ಶಿರಾಡಿ ಘಾಟಿ ರಸ್ತೆಗೆ ತಾತ್ಕಾಲಿಕ ಪರಿಹಾರ
ಮಂಗಳೂರು, ಡಿ. 31 : ವಾಹನ ಸವಾರರ ಕೆಂಗಣ್ಣಿಗೆ ಗುರಿಯಾಗಿದ್ದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಹದಗೆಟ್ಟಿರುವ ಶಿರಾಡಿ ಘಾಟಿ ಪ್ರದೇಶದ 47 ಕಿ.ಮೀ.ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಲು ನಿರ್ಧರಿಸಲಾಗಿದೆ. ಈ ಕುರಿತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಆಸ್ಕರ್ ಫರ್ನಾಂಡಿಸ್ ಮಾಹಿತಿ ನೀಡಿದ್ದು, ಜ.31ರೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದಾರೆ.
ಸೋಮವಾರ ಮಂಗಳೂರಿನಲ್ಲಿ ಮಾತನಾಡಿದ ಆಸ್ಕರ್ ಫರ್ನಾಂಡಿಸ್, ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿ ಪ್ರದೇಶದ ದುರಸ್ತಿ ಕಾಮಗಾರಿಯನ್ನು 5 ಕೋಟಿ ರೂ.ವೆಚ್ಚದಲ್ಲಿ ಕೈಗೊಳ್ಳಲಾಗುವುದು, ಜನವರಿ 31ರೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

ತಾತ್ಕಾಲಿಕವಾಗಿ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಶಾಶ್ವತವಾಗಿ ಘಾಟಿ ರಸ್ತೆಯ ಕಾಂಕ್ರೀಟು ಮತ್ತು ಡಾಂಬರು ಕಾಮಗಾರಿಯನ್ನು 95 ಕೋಟಿ ರೂ. ವೆಚ್ಚದಲ್ಲಿ ಮಾಡಲು ಸರ್ಕಾರ ನಿರ್ಧರಿಸಿದ್ದು, ಮುಂದಿನ 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ, ಶಾಶ್ವತ ಕಾಮಗಾರಿಗೆ ಕೇಂದ್ರ ರಸ್ತೆ ನಿಧಿಯಿಂದ 95 ಕೋಟಿ ರೂ.ಮಂಜೂರಾಗಿದೆ ಎಂದು ತಿಳಿಸಿದರು.
ತಾತ್ಕಾಲಿಕ ದುರಸ್ತಿ ಸಂದರ್ಭದಲ್ಲಿ ವಾಹನ ಸಂಚಾರದಿಂದ ತೊಂದರೆ ಉಂಟಾದರೆ, ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆಯಾಗಿ ಚಾರ್ಮಾಡಿ ರಸ್ತೆಯನ್ನು ಬಳಸಲು ನಿರ್ಧರಿಸಲಾಗಿದೆ. ಈ ಉದ್ದೇಶಕ್ಕಾಗಿ ಚಾರ್ಮಾಡಿ ರಸ್ತೆಯ ದುರಸ್ತಿ ಕೆಲಸವನ್ನು ಸದ್ಯ ಕೈಗೊಳ್ಳಲಾಗಿದೆ.
ಕಾಮಗಾರಿಯನ್ನು ತ್ವರಿತಗೊಳಿಸಲು ಜಲ್ಲಿ ಕಲ್ಲು ಮತ್ತು ಇತರ ಸಾಮಗ್ರಿಗಳ ಸಾಗಾಣೆಗೆ ಅನುಕೂಲ ಮಾಡಿಕೊಡುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಲಾಗಿದೆ. ಒಂದು ವಾರದೊಳಗೆ ಅನುಮತಿ ನೀಡುವುದಾಗಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಅನುಮತಿ ದೊರೆತ ಬಳಿಕ ಕಾಮಗಾರಿ ಆರಂಭಿಸಲಾಗುವುದು ಎಂದರು.
ಅಧ್ಯಯನದ ನಂತರ ಕಾಮಗಾರಿ : ಶಿರಾಡಿ ಘಾಟಿ ಪ್ರದೇಶದಲ್ಲಿ 47 ಕಿ.ಮೀ.ಹೆದ್ದಾರಿ ಇದ್ದು. ಈ ಪ್ರದೇಶದಲ್ಲಿ ಸುಮಾರು 7000 ಮಿ.ಮೀ ಮಳೆಯಾಗುತ್ತದೆ. ಮಳೆಗಾಲದಲ್ಲಿ ನೆಲದಿಂದ ನೀರು ಮೇಲಕ್ಕೆ ಉಕ್ಕಿ ಬರುತ್ತದೆ ಆದ್ದರಿಂದ ರಸ್ತೆ ಬೇಗನೆ ಹದಗೆಟ್ಟು ಹೋಗುತ್ತದೆ ಎಂದು ಅಧ್ಯಯನ ನಡೆಸಲಾಗಿದೆ.
ಶಿರಾಡಿ ಘಾಟಿ ಪ್ರದೇಶದಲ್ಲಿ 39 ಕಡಿದಾದ ತಿರುವುಗಳಿವೆ. ನೀರಿನ ಉಕ್ಕಿ ಬರುವ ಕಡೆ ಕಾಂಕ್ರೀಟು ಹಾಗೂ ಉಳಿದ ಭಾಗಗಳಲ್ಲಿ ಡಾಂಬರು ಹಾಕಿ ರಸ್ತೆಯನ್ನು ಅಭಿವೃದ್ಧಿ ಪಡಿಸಲು ತೀರ್ಮಾನಿಸಲಾಗಿದೆ. ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಶಾಶ್ವಾತ ಕಾಮಗಾರಿ ಕೈಗೊಳ್ಳುವ ಕುರಿತು ಯೋಜನೆ ತಯಾರಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.












Click it and Unblock the Notifications