ಮಂಗಳೂರು: ಮಸೀದಿ ಕೆಡವಿದಾಗ ದೇವಸ್ಥಾನ ಪತ್ತೆ; ಮಸೀದಿ ಕಾಮಗಾರಿ ಸ್ಥಗಿತಕ್ಕೆ ಜಿಲ್ಲಾಡಳಿತ ಸೂಚನೆ
ಮಂಗಳೂರು, ಏಪ್ರಿಲ್ 21: ನವೀಕರಣಕ್ಕಾಗಿ ದರ್ಗಾ ಕೆಡವಿದಾಗ ಹಿಂದೂ ಶೈಲಿಯ ದೇವಸ್ಥಾನ ಪತ್ತೆಯಾದ ಘಟನೆ ಮಂಗಳೂರು ಹೊರವಲಯದ ಗಂಜಿಮಠ ಬಳಿಯ ಮಳಲಿ ಎಂಬಲ್ಲಿ ನಡೆದಿದೆ.
ಮಳಲಿಯ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ದರ್ಗಾದ ನವೀಕರಣದ ಸಲುವಾಗಿ ಮುಂಭಾಗ ಕೆಡವಲಾಗಿತ್ತು. ದರ್ಗಾದ ಹಿಂಭಾಗ ದೇವಸ್ಥಾನದ ಕಲಶ, ತೋಮರ, ಕಂಬಗಳ ಮಾದರಿ ಪತ್ತೆಯಾಗಿದೆ. ಜೈನ ಅಥವಾ ಹಿಂದೂ ಧರ್ಮಕ್ಕೆ ಸೇರಿದ ದೇವಸ್ಥಾನವಿರುವ ಸಾಧ್ಯತೆ ಇದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಮಂಗಳೂರು ತಹಶೀಲ್ದಾರ ಪುರಂದರ ಭೇಟಿ ನೀಡಿದ್ದಾರೆ.

ಇತಿಹಾಸದ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ತಹಶೀಲ್ದಾರ
ಜಾಗದ ದಾಖಲೆ ಹಾಗೂ ಇತಿಹಾಸದ ಬಗ್ಗೆ ಮಾಹಿತಿ ಕಲೆ ಹಾಕಲು ತಹಶೀಲ್ದಾರ ಪುರಂದರ ಮುಂದಾಗಿದ್ದು, ಸದ್ಯ ದರ್ಗಾದ ನವೀಕರಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ ಸೂಚನೆ ನೀಡಿದ್ದಾರೆ. ಕೆಲಸ ಸ್ಥಗಿತಗೊಳಿಸಿ ಜಿಲ್ಲಾಡಳಿತದ ನಡೆಗೆ ಸಮ್ಮತಿ ಸೂಚಿಸಿದ ದರ್ಗಾ ಆಡಳಿತ ಒಂದು ವಾರ ಕೆಲಸ ಸ್ಥಗಿತಕ್ಕೆ ಸಮ್ಮತಿ ಸೂಚಿಸಿದೆ.
"ಸುಮಾರು 800 ವರ್ಷದ ಹಿಂದಿನ ಮಳಲಿ ಮಸೀದಿ ಇದಾಗಿದ್ದು, ದೇವಸ್ಥಾನ ಶೈಲಿಯ ಕಟ್ಟಡದಲ್ಲಿ ಸದ್ಯ ಮೌಲ್ವಿಗಳ ವಿಶ್ರಾಂತಿ ಸ್ಥಳವಾಗಿದೆ. ಮೌಲ್ವಿ, ಉಲೇಮಾಗಳು ಕುಳಿತುಕೊಳ್ಳುವ ಸ್ಥಳವೂ ಆಗಿದ್ದು, ಹಿಂದಿನ ಮೌಲ್ವಿಗಳು ಈ ಸ್ಥಳದಲ್ಲೇ ನಮಾಜ್ ಮಾಡುತ್ತಿದ್ದರು. ಹೀಗಾಗಿ ಈ ಕಟ್ಟಡವನ್ನು ಕೆಡವದೇ ಹಾಗೆಯೇ ಉಳಿಸಿಕೊಂಡಿದ್ದೇವೆ. ಮಸೀದಿಗೆ ಸಂಬಂಧಿಸಿದ ಎಲ್ಲಾ ದಾಖಲೆ ಇದೆ".

ಹಲವು ಭಾಗಗಳಲ್ಲಿ ದೇವಸ್ಥಾನ ಶೈಲಿಯ ಮಸೀದಿ
"ನಮಗೆ ಇಲ್ಲಿ ನಮಾಜ್ ಮಾಡುವ ಪರಿಸ್ಥಿತಿ ಇಲ್ಲ. ಮಳೆಗೆ ತೊಂದರೆಯಾಗುವ ಹಿನ್ನಲೆ ಇದ್ದ ಮಸೀದಿಯ ಒಂದು ಪಾರ್ಶ್ವವನ್ನು ಕೆಡವಿದ್ದೇವೆ. ದೇವಸ್ಥಾನ ಶೈಲಿಯ ಮಸೀದಿ ಹಲವು ಭಾಗಗಳಲ್ಲಿ ಇದೆ," ಅಂತಾ ಮಸೀದಿ ಒಳಭಾಗದಲ್ಲಿ ದೇವಸ್ಥಾನ ಶೈಲಿಯ ಕಟ್ಟಡದ ಬಗ್ಗೆ ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಈ ವೇಳೆ ಸ್ಥಳಕ್ಕೆ ವಿಶ್ವ ಹಿಂದೂ ಪರಿಷತ್ ಪ್ರಮುಖರು ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರು ಭೇಟಿ ನೀಡಿದ್ದಾರೆ. ತಹಶೀಲ್ದಾರ ಭೇಟಿ ವೇಳೆ ಮಸೀದಿ ಇದ್ದ ಜಾಗಕ್ಕೆ ಭೇಟಿ ನೀಡಿದ ವಿಶ್ವ ಹಿಂದೂ ಪರಿಷತ್ ವಿಭಾಗ ಸಂಚಾಲಕ ಶರಣ್ ಪಂಪ್ವೆಲ್, "ದೇಶದಲ್ಲಿ ಹಲವು ದೇವಸ್ಥಾನಗಳನ್ನು ಕೆಡವಿ ಮಸೀದಿ ನಿರ್ಮಾಣ ಮಾಡಲಾಗಿದೆ. ನಮಗೆ ಈ ಮಸೀದಿಯ ಬಗ್ಗೆಯೂ ಸಂದೇಹಗಳಿವೆ. ದೇವಸ್ಥಾನ ಅಥವಾ ಜೈನ ಬಸದಿಯನ್ನು ಹೋಲುವ ಶೈಲಿ ಇಲ್ಲಿ ಇದೆ. ಈ ಬಗ್ಗೆ ಜಿಲ್ಲಾಡಳಿತ ದಾಖಲೆ ಮಾಡಬೇಕು," ಎಂದು ಒತ್ತಾಯಿಸಿದರು.

ಮಸೀದಿ ಅರ್ಧ ಕಟ್ಟಡ ಕೆಡವಿದಾಗ ಪುರಾತನ ದೇವಸ್ಥಾನ ಪತ್ತೆ
ದೇವಸ್ಥಾನ ಧ್ವಂಸವಾಗಿರುವ ಬಗ್ಗೆ ಅಧ್ಯಯನ ಮಾಡಬೇಕು. ಇದೇ ವಿಚಾರವಾಗಿ ಸಂಘರ್ಷಕ್ಕೆ ಕಾರಣವಾಗುವುದು ಬೇಡ. ಅಲ್ಲಿಯ ತನಕ ಮಸೀದಿ ಕಾಮಗಾರಿ ಕೆಲಸವನ್ನು ನಿಲ್ಲಿಸಬೇಕು ಎಂದು ತಹಶೀಲ್ದಾರ ಪುರಂದರ ಬಳಿ ಶರಣ್ ಪಂಪ್ವೆಲ್ ಮನವಿ ಮಾಡಿದ್ದಾರೆ.
ಮಂಗಳೂರು ತಾಲೂಕಿನ ಗುರುಪುರ ಹೋಬಳಿಯ ತೆಂಕ ಉಳಿಪಾಡಿ ಗ್ರಾಮ, ಗಂಜಿಮಠ ಪಂಚಾಯಿತಿಯಲ್ಲಿರುವ ಸರ್ವೇ ನಂ. 1/10 ನಲ್ಲಿ ಅಸ್ಸಾಯಿದ್ ಅಬ್ದುಲ್ಲಾಹಿಲ್ ಮದನಿ ಜುಮಾ ಮಸೀದಿ ಕಟ್ಟಡ ನವೀಕರಣ ಸಂದರ್ಭದಲ್ಲಿ ಮಸೀದಿ ಅರ್ಧ ಕಟ್ಟಡ ಕೆಡವಿದಾಗ ಪುರಾತನ ದೇವಸ್ಥಾನ ಪತ್ತೆಯಾಗಿದೆ. ಮೇಲ್ನೋಟಕ್ಕೆ ನೋಡಿದಾಗ ಪುರಾತನ ದೇವಸ್ಥಾನವನ್ನು ಕೆಡವಿ ಮಸೀದಿ ಕಟ್ಟಡ ಕಟ್ಟಿರುವುದು ಕಂಡುಬರುತ್ತದೆ.

ಪುರಾತತ್ವ ಇಲಾಖೆಗೆ ತನಿಖೆ ನಡೆಸಲು ಆದೇಶಿಸಿ
"ಕಟ್ಟಡದ ಒಳಗೆ ಮತ್ತು ಹೊರಗಡೆ ನೋಡುವಾಗ ಪ್ರಾಚೀನ ದೇವಸ್ಥಾನದ ಕಟ್ಟಡದ ಶೈಲಿಯಲ್ಲಿ ಕಂಡು ಬರುತ್ತಿದೆ. ಆದುದರಿಂದ ಗಂಜಿಮಠ ಗ್ರಾಮ ಪಂಚಾಯತಿ ನೀಡಿದ ಕಟ್ಟಡ ಪರವಾನಿಗೆ ನಂ. 11/2021/22ರ ಪ್ರಕಾರ ನೀಡಿರುವ ಮಸೀದಿ ನವೀಕರಣದ ಅನುಮತಿಯನ್ನು ರದ್ದುಗೊಳಿಸಿ ಇದನ್ನು ಪರಿಶೀಲಿಸಿ ಪುರಾತತ್ವ ಇಲಾಖೆಗೆ ತನಿಖೆ ನಡೆಸಲು ಆದೇಶಿಸಬೇಕು ಮತ್ತು ಆ ಸ್ಥಳದಲ್ಲಿರುವ ಕಟ್ಟಡವನ್ನು ಯಥಾಸ್ಥಿತಿಯಲ್ಲಿರುವಂತೆ ಕಾಪಾಡಿಕೊಳ್ಳಲು ಕ್ರಮಕೈಗೊಳ್ಳಬೇಕೆಂದು," ಶರಣ್ ಪಂಪ್ವೆಲ್ ಜಿಲ್ಲಾಧಿಕಾರಿಗಳಿಗೆ, ತಾಲೂಕು ಕಾರ್ಯನಿರ್ವಹಣಾಧಿಕಾರಿ ಮತ್ತು ತಹಶೀಲ್ದಾರಗೆ ಮನವಿ ನೀಡಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿದ ತಹಶೀಲ್ದಾರ ಪುರಂದರ್, "ಮಸೀದಿ ವಿಸ್ತರಣೆ ಆಗಿದೆಯಾ ನೋಡುತ್ತೇವೆ. ಎಲ್ಲಾ ದಾಖಲೆಗಳನ್ನು ಕ್ರೋಢಿಕರಿಸಿ ಅಧ್ಯಯನ ಮಾಡುತ್ತೇವೆ," ಎಂದು ಹೇಳಿದ್ದಾರೆ.












Click it and Unblock the Notifications