ಕೊರೊನಾ ವಿರುದ್ಧ ಹೋರಾಡಿದವರಿಗೇ ಸಂಬಳ ಇಲ್ಲ!; ಯು.ಟಿ.ಖಾದರ್ ಆರೋಪ
ಮಂಗಳೂರು, ಮೇ 31: ಆರೋಗ್ಯ ಸಿಬ್ಬಂದಿಗೆ ಎರಡು ತಿಂಗಳಿನಿಂದ ಸಂಬಳ ನೀಡಿಲ್ಲ. ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಈ ಸಂದರ್ಭದಲ್ಲೇ ವೇತನ ನೀಡದೇ ವೈದ್ಯರಿಗೆ, ನರ್ಸ್ ಗಳಿಗೆ ರಾಜ್ಯ ಸರ್ಕಾರ ಅವಮಾನಿಸುತ್ತಿದೆ ಎಂದು ಮಾಜಿ ಸಚಿವ ಯು.ಟಿ. ಖಾದರ್ ಆರೋಪಿಸಿದ್ದಾರೆ.
ನಗರದಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವವರಿಗೆ ರಾಜ್ಯ ಸರ್ಕಾರ ಸಂಬಳ ನೀಡದೆ ನಿರ್ಲಕ್ಷಿಸುತ್ತಿದೆ. ಕೊರೊನಾ ವಾರಿಯರ್ ಗಳಿಗೇ ಸಂಬಳ ನೀಡಿಲ್ಲ ಎಂದದರೆ, ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸ್ಥಿತಿ ಹೇಗಿರಬೇಡ ಎಂದು ಪ್ರಶ್ನಿಸಿದರು. ಈ ಕೂಡಲೇ ಸಂಬಳ ಬಿಡುಗಡೆ ಮಾಡಬೇಕು ಎಂದೂ ಆಗ್ರಹಿಸಿದರು.

ನ್ಯಾಷನಲ್ ಹೆಲ್ತ್ ಮಿಷನ್ ಅಡಿಯಲ್ಲಿ ಬರುವ ವೈದ್ಯರು, ನರ್ಸ್, ಲ್ಯಾಬ್ ಟೆಕ್ನೀಷಿಯನ್ ಯಾರಿಗೂ ಸಂಬಳ ಆಗಿಲ್ಲ. ಕೊರೊನಾ ವೈರಸ್ ಸೋಂಕು ಹರಡಿದ ಬಿಕ್ಕಟ್ಟಿನ ಸಂದರ್ಭದಲ್ಲಿ ಎರಡು ತಿಂಗಳು ಆರೋಗ್ಯ ಸಿಬ್ಬಂದಿ ಬಿಡುವು ಪಡೆದುಕೊಳ್ಳದೇ ಕೆಲಸ ಮಾಡಿದ್ದಾರೆ. ಆದರೆ ಅವರಿಗೇ ಸಂಬಳ ಕೊಟ್ಟಿಲ್ಲ ಎಂದು ದೂರಿದರು. ಕೋವಿಡ್ ಪರಿಹಾರ ನಿಧಿಯ ಹಣವನ್ನು ಹೇಗೆ ಖರ್ಚು ಮಾಡಿದ್ದಾರೆ ಎಂದು ಬಹಿರಂಗಪಡಿಸಲಿ. ಸರ್ಕಾರ ವೈದ್ಯರಿಗೆ ಸಂಬಳ ನೀಡದಿದ್ದರೆ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.












Click it and Unblock the Notifications