ಮಂಗಳೂರಿನಲ್ಲೂ ಪತ್ರಕರ್ತೆಗೆ ಕಿರುಕುಳ: 2 ಬಂಧನ

ಬಾಧಿತ ಪತ್ರಕರ್ತೆ ಇಂಟರ್ನೆಟ್ ಜರ್ನಲಿಸ್ಟ್ ಆಗಿದ್ದು, ಸ್ಥಳೀಯ ವೆಬ್ ಸೈಟ್ ಒಂದರಲ್ಲಿ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಂಧಿತ ಆರೋಪಿಗಳು Kapitanio ನಿವಾಸಿಗಳಾದ ಜಾಕ್ಸನ್ ಮತ್ತು ಡೆನ್ವರ್.
ವರದಿಗಾರ್ತಿಯು ಪಿಜಿ ಹಾಸ್ಟೆಲಿನಲ್ಲಿ ವಾಸವಾಗಿದ್ದು, ಭಾನುವಾರ ರಾತ್ರಿ ಸುಮಾರು 9 ಗಂಟೆಯಲ್ಲಿ ಆಗ್ನೇಸ್ ಕಾಲೇಜ್ ಬಳಿ ಇರುವ ಪಿಜಿಗೆ ಮರಳುತ್ತಿದ್ದರು. ಆಗ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಅವರನ್ನು ಅಡ್ಡಗಟ್ಟಿ ಕೈ ಹಿಡಿದು ಎಳೆದಾಡಿದ್ದಾರೆ. ಅಪಾಯ ಅರಿತ ಪತ್ರಕರ್ತೆ ಬೊಬ್ಬೆ ಹೊಡೆದಾಗ ಸುತ್ತಮುತ್ತ ಇದ್ದವರು ಜಮಾಯಿಸಿದ್ದಾರೆ. ಆಗ ಆರೋಪಿಗಳು ತಮ್ಮ ಬೈಕ್ ಅನ್ನು ಅಲ್ಲಿಯೇ ಬಿಟ್ಟು ಕಾಲ್ಕಿತ್ತಿದ್ದಾರೆ.
ಬೈಕ್ ನೋಂದಣಿ ಸಂಖ್ಯೆ ಆಧರಿಸಿ ಸಾರ್ವಜನಿಕರು ಆರೋಪಿಯೊಬ್ಬನ ಮನೆ ಪತ್ತೆ ಹಚ್ಚಿ ಆತನ ಮನೆಯವರೆಗೂ ಹೋಗಿದ್ದರು. ಅಲ್ಲದೆ, ಮತ್ತೊಬ್ಬನನ್ನು ಹಿಡಿದು ವಾಪಸ್ ಆಗ್ನೇಸ್ ಕಾಲೇಜಿನವರೆಗೆ ಎಳೆದು ತಂದು ಚೆನ್ನಾಗಿ ತದುಕಿದ್ದರು. ಬಳಿಕ ಪತ್ರಕರ್ತೆಯೂ ಅವನಿಗೆ ಬೈದು ಬುದ್ಧಿವಾದ ಹೇಳಿದ್ದು ಆತ ಕ್ಷಮಾಪಣೆ ಕೇಳಿದ್ದ.
ಈ ವೇಳೆ ಮಹಿಳೆಯೊಬ್ಬರು ಅಲ್ಲಿಗೆ ಬಂದು ಆರೋಪಿ ಪರವಾಗಿ ಮಾತನಾಡಿ, ಯುವಕನ ಅಕ್ಕನಿಗೆ ಶೀಘ್ರದಲ್ಲಿಯೇ ಮದುವೆಯಿದೆ. ಪ್ರಕರಣ ದಾಖಲಾದರೆ ಶುಭ ಸಮಾರಂಭಕ್ಕೆ ತೊಂದರೆಯಾಗುತ್ತದೆ. ದೂರು ದಾಖಲಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದರು. ಬಳಿಕ ಆರೋಪಿಗೆ ಹೊಡೆಯುವುದನ್ನು ನಿಲ್ಲಿಸಿದ ಸ್ಥಳೀಯರು ಅವನನ್ನು ಕದ್ರಿ ಠಾಣೆಗೆ ಕರೆದೊಯ್ದು ದೂರು ನೀಡಿದ್ದಾರೆ. ಸೋಮವಾರ ಬೆಳಗ್ಗೆ ಕದ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಇಬ್ಬರನ್ನೂ ಬಂಧಿಸಿದ್ದಾರೆ.











Click it and Unblock the Notifications