ಉಡುಪಿ: ಬಡ ಬಾಲಕಿಯ ಚಿಕಿತ್ಸೆಗೆ ಯಕ್ಷಗಾನ ವೇಷ ಧರಿಸಿ 10 ಲಕ್ಷ ರೂ. ಸಂಗ್ರಹಿಸಿದ ಯೂಟ್ಯೂಬರ್
ಮಂಗಳೂರು, ಆಗಸ್ಟ್ 26: ಮುಳುಗುತ್ತಿರುವವನಿಗೆ ಹುಲುಕಡ್ಡಿಯೇ ಆಸರೆಯಾದಂತೆ, ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಪುಟ್ಟ ಬಾಲಕಿಯ ನೆರವಿಗೆ ಕರಾವಳಿಯ ಪ್ರಖ್ಯಾತ ಯೂಟ್ಯೂಬರ್, ಉಡುಪಿಯ ಶಟರ್ ಬಾಕ್ಸ್ ಫಿಲಂಸ್ ಖ್ಯಾತಿಯ ಸಚಿನ್ ಶೆಟ್ಟಿ ತಂಡ ವಿಶೇಷ ಪ್ರಯತ್ನದ ಮೂಲಕ ನೆರವು ನೀಡಿದೆ. ಕೃಷ್ಣಾಷ್ಟಮಿಯ ಸಂದರ್ಭದಲ್ಲಿ ಯಕ್ಷಗಾನ ವೇಷವನ್ನು ಧರಿಸಿ ಒಂದೇ ದಿನದಲ್ಲಿ ಹತ್ತು ಲಕ್ಷರೂಪಾಯಿ ಸಂಗ್ರಹಿಸಿ ಬಾಲಕಿಗೆ ನೆರವು ನೀಡಿದ್ದಾರೆ.
ವೃತ್ತಿಯಲ್ಲಿ ಸಿನಿಮಾಟೋಗ್ರಾಫಿ ಮತ್ತು ಪ್ರವೃತ್ತಿಯಲ್ಲಿ ಬೈಕ್ ರೈಡರ್, ಅಡ್ವೆಂಚರ್ಸ್ ಆಗಿರುವ ಕಾಪು ಮೂಲದ ಸಚಿನ್ ಶೆಟ್ಟಿ ಶಟರ್ ಬಾಕ್ಸ್ ಫಿಲಂಸ್ ಎಂಬ ಯೂಟ್ಯೂಬ್ ಚಾನಲ್‌ಅನ್ನೂ ಹೊಂದಿದ್ದು ಅಪಾರ ಅಭಿಮಾನಿಗಳನ್ನೂ ಹೊಂದಿದ್ದಾರೆ.
ಡೆಮೊನ್ ವೇಷದೊಂದಿಗೆ ಬಡಮಕ್ಕಳ ಚಿಕಿತ್ಸೆಗೆ ಜನರಮುಂದೆ ಬಂದ ರವಿ ಕಟಪಾಡಿ
ಉಡುಪಿ ಜಿಲ್ಲೆಯ ಹೆಬ್ರಿಯ ಕುಚ್ಚೂರು ಗ್ರಾಮದ ಚಂದ್ರ ನಾಯ್ಕ್ ಎಂಬುವವರ ಮಗಳಾದ ಹತ್ತು ವರ್ಷದ ಸಾನ್ವಿ ಎನ್ನುವ ಬಾಲಕಿ "ತಲಾಸೆಮಿಯಾ ಮೇಜರ್" ಎನ್ನುವ ವಿಚಿತ್ರ ಖಾಯಿಲೆಯಿಂದ ಬಳಲುತ್ತಿದ್ದು "ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್" ಎನ್ನುವ ಚಿಕಿತ್ಸೆ ಮಾಡಬೇಕಿದೆ. ಈ ಚಿಕಿತ್ಸೆಗೆ 40 ಲಕ್ಷ ರೂಪಾಯಿ ಬೇಕಾಗಿದೆ. ಬಡ ಕುಟುಂಬದ ಸಾನ್ವಿ ಹೆತ್ತವರಿಗೆ ಅಷ್ಟು ದೊಡ್ಡ ಮಟ್ಟದ ಹೊಂದಿಸುವುದು ಅಸಾಧ್ಯವಾಗಿದೆ. ಮನೆಯ ಬೆಳಕಾಗಿದ್ದ ಮಗಳ ಚಿಕಿತ್ಸೆಗೆ ಹಣ ಹೊಂದಿಸುವುದರ ಬಗ್ಗೆ ಚಿಂತಾಕ್ರಾಂತರಾದ ಸಾನ್ವಿ ಹೆತ್ತವರಿಗೆ ಸಚಿನ್ ಶೆಟ್ಟಿ ಸ್ನೇಹಿತ ವರ್ಗ ಈಗ ನೆರವಾಗಿದೆ.
ಸಮಾಜಮುಖಿ ಕಾರ್ಯದಲ್ಲೂ ತೊಡಗಿಕೊಂಡಿರುವ ಸಚಿನ್ ಶೆಟ್ಟಿ ಪುಟ್ಟ ಮಗುವಿನ ಪ್ರಾಣ ಉಳಿಸಲು ಮಾಡಿದ ಕಾರ್ಯ ಈಗ ಜನರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಸಚಿನ್ ಶೆಟ್ಟಿ, ಸುದೀಪ್ ಶೆಟ್ಟಿ, ಚೇತನ್ ಶೆಟ್ಟಿ, ನಿತೀಶ್ ಪೂಜಾರಿ ಸೇರಿದಂತೆ ಸ್ನೇಹಿತರ ವರ್ಗ ಕೃಷ್ಣ ಜನ್ಮಾಷ್ಟಮಿಯ ದಿನದಂದು ಯಕ್ಷಗಾನ ವೇಷ ಧರಿಸಿ ಉಡುಪಿ ಪೇಟೆಯಲ್ಲಿ ಸುತ್ತಾಡಿ ಮಗುವಿಗಾಗಿ ಹಣ ಸಂಗ್ರಹ ಮಾಡಿದೆ.
ಶ್ರೀರಾಮ ಮಂದಿರಕ್ಕೆ ಬಂದ ಚಿನ್ನ, ಬೆಳ್ಳಿ ಆಭರಣಗಳನ್ನು ಕರಗಿಸಲು ಹೊಸ ಪ್ಲಾನ್ ಏನು?
ಯಕ್ಷಗಾನದ ಮಹಿಷಾಸುರ ವೇಷ, ರಾಕ್ಷಸ ವೇಷವನ್ನು ಧರಿಸಿ ಜನರ ಬಳಿ ಹೋಗಿ ಸಾನ್ವಿಗಾಗಿ ಸಚಿನ್ ಶೆಟ್ಟಿ ತಂಡ ಧನ ಸಂಗ್ರಹ ಮಾಡಿದೆ. ಹೀಗೆ ಒಟ್ಟು 10,51,418 ರೂಪಾಯಿ ಸಂಗ್ರಹ ಮಾಡಿದೆ. ಬಡ ಮಕ್ಕಳ ಚಿಕಿತ್ಸೆಗಾಗಿ ವೇಷ ತೊಡುವ ರವಿ ಕಟಪಾಡಿ ಮೂಲಕ ಸಾನ್ವಿ ಕುಟುಂಬಕ್ಕೆ ಹಣ ನೀಡಲಾಗಿದೆ.
ರವಿ ಕಟಪಾಡಿ ಕಳೆದ ಏಳು ವರ್ಷಗಳಿಂದ ಪ್ರತಿ ಕೃಷ್ಣ ಜನ್ಮಾಷ್ಟಮಿಯ ಸಂಧರ್ಭದಲ್ಲಿ ವಿವಿಧ ವೇಷ ಧರಿಸಿ ಬಡ ಮಕ್ಕಳಿಗೆ ಸಹಾಯ ಮಾಡುತ್ತಿದ್ದಾರೆ. ಅವರು ಒಟ್ಟು 66 ಮಕ್ಕಳಿಗೆ ಸಹಾಯ ಮಾಡಿದ್ದು, ಒಂದು ಕೋಟಿ ರೂಪಾಯಿ ಸನಿಹ ಧನ ಸಹಾಯ ಮಾಡಿದ್ದಾರೆ. ಹೀಗಾಗಿ ರವಿ ಕಟಪಾಡಿಯವರನ್ನೇ ಸ್ಫೂರ್ತಿ ಯಾಗಿ ಪಡೆದ ಸಚಿನ್ ಶೆಟ್ಟಿ ತಂಡ ತಾವೂ ವೇಷ ಧರಿಸಿ ಸಾನ್ವಿ ಚಿಕಿತ್ಸೆ ಗೆ ನೆರವಾಗಿದ್ದಾರೆ. ಹೀಗಾಗಿ ತಮಗೆ ಸ್ಫೂರ್ತಿ ಯಾದ ರವಿ ಕಟಪಾಡಿ ಅವರಿಂದ ಸಾನ್ವಿಗೆ ಧನಸಹಾಯ ಮಾಡಿಸಿದ್ದು ಮತ್ತೊಂದು ವಿಶೇಷವಾಗಿತ್ತು.

ಡೆಮಾನ್ ವೇಷ ಧರಿಸಿದ್ದ ರವಿ
ವೃತ್ತಿಯಲ್ಲಿ ಸೆಂಟ್ರಿಂಗ್ ಕಾರ್ಮಿಕರಾಗಿರುವ ರವಿ ಕಟಪಾಡಿ ಕಳೆದ ಏಳು ವರ್ಷದಲ್ಲಿ ಪ್ರತಿ ಅಷ್ಟಮಿಯ ಸಂದರ್ಭದಲ್ಲಿ ವಿವಿಧ ವೇಷ ತೊಟ್ಟು ಸಾರ್ವಜನಿಕರಿಂದ ಒಟ್ಟು 89.75ಲಕ್ಷ ರೂಪಾಯಿ ಸಂಗ್ರಹ ಮಾಡಿದ್ದರು. ಈ ಬಾರಿ 10.5ಲಕ್ಷ ರೂಪಾಯಿ ಸಂಗ್ರಹಿಸಿ ಒಂದು ಕೋಟಿ ರೂಪಾಯಿ ತಲುಪುವ ಗುರಿಯನ್ನಿಟ್ಟುಕೊಂಡು ರವಿ ಕಟಪಾಡಿ ಅಷ್ಟಮಿಯ ವಿಟ್ಲ ಪಿಂಡಿಯ ದಿನ ಉಡುಪಿಯ ಬೀದಿಬೀದಿ ಸುತ್ತುವುದರೊಂದಿಗೆ ದೇಣಿಗೆ ಸಂಗ್ರಹಿಸಿದ್ದರು.
ಈ ಬಾರಿ ಸಂಗ್ರಹವಾಗುವ ಮೊತ್ತವನ್ನು ಮೂರು ಕ್ಯಾನ್ಸರ್ ಪೀಡಿತ ಮಕ್ಕಳ ಸಹಿತ ಏಳು ಮಕ್ಕಳಿಗೆ ನೀಡುವ ಉದ್ದೇಶವನ್ನು ರವಿ ಕಟಪಾಡಿ ಹೊಂದಿದ್ದರು.