂದು ತಿರುವೈಲು ವಾರ್ಡ್‌ನ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ..

ಮಾಜಿ ಶಾಸಕ ಜೆ.ಆರ್.ಲೋಬೊ ಅವರ ಪಾಲುದಾರಿಕೆಯ ಒಡೆತನಕ್ಕೆ ಸೇರಿದ ವೈಟ್ ಗ್ರೋವ್ ಅಗ್ರಿ ಎಲ್ಎಲ್ ಪಿ ಮಶ್ರೂಮ್ ಫ್ಯಾಕ್ಟರಿ ವಿರುದ್ಧ ಜನ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರೊನಾ ಸಂದರ್ಭದಲ್ಲಿ ಚಾಕಲೇಟ್ ತಯಾರಕ ಸಂಸ್ಥೆ ಎಂದು ಈ ಫ್ಯಾಕ್ಟರಿಯನ್ನು ಸ್ಥಾಪಿಸಲಾಗಿತ್ತು. ಆ ಬಳಿಕ ಇಲ್ಲಿ ಮಶ್ರೂಮ್ ಬೆಳೆಸಲಾಗುತ್ತಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿತ್ಯವೂ ಸಂಜೆ 4ಗಂಟೆಯಾಗುತ್ತಿದ್ದಂತೆ ತಿರುವೈಲು ಸೇರಿದಂತೆ ವಾಮಂಜೂರು ವ್ಯಾಪ್ತಿಯಲ್ಲಿ ಗಬ್ಬು ವಾಸನೆ ಬರಲು ಆರಂಭವಾಗುತ್ತದೆ. ಸಹಿಸಲಸಾಧ್ಯವಾದ ವಾಸನೆಯ ಪರಿಣಾಮ ಈ ಫ್ಯಾಕ್ಟರಿ ವಿರುದ್ಧ ಕಳೆದ ಒಂದು ವರ್ಷಗಳಿಂದ ನಾಗರಿಕರು ಹೋರಾಟ ಮಾಡುತ್ತಿದ್ದಾರೆ. ಆದರೆ ಈ ಹೋರಾಟಕ್ಕೆ ಕಿಮ್ಮತ್ತಿನ ಬೆಲೆಯೂ ಸಿಕ್ಕಿಲ್ಲ.

ನಮ್ಮನ್ನು ಬದುಕಲು ಬಿಡಿ ಎಂದ ಮಾಜಿ ಶಾಸಕ
ಇತ್ತೀಚೆಗೆ ಫ್ಯಾಕ್ಟರಿಗೆ ಆಗಮಿಸಿದ ಮಾಜಿ ಶಾಸಕ ಲೋಬೊ ಅವರಲ್ಲಿಯೇ ನಾಗರಿಕರು ಮನವಿ ಮಾಡಿದಾಗ 'ತಾವು ಸಾಕಷ್ಟು ಬಂಡವಾಳ ವ್ಯಯ ಮಾಡಿ ಫ್ಯಾಕ್ಟರಿ ಮಾಡಿದ್ದೇವೆ. ನಮ್ಮನ್ನು ಬದುಕಲು ಬಿಡಿ' ಎಂದು ಹೇಳಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಆದರೆ ಸ್ಥಳೀಯರಿಗೆ ಬದುಕಲು ಬಿಡದೆ ಇವರು ಫ್ಯಾಕ್ಟರಿ ನಡೆಸುವುದು ಎಷ್ಟು ಸರಿ ಎಂದು ನಾಗರಿಕರು ಅಳಲು ತೋಡಿಕೊಂಡಿದ್ದಾರೆ.
ಈ ಫ್ಯಾಕ್ಟರಿಯನ್ನು ಸ್ಥಗಿತಗೊಳಿಸುವಂತೆ ಇಂದು ನಾಗರಿಕರು ವಾಮಂಜೂರಿನಿಂದ ಫ್ಯಾಕ್ಟರಿ ಗೇಟ್‌ವರೆಗೆ ಮೆರವಣಿಗೆ ಮಾಡಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಫ್ಯಾಕ್ಟರಿಗೆ ಬೀಗ ಜಡಿಯುವಂತೆ ಪ್ರತಿಭಟನಾಕಾರರು ಒಕ್ಕೊರಲಿನಿಂದ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಕೆಗೆ ಪ್ರಯತ್ನಿಸಿದರು. ಆದರೆ ಫ್ಯಾಕ್ಟರಿಗೆ ಬೀಗ ಜಡಿಯದೇ ನಾವು ಇಲ್ಲಿಂದ ತೆರಳುವುದಿಲ್ಲ ಎನ್ನುವ ಪ್ರತಿಭಟನಾಕಾರರು ಆಕ್ರೋಶಕ್ಕೆ ಮಣಿದ ಅಧಿಕಾರಿಗಳು ಗೇಟ್‌ಗೆ ಬೀಗ ಜಡಿದರು.
ಸ್ಥಳಕ್ಕೆ ಆಗಮಿಸಿದ ಮಾಲಿನ್ಯ ನಿಯಂತ್ರಣ ಅಧಿಕಾರಿ ಫ್ಯಾಕ್ಟರಿಯ ಒಳಗಡೆ ಪರಿಶೀಲನೆ ನಡೆಸಿ, ಸಂಪೂರ್ಣ ಫ್ಯಾಕ್ಟರಿಯನ್ನು ಮುಚ್ಚಿ ದುರ್ನಾತ ಹೊರಗಡೆ ಬೀರದಂತೆ ವ್ಯವಸ್ಥೆ ಮಾಡಬೇಕು. ಅಲ್ಲಿಯವರೆಗೆ ಫ್ಯಾಕ್ಟರಿ ಸ್ಥಗಿತಗೊಳಿಸಬೇಕು ಎಂದು ಫ್ಯಾಕ್ಟರಿ ಉಸ್ತುವಾರಿಗೆ ನಿರ್ದೇಶಿಸಿದರು. ಸದ್ಯ ವಾತವರಣ ಬೂದಿ ಮುಚ್ಚಿಕೆಂಡದಂತಿದ್ದು, ಮತ್ತೆ ಫ್ಯಾಕ್ಟರಿಯಿಂದ ದುರ್ವಾಸನೆ ಹೊರಬಂದರೆ ಫ್ಯಾಕ್ಟರಿ ಒಳಗೆ ನುಗ್ಗಿ ಪ್ರತಿಭಟನೆ ಮಾಡುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications