ಮಂಗಳೂರು : ಸರಣಿ ಅಪಘಾತದಲ್ಲಿ ವಿದ್ಯಾರ್ಥಿ ಸಾವು
ಮಂಗಳೂರು, ಜೂ.26 : ಸುರತ್ಕಲ್ ಸಮೀಪದ ಮುಕ್ಕಾ ಜಂಕ್ಷನ್ ಬಳಿ ನಡೆದ ಸರಣಿ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿಯೊಬ್ಬರು ಮೃತಪಟ್ಟಿದ್ದು, ಒಬ್ಬರು ಗಾಯಗೊಂಡಿದ್ದಾರೆ. ಟಾಟಾ ಏಸ್ ವಾಹನ ಕಾರು ಮತ್ತು ಬೈಕ್ ಗೆ ಡಿಕ್ಕಿ ಹೊಡೆದಿದ್ದರಿಂದ ಈ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಯನ್ನು ಸೆಂಟ್ ಅಲೋಶಿಯಸ್ ಕಾಲೇಜಿನ ದುಲ್ಷಕ್ ಅಹಮದ್ (19) ಎಂದು ಗುರುತಿಸಲಾಗಿದೆ. ಅಹಮದ್ ಜೊತೆ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಅವರ ಸಹೋದರ ಸಹ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಬುಧವಾರ ರಾತ್ರಿ ದುಲ್ಷಕ್ ಅಹಮದ್ ಮತ್ತು ಅವರ ಸಹೊದರ ಬೈಕ್ ನಲ್ಲಿ ಮುಕ್ಕಾ ಜಂಕ್ಷನ್ ಬಳಿ ತೆರಳುತ್ತಿದ್ದಾಗ, ವೇಗಾಗಿ ಬಂದ ಟಾಟಾ ಏಸ್ ವಾಹನ ಇವರ ಬೈಕ್ ಪಕ್ಕದಲ್ಲಿದ್ದ ಮಾರುತಿ ಝೆನ್ ಕಾರಿಗೆ ಡಿಕ್ಕಿ ಹೊಡೆದಿದೆ. ಕಾರು ಇವರ ಬೈಕಿಗೆ ಡಿಕ್ಕಿ ಹೊಡೆದಿದ್ದರಿಂದ ಇಬ್ಬರು ಗಾಯಗೊಂಡಿದ್ದಾರೆ.
ತಕ್ಷಣ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ದುಲ್ಷಕ್ ಅಹಮದ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಟಾಟಾ ಏಸ್ ಮಂಗಳೂರಿನಿಂದ ಉಡುಪಿಗೆ ಆಗಮಿಸುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ. ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾಗಿರುವ ಟಾಟಾ ಏಸ್ ಚಾಲಕನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ವರದಕ್ಷಿಣೆ ಕಿರುಕುಳ ದೂರು ದಾಖಲು : ಮದುವೆಯ ಸಂದರ್ಭ ವಿವಾಹ ನಿಲ್ಲಿಸುವ ಬೆದರಿಕೆ ಒಡ್ಡಿ 1 ಲಕ್ಷ ರೂ. ನಗದು 10 ಪವನ್ ಚಿನ್ನಾಭರಣವನ್ನು ವರದಕ್ಷಿಣೆಯಾಗಿ ಪಡೆದು, ವಿವಾಹದ ನಂತರ ಪೀಡಿಸಿ 2 ಲಕ್ಷ ಪಡೆದ ಗಂಡನ ಮನೆಯವರು ನನ್ನನ್ನು ಮನೆಯಿಂದ ಹೊರಹಾಕಿದ್ದಾರೆ ಎಂದು ಕಾರ್ಕಳ ತಾಲೂಕಿನ ಪಳ್ಳಿ ರಂಗಗುಡ್ಡೆ ನಿವಾಸಿ ಸುಭಾಷಿಣಿ ಎಂಬುವವರು ಹಿರಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸುಭಾಷಿಣಿ ಅವರು ಪತಿ ಬೊಮ್ಮರಬೆಟ್ಟು ಗ್ರಾಮದ ದಿವಾಕರ ಆಚಾರ್ಯ, ಅವರ ತಾಯಿ ಪಾರ್ವತಿ, ಗಂಡನ ಸಹೋದರರಾದ ಭಾಸ್ಕರ ಆಚಾರ್ಯ, ಗುರುರಾಜ ಆಚಾರ್ಯ, ಸೂರ್ಯ ಆಚಾರ್ಯ ವಿರುದ್ಧ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.












Click it and Unblock the Notifications