ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ತಂದೆಯ ಫೋಟೋ ವೈರಲ್!
ಮಂಗಳೂರು, ಮೇ 13: ಜನರಿಗೆ ಶ್ರೀಮಂತಿಕೆ, ಅಧಿಕಾರ ಬಂದ ಕೂಡಲೇ ಅವರ ಲೆವೆಲ್ ಬದಲಾಗುತ್ತದೆ. ಅದರಲ್ಲೂ ಕುಟುಂಬದಲ್ಲಿ ಯಾರಾದರೂ ರಾಜಕೀಯದಲ್ಲಿದ್ದಾರೆ ಎಂದರೆ ಕೇಳೊದೇ ಬೇಡ. ಆದರೆ ಶಾಸಕರೊಬ್ಬರ ತಂದೆ, ಮಗ ಕ್ಷೇತ್ರದ ಶಾಸಕನಾದರೂ ತಮ್ಮ ಹಿಂದಿನ ದಿನಗಳನ್ನಾಗಲಿ, ವೃತ್ತಿಯನ್ನಾಗಲಿ ಮರೆತೆ ಇಲ್ಲ .
ಹೌದು, ಇಂದಿಗೂ ಸೈಕಲ್ ಏರಿ ಡೇರಿಗೆ ಹಾಲು ಕೊಡಲು ತೆರಳುತ್ತಾರೆ ಎಂದರೆ ನಂಬಬಹುದೆ? ಆದರೆ ಇದು ಸತ್ಯ ವಿಚಾರ. ಇಲ್ಲಿ ನಾವು ಹೇಳ ಹೊರಟಿರುವುದು ಬೆಳ್ತಂಗಡಿಯ ಬಿಜೆಪಿ ಶಾಸಕರ ತಂದೆಯವರ ಬಗ್ಗೆ.
ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜಾ ತಂದೆ, ಗರ್ಡಾಡಿ ಗ್ರಾಮದ ನಿವಾಸಿ ಮುತ್ತಣ್ಣ ಪೂಂಜಾ ಬಿಳಿ ಶರ್ಟ್, ಲುಂಗಿ ಧರಿಸಿಕೊಂಡು ಹಾಲಿನ ಕ್ಯಾನ್ ಸೈಕಲ್ ಗೆ ಸಿಕ್ಕಿಸಿಕೊಂಡು ನಡೆದುಕೊಂಡು ಹೋಗ್ತಿರೋ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮುತ್ತಣ್ಣ ಅವರು ಮಗ ಶಾಸಕನಾದ್ರೂ, ತಮ್ಮ ದಿನನಿತ್ಯದ ಜೀವನ ಶೈಲಿಯನ್ನು ಕಿಂಚಿತ್ತೂ ಬದಲಿಸಿಕೊಂಡಿಲ್ಲ.ಇಂದಿಗೂ ಸರಳತೆಯನ್ನೇ ಮುಂದುವರೆಸಿಕೊಂಡು ಹೋಗಿದ್ದಾರೆ. 74 ವರ್ಷದ ಮುತ್ತಣ್ಣ ಬದುಕು ನಡೆಸಲು ಕೃಷಿಯನ್ನು ಅವಲಂಬಿಸಿದ್ದಾರೆ.

ಅಡಿಕೆ ತೋಟಕ್ಕೆ ಹೋಗಿ ನೆಲದಲ್ಲಿ ಬಿದ್ದ ಅಡಕೆಗಳನ್ನು ಎತ್ತಿಕೊಂಡು ಬರುತ್ತಾರೆ. ಮಗ ಶಾಸಕನಾದರೂ ತನ್ನ ದೈನಂದಿನ ಕಾಯಕದಿಂದ ಮುತ್ತಣ್ಣ ಇಂದಿಗೂ ವಿಮುಖರಾಗಿಲ್ಲ.

ಈ ಕುರಿತು ಹೆಮ್ಮೆ ಪಡುವ ಶಾಸಕ ಹರೀಶ್ ಪೂಂಜಾ, ತಮ್ಮ ಕುಟುಂಬ ಮೊದಲಿನಿಂದಲೂ ಕೃಷಿಯನ್ನೇ ಅವಲಂಬಿಸಿದೆ. ತಂದೆ ಕೃಷಿಯನ್ನೇ ನಂಬಿಕೊಂಡು ನಮ್ಮನ್ನೆಲ್ಲ ಬೆಳೆಸಿದರು. ನಾನು ಶಾಸಕನಾದರೂ ಅವರ ಬದುಕಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕೃಷಿ ಮತ್ತು ಹೈನುಗಾರಿಕೆಯೇ ತಂದೆಯ ಬದುಕಾಗಿದೆ. ಮುಂಜಾನೆ 6ಕ್ಕೆ ಏಳುವ ಅವರು ತಿಂಡಿ ತಿಂದು, ಡೇರಿಗೆ ಹಾಲು ಹಾಕಿ ಬರುತ್ತಾರೆ. ಬಳಿಕ ಮಧ್ಯಾಹ್ನದವರೆಗೂ ತೋಟದಲ್ಲಿ ಕೆಲಸ ಮಾಡುತ್ತಾರೆ.ಸಣ್ಣದೊಂದು ನಿದ್ದೆ ಮಾಡಿ ಸಂಜೆಗೆ ಹೀಗೆ ಸುತ್ತಾಟಕ್ಕೆ ಹೋಗುತ್ತಾರೆ.ಮರಳಿ ಬಂದು ರಾತ್ರಿ 8.30ಕ್ಕೆ ನಿದ್ದೆಗೆ ಜಾರುತ್ತಾರೆ . ಇದು ಅವರ ಫಿಟ್ನೆಸ್ ಗುಟ್ಟು ಎನ್ನುತ್ತಾರೆ ಶಾಸಕ ಹರೀಶ್ ಪೂಂಜಾ.












Click it and Unblock the Notifications