ಮಂಗಳೂರು: ತೀವ್ರಗೊಂಡ ಕಡಲ್ಕೊರೆತಕ್ಕೆ 14 ಮನೆಗಳು ಧ್ವಂಸ
ಮಂಗಳೂರು, ಜುಲೈ 17: ಕರಾವಳಿಯಲ್ಲಿ ಮಳೆಯ ಅಬ್ಬರ ಹೆಚ್ಚಾಗುತ್ತಿದ್ದಂತೆ ಸಮುದ್ರದ ರೌದ್ರ ನರ್ತನ ಆರಂಭವಾಗಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಎಡೆಬಿಡದೆ ಮಳೆಯಾಗುತ್ತಿರುವುದರಿಂದ ಕರಾವಳಿಯ ಎಲ್ಲಾ ನದಿಗಳು ಉಕ್ಕಿ ಹರಿಯುತ್ತಿವೆ.
ಇನ್ನೊಂದೆಡೆ ಕರಾವಳಿಯುದ್ದಕ್ಕೂ ಸಮುದ್ರದ ಆಳೆತ್ತರದ ಅಲೆಗಳು ತೀರ ಪ್ರದೇಶಕ್ಕೆ ನುಗ್ಗುತ್ತಿವೆ. ಪರಿಣಾಮ ಕರಾವಳಿಯಲ್ಲಿ ಕಡಲಕೊರೆತ ತೀವ್ರಗೊಂಡಿದೆ.
ಮಂಗಳೂರು ಹೊರವಲಯದ ಉಳ್ಳಾಲ , ಮುಕ್ಕಚ್ಚೇರಿ, ಕೈಕೊ , ಸೋಮೇಶ್ವರ , ಸಸಿಹಿತ್ಲು ಪ್ರದೇಶದಲ್ಲಿ ಕಡಲ ಕೊರೆತ ತೀವ್ರಗೊಂಡಿದೆ. ಉಳ್ಳಾಲ ಪ್ರದೇಶದಲ್ಲಿ ಕಡಲ್ಕೊರೆತ ತಡೆಗೆ ಹಾಕಿದ್ದ ಬೃಹತ್ ಗಾತ್ರದ ಬಂಡೆಗಳು ಸಮುದ್ರದ ಪಾಲಾಗಿವೆ.

ಉಳ್ಳಾಲ, ಮುಕ್ಕಚ್ಚೇರಿ, ಕೈಕೊ ,ಕಿಲೆರಿಯಾ, ಪ್ರದೇಶದ ಸುಮಾರು 14 ಮನೆಗಳು ಕಡಲ ಆರ್ಭಟಕ್ಕೆ ಧ್ವಂಸಗೊಂಡಿವೆ. ಸುಮಾರು 35 ಕ್ಕೂ ಹೆಚ್ಚು ಮನೆಗಳಿಗೆ ಸಮುದ್ರದ ನೀರು ನುಗ್ಗಿದೆ. ಈ ಹಿನ್ನಲೆಯಲ್ಲಿ ಅಲ್ಲಿಯ ನಿವಾಸಿಗಳನ್ನು ಜಿಲ್ಲಾಡಳಿತ ಸ್ಥಳಾಂತರಿಸಿದೆ.

ಸೋಮೆಶ್ವರ ಹಾಗು ಉಚ್ಚಿಲ ಪ್ರದೇಶದಲ್ಲಿಯೂ ಕಡಲ್ಕೊರೆತ ಮುಂದುವರೆದಿದೆ. ಸಮುದ್ರ ಕಿನಾರೆಯಲ್ಲಿ ಅಪಾಯದಲ್ಲಿರುವ ಮನೆಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಸಂತ್ರಸ್ತರಿಗಾಗಿ ಸಮೀಪದಲ್ಲೇ ಇರುವ ಒಂಬತ್ತುಕೆರೆ ಶಾಲೆಯಲ್ಲಿ ತಾತ್ಕಾಲಿಕ ಗಂಜಿ ಕೇಂದ್ರ ತೆರೆಯಲಾಗಿದೆ.

ಈ ನಡುವೆ ಕಡಲ್ಕೊರೆತದ ಹಾನಿಯ ಕುರಿತು ರಾಜ್ಯ ನಗರಾಭಿವೃದ್ಧಿ ಮತ್ತು ವಸತಿ ಖಾತೆ ಸಚಿವ ಯು.ಟಿ. ಖಾದರ್ ನಿನ್ನೆ ಸಂಜೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಮಂಗಳೂರು ಹೊರವಲಯದ ಉಳ್ಳಾಲ, ಸೋಮೇಶ್ವರ ವ್ಯಾಪ್ತಿಯಲ್ಲಿ ಕಡಲ್ಕೊರೆತದಿಂದ ಸಂಪೂರ್ಣ ಹಾನಿ ಗೊಂಡಿರುವ 41 ಮನೆಗಳ ಕುಟುಂಬಗಳಿಗೆ ಪರ್ಯಾಯ ನಿವೇಶನ ಗುರುತಿಸಿ ನೀಡುವಂತೆ ಸಚಿವ ಯು.ಟಿ. ಖಾದರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.












Click it and Unblock the Notifications