ವಿವಾದತ್ತ ಕಾಂತಾರ: ರಿಷಬ್ ಶೆಟ್ಟಿ ಪರ ನಿಂತ ಇಡೀ ಕಾಂತಾರಾ ಚಿತ್ರತಂಡ
ಮಂಗಳೂರು, ಅಕ್ಟೋಬರ್ 20: ತುಳುನಾಡ ಮಣ್ಣಿನ ಸಂಸ್ಕೃತಿ ಬಿಂಬಿಸುವಂಥ ಕಾಂತಾರ ಸಿನಿಮಾ ರಾಷ್ಟ್ರಾದ್ಯಾಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದರ ನಡುವೆ ಹಲವು ವಿವಾದಗಳು ಸೃಷ್ಟಿಯಾಗುತ್ತಿದ್ದು, ವಿವಾದ ಬಗ್ಗೆ ಕಾಂತಾರಾ ಇಡೀ ಚಿತ್ರ ತಂಡ ನಟ, ನಿರ್ದೇಶಕ ರಿಷಬ್ ಶೆಟ್ಟಿ ಬೆನ್ನುಲುಬಾಗಿ ನಿಂತಿದೆ. ಸದ್ಯ ಮಂಗಳೂರಿನ ಕ್ಯಾಡ್ ಸ್ಟುಡಿಯೋದಲ್ಲಿ ಡಬ್ಬಿಂಗ್ ಕಾರ್ಯದಲ್ಲಿ ತೊಡಗಿರುವ ಚಿತ್ರತಂಡದ ಪ್ರಮುಖ ನಟರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.
ಈಗಾಗಲೇ ಶಾಸಕರು, ಸಚಿವರು ರಿಷಭ್ ಶೆಟ್ಟಿ ಪರ ಮಾತನಾಡಿ ಬೆಂಬಲ ಸೂಚಿಸಿದ್ದಾರೆ. ಹಲವು ಸಾಹಿತಿಗಳು ಚಿತ್ರನಟರು ಕೂಡ ಶಹಬ್ಬಾಸ್ ಗಿರಿ ನೀಡಿದ್ದಾರೆ. ಇದೀಗ ಚಿತ್ರದಲ್ಲಿ ಭಾಗವಹಿಸಿರುವ ನಟರಾದ ನವೀನ್ ಡಿ ಪಡೀಲ್, ಪ್ರಕಾಶ್ ತೂಮಿನಾಡ್, ಮೈಮ್ ರಾಮ್ ದಾಸ್, ಶನಿಲ್ ಗುರು ಸೇರಿದಂತೆ ಹಿರಿಯ ರಂಗಭೂಮಿ ಕಲಾವಿದ ದೇವದಾಸ್ ಕಾಪಿಕಾಡ್ ಕೂಡಾ ನಟ ರಿಷಬ್ ಶೆಟ್ಟಿ ಕುರಿತು ಅಭಿಮಾನದ ಮಾತನ್ನಾಡಿದ್ದಾರೆ.
ಹಲವು ಛಾಲೆಂಜ್‌ಗಳನ್ನು ದಾಟಿ ಈ ಸಿನಿಮಾ ಯಶಸ್ವಿಯಾಗಿದೆ. ಯಾವುದೋ ಒಂದು ಶಕ್ತಿ ನಮ್ಮಿಂದ ಈ ಪ್ರದರ್ಶನವನ್ನು ಕೊಡಿಸಿದೆ. ಕರಾವಳಿಯ ಅತ್ಯಂತ ನಂಬಿಕೆಯ ದೈವಾರಾಧನೆಯ ಬಗ್ಗೆ ಈ ಚಿತ್ರವಿದೆ. ದೈವಾರಾಧನೆಯ ವಿಚಾರದಲ್ಲಿ ಕಿಂಚಿತ್ತು ತಪ್ಪಾದರೂ ಇಡೀ ಚಿತ್ರಕ್ಕೆ ಸಮಸ್ಯೆಯಾಗುವ ಆತಂಕವೂ ಇತ್ತು ಎಂದು ಚಿತ್ರತಂಡ ತಿಳಿಸಿದೆ.

ಜನ ಸ್ವೀಕರಿಸಿ ಆಗಿದೆ, ವಿರೋಧಕ್ಕೆ ಬೆಲೆ ಕೊಡುವ ಅಗತ್ಯವಿಲ್ಲ
ಕಾಂತಾರ ಚಿತ್ರವನ್ನು ಜನ ಸ್ವೀಕರಿಸಿದ ರೀತಿ ಅದ್ಭುತವಾಗಿದೆ. ಚಿತ್ರರಂಗದ ದಿಗ್ಗಜರು ಕಾಂತಾರವನ್ನು ಮೆಚ್ಚಿರುವುದು ಹೆಮ್ಮೆ ತಂದಿದೆ. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ರಿಷಭ್ ಶೆಟ್ಟಿಯಲ್ಲಿ ಯಾವುದೋ ಶಕ್ತಿಯ ಪರಕಾಯ ಆಗಿತ್ತೋ ಎನ್ನುವ ರೀತಿಯಿತ್ತು. ತುಂಬಾ ಶ್ರದ್ಧೆ ಭಕ್ತಿಯಿಂದಲೇ ನಟನೆಯಲ್ಲಿ ತೊಡಗಿಸಿಕೊಂಡಿದ್ದೆವು. ಚಿತ್ರದ ಬಗ್ಗೆ ಕೆಲವರು ವಿರೋಧದ ವಿಮರ್ಶೆ ಮಾಡುತ್ತಾರೆ. ಇದಕ್ಕೆ ಯಾವುದೇ ಬೆಲೆ ಕೊಡುವ ಅಗತ್ಯವಿಲ್ಲ ಎಂದು ಚಿತ್ರ ತಂಡ ಅಭಿಪ್ರಾಯ ವ್ಯಕ್ತಪಡಿಸಿದೆ.

ವಿವಾದಕ್ಕೆ ತಲೆಕಡಿಸಿಕೊಳ್ಳುವ ಅವಶ್ಯಕತೆ ಇಲ್ಲ
ಚಿತ್ರದ ಬಗ್ಗೆ ಮಾತನಾಡಿರುವ ನಟ ಶನಿಲ್, ಚಿತ್ರ ಯಶಸ್ಸು ಕಂಡಾಗ ಇಂತಹ ವಿಮರ್ಶೆಗಳು ಸಾಮಾನ್ಯ. ಇದಕ್ಕೆಲ್ಲಾ ತಲೆಕಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಚಿತ್ರ ಈಗಾಗಲೇ ಗೆದ್ದಾಗಿದೆ. ಹಲವು ಅಡೆತಡೆಗಳು ಬಂದರೂ ದೈವ ಪ್ರೇರಣೆಯಿಂದ ಚಿತ್ರ ಅದ್ಭುತ ಯಶಸ್ಸನ್ನು ಕಾಣುತ್ತಿದೆ. ಪಾರ್ಟ್ 2 ಬರುವ ಬಗ್ಗೆ ನಮಗೆ ಇನ್ನೂ ಗೊತ್ತಿಲ್ಲ. ರಿಷಬ್ ಶೆಟ್ಟಿಯವರಿಗೆ ಮತ್ತೆ ದೈವ ಪ್ರೇರಣೆಯಾದರೆ ಪಾರ್ಟ್ 2 ಬರಲೂ ಬಹುದು ಎಂದು ಶನಿಲ್ ಶೆಟ್ಟಿ ಹೇಳಿದ್ದಾರೆ

ದೈವದ ಆಶೀರ್ವಾದದಿಂದ ಕಾಂತಾರಕ್ಕೆ ಯಶಸ್ಸು ಸಿಕ್ಕಿದೆ
ಇನ್ನು ನಟ ನವೀನ್ ಡಿ ಪಡೀಲ್, ಪ್ರಕಾಶ್ ತುಮಿನಾಡು ಕೂಡಾ ರಿಷಬ್ ಶೆಟ್ಟಿಗೆ ಬೆಂಬಲ ಸೂಚಿಸಿದ್ದಾರೆ. ರಿಷಬ್ ಶೆಟ್ಟಿ ಪೂರ್ಣಪ್ರಮಾಣದಲ್ಲಿ ತನನ್ನು ತಾನು ತೊಡಗಿಸಿಕೊಂಡ ಕಾರಣ ಚಿತ್ರ ಗೆದ್ದಿದೆ. ಕಾಂತಾರಾ ಚಿತ್ರದ ಬಗ್ಗೆ ದೇಶಾದ್ಯಂತ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿದೆ. ದೈವ ಆಶೀರ್ವಾದವೂ ಇದಕ್ಕೆ ಕಾರಣ ಅಂತಾ ಕಾಂತಾರಾ ಯಶಸ್ಸುನ್ನು ಬಣ್ಣಿಸಿದ್ದಾರೆ.

ಯಾವ ಭಾಷೆಯಲ್ಲಿ ಬಂದರೂ ಕಾಂತಾಗೆ ಗೆಲ್ಲುತ್ತೆ
ಇನ್ನು ಖ್ಯಾತ ಬಹುಭಾಷಾ ನಟ,ನಿರ್ದೇಶಕ ದೇವದಾಸ್ ಕಾಪಿಕಾಡ್ ಮಾತನಾಡಿ, ಕಾಂತಾರ ಸಿನಿಮಾ ಯಾವ ಭಾಷೆಯಲ್ಲೂ ಬಂದರೂ ಗೆಲ್ಲುತ್ತದೆ. ಅದು ಚೈನೀಸ್ ಇರಲಿ, ಜಪಾನಿ ಭಾಷೆಯಲ್ಲಿ ಬಂದರೂ ಓಡುತ್ತೆ. ಕಾಂತಾರದಂತಹ ಸಿನಿಮಾವನ್ನು ಮತ್ತೆ ರಿಷಬ್ ಗೂ ಮಾಡೋದು ಕಷ್ಟ. ಅಷ್ಟು ನೈಜವಾಗಿ ಚಿತ್ರ ಮೂಡಿ ಬಂದಿದೆ. ಚಿತ್ರದ ಬಗ್ಗೆ ವಿರೋಧ ಮಾಡುವವರು ತಮ್ಮನ್ನು ತಾವೇ ವಿಮರ್ಶೆ ಮಾಡಿಕೊಳ್ಳಬೇಕು. ದೈವಾರಾಧನೆಗೆ ಯಾವ ಚ್ಯುತಿಯೂ ಬಾರದಂತೆ ಚಿತ್ರ ನಿರ್ಮಿಸಲಾಗಿದೆ. ದೈವಾರಾಧನೆ ತುಳುನಾಡಿನ ಪ್ರಮುಖ ಅಂಗ. ಅದು ಹಿಂದೂ ಧರ್ಮದ ಭಾಗ ಅಲ್ಲ ಅನ್ನೋರನ್ನು ಏನೂ ಮಾಡಲು ಸಾಧ್ಯವಿಲ್ಲ. ಅಂಥವರಿಗೆ ಉತ್ತರ ಕೊಡದಿರುವುದೇ ಉತ್ತಮ ಸತ್ಯ ಏನು ಅನ್ನೋದು ಅವರಿಗೇ ತಿಳಿದಾಗ ಅವರು ಸರಿಯಾಗುತ್ತಾರೆ ಅಂತಾ ದೇವದಾಸ್ ಕಾಪಿಕಾಡ್ ಹೇಳಿದ್ದಾರೆ.












Click it and Unblock the Notifications