ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಟೀಲು ಯಕ್ಷಗಾನ ಮೇಳ ತಿರುಗಾಟ ಆರಂಭ; ಮುಂದಿನ 20 ವರ್ಷಕ್ಕೆ ಈಗಲೇ ಬುಕ್ಕಿಂಗ್

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ನವೆಂಬರ್ 30: ದಕ್ಷಿಣ ಕನ್ನಡ ಜಿಲ್ಲೆಯ ಜನರ ಭಾವನೆಗಳಲ್ಲಿ ಬಂಧಿಯಾಗಿರುವ, ಜಿಲ್ಲೆಯ ಅಧಿದೇವತೆ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಆರು ಯಕ್ಷಗಾನ ಮೇಳಗಳು ತಿರುಗಾಟ ಆರಂಭಿಸಿದೆ. ದೇವಳದ ಆರು ಮೇಳಗಳು ಸೋಮವಾರದಿಂದ ಜೈತ ಯಾತ್ರೆ ಆರಂಭಿಸಿದ್ದು, ಇನ್ನು‌ 167 ದಿನಗಳ ಕಾಲ ಕಟೀಲು ಮೇಳಗಳು ಯಕ್ಷಗಾನ ಪ್ರದರ್ಶನ ನೀಡಲಿದೆ.

ಮೇಳಗಳ ತಿರುಗಾಟ ಆರಂಭದ ಹಿನ್ನಲೆಯಲ್ಲಿ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಂಪ್ರದಾಯದಂತೇ ಗೆಜ್ಜೆಪೂಜೆಗಳು ನಡೆದಿದೆ. ದೇವಳದ ಮುಂಭಾಗದಲ್ಲಿ ಆರು ರಂಗ ಸ್ಥಳದಲ್ಲಿ ಆರು ಮೇಳದ ಕಲಾವಿದರು ಏಕಕಾಲದಲ್ಲಿ "ಪಾಂಡೇಶ್ವಮೇಧ' ಪ್ರಸಂಗವನ್ನು ಪ್ರದರ್ಶನ ಮಾಡಿದ್ದಾರೆ. ತಿರುಗಾಟದ ಆರಂಭದಲ್ಲಿ ಶ್ರೀದೇವಿ ಸಮ್ಮುಖದಲ್ಲಿ ಕಲಾವಿದರು ಗೆಜ್ಜೆ ಕಟ್ಟಿ ಕುಣಿದಿದ್ದಾರೆ. ಬಳಿಕ ಕಲಾವಿದರು ದೇವಸ್ಥಾನದ ಪ್ರಾಂಗಣದಲ್ಲಿನ ಆರು ರಂಗಸ್ಥಳಗಳಲ್ಲಿ ಯಕ್ಷಗಾನ ಪ್ರದರ್ಶಿಸಿದ್ದಾರೆ.

 ದುರ್ಗಾಪರಮೇಶ್ವರಿ ಯಕ್ಷಗಾನ ಪ್ರಿಯೆ

ದುರ್ಗಾಪರಮೇಶ್ವರಿ ಯಕ್ಷಗಾನ ಪ್ರಿಯೆ

ಕಟೀಲು ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಪ್ರಿಯೆ. ಆದ್ದರಿಂದ ಭಕ್ತರು ತಮ್ಮ ಬಯಕೆ, ಇಷ್ಟಾರ್ಥ ಸಿದ್ಧಿಗೆ ತಾಯಿಗೆ ಯಕ್ಷಗಾನ ಸೇವೆಯನ್ನು ನೀಡುತ್ತೇವೆ ಎಂದು ಹರಕೆ ಹೊರುತ್ತಾರೆ. ಯಕ್ಷಗಾನ ನಡೆಯುವಲ್ಲಿ ಕಟೀಲು ಶ್ರೀದೇವಿಯೇ ಬರುತ್ತಾಳೆ ಎಂಬ ನಂಬಿಕೆ ಭಕ್ತರಲ್ಲಿದೆ.

ನವೆಂಬರ್ 29ರಿಂದ ಆರಂಭವಾದ ಕಟೀಲು ಯಕ್ಷಗಾನ ಪ್ರದರ್ಶನ ಮೇ 25ರವರೆಗೆ ಅಂದರೆ ಸರಿಸುಮಾರು 167 ದಿನಗಳ ಕಾಲ ಪ್ರದರ್ಶನ ನಡೆದು ವರ್ಷದ ತಿರುಗಾಟ ಮುಕ್ತಾಯವಾಗುತ್ತದೆ.

 ಶ್ರೀ ದೇವಿ ಮಹಾತ್ಮೆ ಪ್ರಸಂಗಕ್ಕೆ ವಿಶೇಷ ಪ್ರಾಶಸ್ತ್ಯ

ಶ್ರೀ ದೇವಿ ಮಹಾತ್ಮೆ ಪ್ರಸಂಗಕ್ಕೆ ವಿಶೇಷ ಪ್ರಾಶಸ್ತ್ಯ

ಕಟೀಲು ಮೇಳದಲ್ಲಿ 'ಶ್ರೀ ದೇವಿ ಮಹಾತ್ಮೆ' ಪ್ರಸಂಗಕ್ಕೆ ವಿಶೇಷ ಪ್ರಾಶಸ್ತ್ಯವಿದ್ದು, ಒಂದೊಂದು ಮೇಳಗಳಲ್ಲಿಯೂ ವರ್ಷಕ್ಕೆ ಕನಿಷ್ಠ 90ರಿಂದ 100ರಷ್ಟು ಇದೇ ಪ್ರಸಂಗವನ್ನು ಆಡಿಸಲಾಗುತ್ತದೆ. ಉಳಿದಂತೆ "ಶ್ರೀದೇವಿ ಲಲಿತೋಪಾಖ್ಯಾನ', ಕಟೀಲು ಕ್ಷೇತ್ರ ಮಹಾತ್ಮೆ ಸೇರಿದಂತೆ ಎಲ್ಲಾ ಪೌರಾಣಿಕ ಪ್ರಸಂಗಗಳನ್ನು ಆಡಿಸಲಾಗುತ್ತದೆ.

ಕಟೀಲು ಶ್ರೀದುರ್ಗೆಗೆ ಯಕ್ಷಗಾನವೆಂದರೆ ಬಲು ಪ್ರೀತಿಯಾಗಿದ್ದರಿಂದ ದೇವಳದ ಕವಾಟ ಬಂಧನದ ಬಳಿಕ ದೇವಿಯು ಯಕ್ಷಗಾನ ನೋಡಲೆಂದು ತೆರಳುತ್ತಾಳೆಂಬುದು ಭಕ್ತರ‌ ನಂಬಿಕೆಯಾಗಿದೆ. ಆದ್ದರಿಂದ ಎಲ್ಲರೂ ತಮ್ಮ ಮನೆಗೆ ಕಟೀಲು ಮಾತೆ ಆಗಮಿಸಬೇಕೆಂದು ಯಕ್ಷಗಾನ ಪ್ರದರ್ಶನ ಮಾಡುವ ಮೂಲಕ ದೇವಿಯ ಆರಾಧನೆ ಮಾಡುತ್ತಾರೆ. ಕಟೀಲು ಯಕ್ಷಗಾನ ಮಂಡಳಿಯಲ್ಲಿ ಆರು ಮೇಳಗಳಿದ್ದರೂ, 20 ವರ್ಷಕ್ಕೆ ಯಕ್ಷಗಾನ ಮುಂಗಡ ಬುಕ್ಕಿಂಗ್ ಆಗಿದೆ ಅನ್ನುವುದು ಕರಾವಳಿಗರ ಯಕ್ಷಗಾನದ ಮೇಲಿನ ಶ್ರದ್ಧೆ, ಕಟೀಲು ದುರ್ಗೆಯ ಮೇಲಿನ ಭಕ್ತಿಗೆ ದ್ಯೋತಕವಾಗಿದೆ.

 ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ

ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ

ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯು ಒಟ್ಟು ಆರು ತಂಡಗಳನ್ನು ಹೊಂದಿದ್ದು, ಪ್ರಸ್ತುತ ನಾಲ್ಕು ನೂರಕ್ಕೂ ಅಧಿಕ ರಂಗಕರ್ಮಿಗಳು, ಕಲಾವಿದರು ಹಾಗೂ ಇತರ ನೌಕರರು ಸೇವೆ ಸಲ್ಲಿಸುತ್ತಿದ್ದಾರೆ. ಸುಮಾರು 150 ವರ್ಷಗಳ ಇತಿಹಾಸವಿರುವ ಕಟೀಲು ಮೇಳ 1975ನೇ ಇಸವಿಯಲ್ಲಿ ವ್ಯವಸ್ಥಿತ ಎರಡನೇ ಮೇಳವನ್ನು ಪ್ರಾರಂಭಿಸಿತು. 1982ರಲ್ಲಿ ಮೂರನೇ ಮೇಳ, 1993ರಲ್ಲಿ ನಾಲ್ಕನೇ ಮೇಳ, 2010ರಲ್ಲಿ ಐದನೇ ಮೇಳ, 2013ರಲ್ಲಿ ಆರನೇ ಮೇಳ ಪ್ರಾರಂಭಿಸಿತು. ಕಟೀಲು ಮೇಳಕ್ಕೆ ದಿನವೊಂದಕ್ಕೆ 4-5 ಹರಕೆಯಾಟಗಳ ಬುಕ್ಕಿಂಗ್ ನಡೆಯುತ್ತದೆ.

Recommended Video

ಕೃಷಿ ಕಾಯ್ದೆ ರದ್ದತಿ ಮಸೂದೆ ಮಂಡಿಸಲು ಸರ್ಕಾರದ ಸಿದ್ಧತೆ ಹೇಗಿದೆ? | Oneindia Kannada
 ಯಕ್ಷಗಾನ ಹರಕೆ ಹೇಳಿ ಪ್ರದರ್ಶನ ಮಾಡುವ ಭಕ್ತರು

ಯಕ್ಷಗಾನ ಹರಕೆ ಹೇಳಿ ಪ್ರದರ್ಶನ ಮಾಡುವ ಭಕ್ತರು

ಸುಖ- ಶಾಂತಿ ನೆಮ್ಮದಿಗಾಗಿ ಯಕ್ಷಗಾನ ಹರಕೆ ಹೇಳಿ ಪ್ರದರ್ಶನ ಮಾಡುವ ಭಕ್ತರು ಇದ್ದಾರೆ. ಕೇವಲ ಹಿಂದೂಗಳು ಮಾತ್ರವಲ್ಲದೇ ಮುಸ್ಲಿಂ, ಕ್ರೈಸ್ತರೂ ಹರಕೆ ಆಟ ಆಡಿಸುತ್ತಾರೆ. ಕಟೀಲು ಮೇಳದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗದ ಪ್ರದರ್ಶನ ನಡೆಯುವಾಗ ಸಾಕ್ಷಾತ್ ದೇವಿಯೇ ರಂಗಸ್ಥಳದಲ್ಲಿ ಸನ್ನಿಹಿತಳಾಗುತ್ತಾಳೆಂಬ ನಂಬಿಕೆಯಿದೆ. ಪೌರಾಣಿಕ ಕತೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಮೂಲೆ ಮೂಲೆಗೆ ಪ್ರಚುರಪಡಿಸಿದ ಖ್ಯಾತಿ ಕಟೀಲು ಮೇಳಕ್ಕಿದೆ. ಕಟೀಲು ಮೇಳದ ಯಕ್ಷಗಾನ ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗದೇ ಜನರ ಧಾರ್ಮಿಕ ನಂಬಿಕೆಯಲ್ಲೂ ಹಾಸುಹೊಕ್ಕಾಗಿದೆ.

ಮೇಳದಲ್ಲಿ ಒಟ್ಟು 20ಕ್ಕೂ ಹೆಚ್ಚು ಚಿನ್ನದ, ಬೆಳ್ಳಿಯ ಕಿರೀಟಗಳು ಇವೆ. ಬೆಳ್ಳಿಯ ತೊಟ್ಟಿಲುಗಳಿವೆ. ಪ್ರತಿಮೇಳದಲ್ಲೂ ಬೆಳ್ಳಿಯ ಶಂಖ ಚಕ್ರ ಗದಾ, ಬಾಣ ಬಿಲ್ಲುಗಳು ಇವೆ. ಇವೆಲ್ಲದಕ್ಕೂ ಪೂಜೆಯಾಗಿ ಯಕ್ಷಗಾನ ತಿರುಗಾಟ ಆರಂಭವಾಗಿದೆ. ಈ ಎಲ್ಲಾ ಪರಿಕರಗಳು, ಯಕ್ಷಗಾನ ಮೇಳದ ದೇವರು ಮತ್ತೆ ದೇವಸ್ಥಾನ ಸೇರುವುದು 167 ದಿನಗಳ ನಂತರೇ ಅನ್ನುವುದು ವಿಶೇಷವಾಗಿದೆ.

English summary
Six Yakshagana Mela's of Kateel Sri Durgaparameshwari Temple in Dakshina Kannada District tour has begun.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X