ಧರ್ಮಸ್ಥಳದಲ್ಲಿ ದೇವರ ದರ್ಶನದ ಸಮಯದಲ್ಲಿ ವ್ಯತ್ಯಯ: ಯಾಕೆ?
ದಕ್ಷಿಣ ಕನ್ನಡ, ಏಪ್ರಿಲ್ 19: ಕರಾವಳಿ ಭಾಗದ ಪ್ರಮುಖ ದೇವಸ್ಥಾನ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಮಹತ್ವದ ಸೂಚನೆ ನೀಡಲಾಗಿದೆ. ಬೇಸಿಗೆ ರಜೆ ಆರಂಭವಾದ ಹಿನ್ನೆಲೆಯಲ್ಲಿ ಧರ್ಮಸ್ಥಳಕ್ಕೆ ಆಗಮಿಸುತ್ತಿರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಭಕ್ತರ ಅನುಕೂಲಕ್ಕಾಗಿ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇಗುಲ ಆಡಳಿತ ಮಂಡಳಿ ವಿಶೇಷ ಸೂಚನೆ ನೀಡಿದೆ.
ಕಳೆದ ಎರಡು ದಿನಗಳಿಂದ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ದೇವರ ದರ್ಶನದಲ್ಲಿ ಸಮಯದಲ್ಲಿ ವ್ಯತ್ಯಯವಾಗುತ್ತಿದ್ದು, ದೂರದಿಂದ ಬಂದ ಕೆಲ ಭಕ್ತರು ಗೊಂದಲಕ್ಕೀಡಾಗಿದ್ದಾರೆ. ದೇವಾಲಯ ಆಡಳಿತ ಮಂಡಳಿ ಈ ಬಗ್ಗೆ ಈಗಾಗಲೇ ಪ್ರಕಟಣೆಗಳನ್ನು ಹೊರಡಿಸಿದ್ದರೂ ಕೂಡ ಅದನ್ನು ಗಮನಿಸದೇ ಅನೇಕರು ದೇವರ ದರ್ಶನಕ್ಕೆ ತೆರಳುತ್ತಿದ್ದಾರೆ. ದೇವರ ದರ್ಶನದಲ್ಲಿ ಸಮಯದಲ್ಲಿ ವ್ಯತ್ಯಯವಾಗುತ್ತಿರುವ ಬಗ್ಗೆ ಸ್ಪಷ್ಟನೆ ಇಲ್ಲಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತಾದಿಗಳ ಗಮನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಳದಲ್ಲಿ ವಿಷು ಜಾತ್ರೆ ಪ್ರಯುಕ್ತ ವಿಶೇಷ ಪೂಜಾ-ಕೈಂಕರ್ಯಗಳು ನಡೆಯುವುದರಿಂದ ದೇವರ ದರ್ಶನ ಸಮಯದಲ್ಲಿ ವ್ಯತ್ಯಯವಾಗಲಿದೆ. 18-04-2025 ರಿಂದ 23-04-2025ರವರೆಗೆ ಬೆಳಗ್ಗೆ 6:30ರಿಂದ 8:30ರವರೆಗೆ ಹೊರಾಂಗಣದಿಂದ ಮಾತ್ರ ದೇವರ ದರ್ಶನಕ್ಕೆ ಅವಕಾಶವಿದೆ.
ಬೆಳಗ್ಗೆ 8:30ರ ಬಳಿಕ ಎಂದಿನಂತೆ ದೇವರ ದರ್ಶನ ನಡೆಯಲಿದೆ. ಸಂಜೆ 5:00 ಗಂಟೆಯಿಂದ ರಾತ್ರಿ 8:30 ಗಂಟೆಯ ವರೆಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶವಿದೆ. 22-04-2025ರ ಬೆಳಗ್ಗೆ 9:00 ಗಂಟೆಯ ಬಳಿಕ ದೇವರ ದರ್ಶನ ಪ್ರಾರಂಭವಾಗಲಿದೆ. ಭಕ್ತಾಧಿಗಳು ಸಹಕರಿಸಬೇಕಾಗಿ ವಿನಂತಿ ಎಂದು ದೇವಾಲಯ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ.
ಏಪ್ರಿಲ್ 13ರಿಂದ ಆರಂಭವಾದ ಶ್ರೀ ಕ್ಷೇತ್ರ ಧರ್ಮಸ್ಥಳದ ವಿಷು ಜಾತ್ರಾ ಮಹೋತ್ಸವ ಏಪ್ರಿಲ್ 23ರವರೆಗೆ ನಡೆಯಲಿದೆ. ವಿಷು ಜಾತ್ರಾ ಮಹೋತ್ಸವದ ಪ್ರಯುಕ್ತ ಏಪ್ರಿಲ್ 15ರಂದು ಅಣ್ಣಪ್ಪ ದೈವಗಳ ನೇಮೋತ್ಸವ ನಡೆದಿದ್ದು, ಏಪ್ರಿಲ್ 16 ರಂದು ಉತ್ಸವ ಹಾಗೂ 17 ರಂದು ಬೈಗಿನ ಬಲಿ ಹೊರಡುವುದು ಹಾಗೂ ಹೊಸಕಟ್ಟೆ ಉತ್ಸವ ನಡೆದಿದೆ.

ಇನ್ನು ನಿನ್ನೆ ಏಪ್ರಿಲ್ 18 ರಂದು ಕಂಚಿಮಾರುಕಟ್ಟೆ ಉತ್ಸವ ನಡೆದಿದ್ದು, ಇಂದು ಏಪ್ರಿಲ್ 19 ರಂದು ಲಲಿತೋದ್ಯಾನವನ ಕಟ್ಟೆ ಉತ್ಸವ ನಡೆಯಲಿದೆ. ಇನ್ನು ಏಪ್ರಿಲ್ 20 ರಂದು ಕೆರೆಕಟ್ಟೆ ಉತ್ಸವ, 21 ರಂದು ಗೌರಿಮಾರುಕಟ್ಟೆ ಉತ್ಸವ, ಚಂದ್ರಮಂಡಲ ಉತ್ಸವ ನಡೆಯಲಿದೆ. ಶ್ರೀ ಮಂಜುನಾಥಸ್ವಾಮಿಯ ಶ್ರೀ ಮನ್ಮಹಾರಥೋತ್ಸವ 22 ರಂದು ನಡೆಯಲಿದ್ದು, ವಿಷು ಜಾತ್ರಾ ಮಹೋತ್ಸವದ ಕೊನೆಯ ದಿನ ಅಂದರೆ ಏಪ್ರಿಲ್ 23ರಂದು ನೇತ್ರಾವತಿಯಲ್ಲಿ ಅವಕೃತ ಸ್ನಾನ ಹಾಗೂ ಧ್ವಜಾವರೋಹಣದೊಂದಿಗೆ ಸಂಪನ್ನಗೊಳ್ಳಲಿದೆ. ಪ್ರತಿನಿತ್ಯ ಸಾವಿರಾರು ಭಕ್ತರು ಈ ದೇವತಾ ಕಾರ್ಯದಲ್ಲಿ ಭಾಗಿಯಾಗುತ್ತಿದ್ದಾರೆ.












Click it and Unblock the Notifications