ದ. ಕನ್ನಡದಲ್ಲಿ ಕಾಂಗ್ರೆಸ್ ಗೆಲುವಿಗೆ ಅಭ್ಯರ್ಥಿಗಳನ್ನು ಹಿಂಪಡೆಯಲಿದೆ ಎಸ್‍ಡಿಪಿಐ
ಮಂಗಳೂರು, ಏಪ್ರಿಲ್ 25: ರಾಜಕೀಯದಲ್ಲಿ ಯಾರೂ ಮಿತ್ರರಲ್ಲ, ಯಾರೂ ಶತ್ರುಗಳೂ ಅಲ್ಲ. ಕಾಲಕ್ಕೆ ತಕ್ಕಂತೆ ಬದಲಾಗುವುದೇ ರಾಜಕೀಯ. ಇಲ್ಲಿ ಅಧಿಕಾರಕ್ಕೆ ಎಲ್ಲವೂ ಸಾಧ್ಯ ಎನ್ನುವ ಮಾತಿದೆ. ಈ ಹಿಂದೆ ಬದ್ಧ ವೈರಿಗಳಂತೆ ಬಡಿದಾಡಿ, ಬೈದಾಡಿ ನಂತರ ಚುನಾವಣೆ ಸಂದರ್ಭದಲ್ಲಿ ಮಿತ್ರರಾದ ಹಲವಾರು ನಿದರ್ಶನಗಳು ನಮ್ಮ ಮುಂದಿವೆ. ಇಂತಹುದೇ ಪ್ರಸಂಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಚುನಾವಣೆ ಸಮೀಪಿಸುತ್ತಿದ್ದಂತೆ ಕರಾವಳಿಯಲ್ಲಿ ಕಾಂಗ್ರೆಸ್-ಎಸ್‍ಡಿಪಿಐ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ಕಳೆದ ಕೆಲವು ವರ್ಷಗಳಿಂದ ಎಸ್‍ಡಿಪಿಐ ಮತ್ತು ಅದರ ಮಾತೃ ಸಂಘಟನೆ ಪಿಎಫ್ಐನ್ನು ಕೋಮುವಾದಿ ಸಂಘಟನೆ ಎಂದು ಟೀಕಿಸುತ್ತಾ ಬಂದಿದ್ದ ಕಾಂಗ್ರೆಸ್ ಈಗ ಚುನಾವಣೆ ಸಂದರ್ಭದಲ್ಲಿ ಅದೇ ಪಕ್ಷದೊಂದಿಗೆ ಕೈ ಜೋಡಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಟ್ವಾಳ, ಮಂಗಳೂರು ಉತ್ತರ ಮತ್ತು ಸುಳ್ಯ ವಿಧಾನಸಭಾ ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳು ನಿರ್ಣಾಯಕವಾಗಿದ್ದು ಮತ ವಿಭಜನೆಯಾಗದಂತೆ ತಡೆಯಲು ಕಾಂಗ್ರೆಸ್ ಮುಂದಾಗಿದೆ. ಇದಕ್ಕಾಗಿ ಮುಸ್ಲಿಂ ಮತಗಳನ್ನು ನೆಚ್ಚಿಕೊಂಡಿರುವ ಎಸ್‍ಡಿಪಿಐ ಪಕ್ಷದ ಅಭ್ಯರ್ಥಿಗಳು ಈ ಬಾರಿ ಚುನಾವಣಾ ಕಣಕ್ಕಿಳಿಸದಂತೆ ಕಾಂಗ್ರೆಸ್ ತಂತ್ರ ಹೂಡಿದೆ.

ಸಚಿವ ರಮಾನಾಥ ರೈ ಪ್ರತಿನಿಧಿಸುವ ಬಂಟ್ವಾಳ ಕ್ಷೇತ್ರದಲ್ಲಿ ಎಸ್‍ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ ನಾಮಪತ್ರ ಸಲ್ಲಿಸಿದ್ದರು. ಆದರೆ, ಈಗ ಎಸ್‍ಡಿಪಿಐ ಜೊತೆ ಒಳ ಒಪ್ಪಂದ ಮಾಡಿಕೊಂಡಿರುವ ಕಾಂಗ್ರೆಸ್ ಮುಖಂಡರು ರಿಯಾಜ್ ನಾಮಪತ್ರ ಹಿಂದೆಗೆಸಲು ಮುಂದಾಗಿದ್ದಾರೆ. ಈ ವಿಚಾರವನ್ನು ಎಸ್‍ಡಿಪಿಐ ನಾಯಕರು ಒಪ್ಪಿಕೊಂಡಿದ್ದು ಬಿಜೆಪಿ ಅಭ್ಯರ್ಥಿಗಳು ಜಯಗಳಿಸದಂತೆ ತಡೆಯಲು ಈ ನಿರ್ಧಾರ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.
ಪಿಎಫ್ಐ ಹಾಗೂ ಎಸ್‍ಡಿಪಿಐ ಪಕ್ಷವನ್ನು ಕೋಮುವಾದಿ ಪಕ್ಷ , ಸಂಘಟನೆ ಎಂದು ಕಟುವಾಗಿ ಟೀಕಿಸಿದ್ದ ರಮಾನಾಥ್ ರೈ ಈಗ ಚುನಾವಣೆ ಸಂದರ್ಭದಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ತಮ್ಮ ಗೆಲುವಿಗೆ ಎಸ್‍ಡಿಪಿಐ ಮುಖಂಡರೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಕರಾವಳಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೆಕ್ ಟು ನೆಕ್ ಫೈಟ್ ಇದೆ. ಈ ಸಂದರ್ಭದಲ್ಲಿ ಗೆಲುವಿಗಾಗಿ ಎಸ್‍ಡಿಪಿಐ ಊರುಗೋಲು ಹಿಡಿದಿರುವ ಕಾಂಗ್ರೆಸ್ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ.












Click it and Unblock the Notifications