Mangaluru: ಮಂಗಳೂರಿನಲ್ಲಿ ಮಸೀದಿ ಮೇಲೆ ಕಲ್ಲು ತೂರಾಟ
ಮಂಗಳೂರು ಸೆಪ್ಟೆಂಬರ್ 16: ಮಂಡ್ಯದ ನಾಗಮಂಗಲದಲ್ಲಿ ನಡೆದ ಕೋಮುಗಲಭೆ ಸದ್ಯ ಮಂಗಳೂರಿನತ್ತ ಶಿಫ್ಟ ಆದಂತೆ ಕಾಣಿಸುತ್ತಿದೆ. ಮಂಗಳೂರಿನಲ್ಲಿ ಕಳೆದ ದಿನ ರಾತ್ರಿ ಮಸೀದಿ ಮೇಲೆ ಕಲ್ಲು ಎಸೆಯಲಾಗಿದೆ. ಸುರತ್ಕಲ್ ಬಳಿಯ ಕಾಟಿಪಳ್ಳದಲ್ಲಿ ಭಾನುವಾರ ರಾತ್ರಿ ಮಸೀದಿ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ.
ಹೌದು.. ಕಾಟಿಪಳ್ಳ 3ನೇ ಬ್ಲಾಕ್‌ನಲ್ಲಿರುವ ಬದ್ರಿಯಾ ಜುಮಾ ಮಸೀದಿಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಘಟನೆ ಕಳೆದ ದಿನ (ಸೆ.15) ರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ. ಎರಡು ಬೈಕ್‌ಗಳಲ್ಲಿ ಬಂದ ನಾಲ್ಕು ಮಂದಿ ದುಷ್ಕರ್ಮಿಗಳು ಮಸೀದಿಗೆ ಕಲ್ಲು ತೂರಿ ಎಸ್ಕೇಪ್ ಆಗಿದ್ದಾರೆ.

ಇದರಿಂದಾಗಿ ಮಸೀದಿ ಕಿಟಕಿ ಗಾಜುಗಳು ಚೂರು ಚೂರಾಗಿವೆ. ಮಸೀದಿಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದ ದೃಶ್ಯವನ್ನು ಆಧರಿಸಿ ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದಾರೆ. ಈದ್ ಮಿಲಾದ್ ಮುನ್ನಾ ದಿನವೇ ಈ ಘಟನೆ ಸಂಭವಿಸಿದ್ದು ಆತಂಕಕ್ಕೆ ಕಾರಣವಾಗಿದೆ.
ಈದ್ ಮಿಲಾದ್ ತಡೆಯಲು ಓಪನ್ ಚಾಲೆಂಜ್
ನಾಗಮಂಗಲ ಗಣೇಶ ಮೆರವಣಿಗೆಯಲ್ಲಿ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶರಣ್ ಪಂಪ್ವೆಟ್ ಆಕ್ರೋಶ ಹೊರಹಾಕಿದ್ದರು. ಈದ್ ಮಿಲಾದ್ ಮೆರವಣಿಗೆ ಹೇಗೆ ಮಾಡ್ತೀರಿ ನೋಡೋಣ ಎಂದು ಸವಾಲು ಹಾಕಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷ ಮಹಮ್ಮದ್ ಷರೀಫ್ ಓಪನ್ ಚಾಲೆಂಜ್ ಹಾಕಿದ್ದು, ವಾಟ್ಸಾಪ್ ಆಡಿಯೋ ಮೂಲಕ ಧಮ್ ಇದ್ದರೆ ಮಿಲಾದ್ ಮೆರವಣಿಗೆ ತಡಿ ಎಂದು ಸವಾಲ್ ಹಾಕಿದ್ದಾರೆ.
ಶರಣ್ ಪಂಪ್‌ವೆಲ್ ಮತ್ತು ಪುನೀತ್ ಅತ್ತಾವರ ವಿರುದ್ಧ ಕೇಸ್
ಈದ್ ಮಿಲಾದ್ ಮೆರವಣಿಗೆಗೆ ಸಂಬಂಧಿಸಿದಂತೆ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇರೆಗೆ ಸಂಘಪರಿವಾರದ ಶರಣ್ ಪಂಪ್‌ವೆಲ್ ಮತ್ತು ಪುನೀತ್ ಅತ್ತಾವರ ಅವರ ವಿರುದ್ಧ ಸೆನ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋಮುಪ್ರಚೋದನಕಾರಿ ಹೇಳಿಕೆಗಳನ್ನು ನೀಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಸಿರುವ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಅವರು ಸಾಮಾಜಿಕ ಜಾಲತಾಣಗಳ ಮೇಲೆಯೂ ನಿಗಾ ವಹಿಸಿದ್ದಾರೆ.
ಈ ಮಧ್ಯೆ ಬಜರಂಗ ದಳದ ಪುನೀತ್ ಅತ್ತಾವರ ಎಂಬಾತನನ್ನು ಮಂಡ್ಯದಲ್ಲಿ ಪೊಲೀಸರು ವಶಕ್ಕೆ ಪಡೆದಿದಿದ್ದಾರೆ ಎಂದು ತಿಳಿದು ಬಂದಿದೆ.
ಬಿಸಿ ರೋಡ್ ಚಲೋ
ಮಂಗಳೂರಿನ ಬಂಟ್ವಾಳದಲ್ಲಿ ವಿಹಿಂಪ ಮುಖಂಡ ಶರಣ್ ಪಂಪ್‌ವೆಲ್ ಮಾಡಿದ್ದ ಭಾಷಣಕ್ಕೆ ಆಡಿಯೋ ರಿಲೀಸ್ ಮಾಡಲಾಗಿದ್ದು, ತಾಕತ್ತಿದ್ದರೆ ಸೋಮವಾರದ ಈದ್ ಮಿಲಾದ್ ರ್ಯಾಲಿ ತಡೆಯಿರಿ ಎಂದು ಶರೀಫ್ ಒಡ್ಡಿದ ಸವಾಲು ಸ್ವೀಕರಿಸಿದ ಪುನೀತ್ ಅತ್ತಾವರ ಇಂದು ಬಿಸಿ ರೋಡ್ ಚಲೋ ಮಾಡುವುದಾಗಿ ಘೋಷಿಸಿದ್ದಾರೆ.
ಈ ನಡುವೆ ಮಧ್ಯರಾತ್ರಿ ಪೊಲೀಸರು ಪುನೀತ್ ಅತ್ತಾವರರನ್ನು ಮಂಡ್ಯದಲ್ಲಿ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನಲೆ ಭಜರಂಗದಳ ವಿ ಎಚ್ ಪಿಯಿಂದ ಬಿಸಿ ರೋಡ್ ಚಲೋ ಕರೆ ನೀಡಿದ್ದು ಬಿಸಿ ರೋಡ್‌ನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಎಸ್ಪಿ ಯತೀಶ್ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಬಂದೋಬಸ್ತ್ ಮಾಡಲಾಗಿದ್ದು, ಇನ್ನು ಹೆಚ್ಚುವರಿ ಪೊಲೀಸರ ನಿಯೋಜನೆ ಕೂಡ ಮಾಡಲಾಗಿದೆ.












Click it and Unblock the Notifications