ಶಾಲೆಗಳಿಗೆ ಇಂದಿನಿಂದ ಟಾಸ್ಕ್‌ಫೋರ್ಸ್ ಭೇಟಿ : ಸಿಎಂ
ಮಂಗಳೂರು, ನ.3 : ಶಾಲೆಗಳಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ, ಕಿರುಕುಳ ಪ್ರಕರಣಗಳನ್ನು ತಡೆಯಲು ಸರ್ಕಾರ ರಚಿಸಿರುವ ಟಾಸ್ಕ್‌ಫೋರ್ಸ್ ಸೋಮವಾರದಿಂದ ಕಾರ್ಯಾಚರಣೆ ಆರಂಭಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಶಿಕ್ಷಣ ಸಂಸ್ಥೆಗಳು ಸರ್ಕಾರ ನೀಡಿದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ತಿಳಿಸಿದರು.
ಭಾನುವಾರ ಮಂಗಳೂರಿಗೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ ಅವರು, ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. 'ಪೊಲೀಸ್, ಮಹಿಳಾ ಮತ್ತು ಮಕ್ಕಳ ಇಲಾಖೆ, ವಾರ್ತಾ ಇಲಾಖೆ, ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಟಾಸ್ಕ್‌ಫೋರ್ಸ್ ಸಮಿತಿಯು ನಿರಂತರವಾಗಿ ಶಾಲೆಗಳಿಗೆ ಭೇಟಿ ನೀಡಿ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳ ಜತೆ ಸಮಾಲೋಚನೆ ನಡೆಸಲಿದೆ' ಎಂದು ಹೇಳಿದರು.

ಶಿಕ್ಷಣ ಸಂಸ್ಥೆಗಳು ಸರ್ಕಾರ ನೀಡಿರುವ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಬೆಂಗಳೂರಿನಲ್ಲಿ ಮೂರು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಅಲ್ಲಿಯ ಸಿಬ್ಬಂದಿಯೇ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಆದ್ದರಿಂದ ಸಿಬ್ಬಂದಿ ನೇಮಕಾತಿ ಸಂದರ್ಭದಲ್ಲಿ ಶಾಲೆಗಳು ಎಚ್ಚರ ವಹಿಸಬೇಕು ಎಂದು ಸಿಎಂ ತಿಳಿಸಿದರು. [ಮಕ್ಕಳ ಸುರಕ್ಷತೆಗೆ ಸರ್ಕಾರದ ಮಾರ್ಗಸೂಚಿ]
ಲೈಂಗಿಕ ದೌರ್ಜನ್ಯ ನಡೆಸುತ್ತಿರುವವರ ಮೇಲೆ ಗೂಂಡಾ ಕಾಯ್ದೆಯನ್ನು ಹಾಕುತ್ತಿರುವುದು ಪರಿಣಾಮ ಬೀರಿದೆ. ಒಂದು ಅಪರಾಧ ಮಾಡಿದವರ ಮೇಲೂ ಗೂಂಡಾ ಕಾಯ್ದೆಯನ್ನು ಹಾಕಲಾಗುತ್ತಿದೆ. ಅತ್ಯಾಚಾರ ತಡೆ ಕುರಿತು ವರದಿ ನೀಡಲು ರಚಿಸಿರುವ ಎಂ.ಸಿ.ನಾಣಯ್ಯ ನೇತೃತ್ವದ ತಜ್ಞರ ಸಮಿತಿ ಕಾನೂನು ತಿದ್ದುಪಡಿಗಳ ಕುರಿತು ವರದಿ ನೀಡಲಿದೆ ಎಂದರು. [ಮಾರ್ಗಸೂಚಿ ಪಾಲಿಸದಿದ್ದರೆ ಶಾಲೆಗಳ ಮಾನ್ಯತೆ ರದ್ದು]
ಘಟನೆ ಸಮರ್ಥಿಸಿಕೊಳ್ಳುತ್ತಿಲ್ಲ : ಮಂಗಳೂರಿನಲ್ಲಿ ನಡೆಯುತ್ತಿರುವ ಸರಣಿ ಹತ್ಯೆ, ದರೋಡೆ, ನೈತಿಕ ಪೊಲೀಸ್ ಗಿರಿ ಕುರಿತ ಪ್ರಶ್ನೆಗಳಿಗೆ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ, 'ಬಿಜೆಪಿ ಸರ್ಕಾರವಿದ್ದಾಗ ಇಂತಹ ಘಟನೆ ನಡೆಯುತ್ತಿರಲಿಲ್ಲವೇ? ಅವರ ಕಾಲಕ್ಕೆ ಹೋಲಿಸಿದರೆ, ಈಗ ಕಡಿಮೆಯಾಗಿದೆ. ನಾನು ಇಂತಹ ಘಟನೆಗಳನ್ನು ಸಮರ್ಥಿಸಿಕೊಳ್ಳುತ್ತಿಲ್ಲ ಎಂದು ಸಿಎಂ ಸ್ಪಷ್ಟನೆ ನೀಡಿದರು. [ಚಿತ್ರ : ಐಸಾಕ್ ರಿರ್ಚಡ್, ಮಂಗಳೂರು]












Click it and Unblock the Notifications