ಮೊದಲ ರೈಡ್‌ನಲ್ಲೇ ಭೀಕರ ಅಪಘಾತ; ಡಾರ್ಕ್ ರೈಡರ್ಸ್ ದುರಂತ ಆರಂಭ
ಮಂಗಳೂರು, ಸೆಪ್ಟೆಂಬರ್ 06; ಬೈಕ್ ರೈಡಿಂಗ್ ಕ್ರೇಜ್ ಇದ್ದ ಆ ಯುವಕರು 'ಡಾರ್ಕ್ ರೈಡರ್ಸ್' ಎಂಬ ತಂಡ ಕಟ್ಟಿಕೊಂಡರು. ಊರಿನ ಗಣ್ಯ ಅತಿಥಿಯ ಕೈಯಿಂದ ತಂಡದ ನೂತನ ಪೋಸ್ಟರ್ ಕೂಡಾ ಉದ್ಘಾಟನೆ ಮಾಡಿದರು. ನೂತನ ತಂಡದ ಮೊದಲ ರೈಡ್ ಸಕಲೇಶಪುರ ಅಂತಾ ಯೋಜನೆ ರೂಪಿಸಿ ಬೈಕ್ ಹತ್ತಿದರು.
ತಂಡ ರೈಡ್ ಆರಂಭಿಸಿ ಒಂದು ಗಂಟೆ ಕಳೆಯುವಷ್ಟರಲ್ಲಿಯೇ ವಿಧಿ ಆ ತಂಡದ ಮೇಲೆ ಕರಿನೆರಳು ಬೀರಿದೆ. ಬೈಕ್ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದರೆ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಈ ದುರಂತಮಯ ಘಟನೆಗೆ ಸಾಕ್ಷಿಯಾಗಿರೋದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕುಂಬ್ರ ಎಂಬ ಪ್ರದೇಶ.
ಕುಂಬ್ರ, ಶೇಖಮಲೆ, ಅರಿಯಡ್ಕ ಸೇರಿದಂತೆ ಸ್ಥಳೀಯ ಪ್ರದೇಶದ ಏಳೆಂಟು ಯುವಕರು ಬೈಕ್ ರೈಡರ್ಸ್ ತಂಡವನ್ನು ಕಟ್ಟಿಕೊಂಡಿದ್ದರು. ತಮ್ಮ ಕನಸಿನ ತಂಡಕ್ಕೆ 'ಡಾರ್ಕ್ ರೈಡರ್ಸ್ ಕುಂಬ್ರ' ಎಂಬ ಹೆಸರನ್ನು ಇಟ್ಟಿದ್ದರು.

ನೂತನ ರೈಡಿಂಗ್ ತಂಡದ ಉದ್ಘಾಟನೆ ಮತ್ತು ಪೋಸ್ಟರ್ ಬಿಡುಗಡೆಯನ್ನು ಕುಂಬ್ರದಲ್ಲೇ ಬೆಳಗ್ಗಿನ ವೇಳೆ ಮಾಡಿದ್ದಾರೆ. ಆ ಬಳಿಕ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿ ನೂತನ ತಂಡದ ಮೊದಲ ರೈಡ್ ಆರಂಭಿಸಿದ್ದಾರೆ.
ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಈ ವೇಳೆ ಪಶ್ಚಿಮ ಘಟ್ಟದ ಸೌಂದರ್ಯವೂ ಅದ್ಭುತವಾಗಿರುತ್ತದೆ ಎಂಬ ಕಲ್ಪನೆಯೂ ಅವರಲ್ಲಿ ಇದ್ದಿದ್ದರಿಂದ ನಿಗದಿಯಂತೇ ಸಕಲೇಶಪುರಕ್ಕೆ ಪ್ರಯಾಣವನ್ನು ಈ ತಂಡ ಬೆಳೆಸಿದೆ.

ಆದರೆ ಡಾರ್ಕ್ ರೈಡರ್ಸ್ ತಂಡಕ್ಕೆ ವಿಧಿ ಮಾತ್ರ ಕಾರ್ಮೋಡವನ್ನು ಬೀರಿದೆ. ಪುತ್ತೂರಿನಿಂದ ಉಪ್ಪಿನಂಗಡಿಯಾಗಿ ಸಕಲೇಶಪುರ ದತ್ತ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಪ್ರಯಾಣ ಬೆಳೆಸಿ ಗಂಟೆ ಕಳೆಯುವಷ್ಟರಲ್ಲಿ ತಂಡದ ಒಂದು ಬೈಕ್ ನೆಲ್ಯಾಡಿಯ ರೇಖ್ಯಾ ಗ್ರಾಮದ ರೆಂಜಿರ ಎಂಬಲ್ಲಿ ವಿರುದ್ಧ ದಿಕ್ಕಿನಿಂದ ಬಂದ, ಹೊಸ ವಾಹನವನ್ನು ತುಂಬಿಕೊಂಡು ಮಂಗಳೂರು ಭಾಗಕ್ಕೆ ಬರುತ್ತಿದ್ದ ಕಂಟೈನರ್ ಲಾರಿಗೆ ಡಿಕ್ಕಿ ಹೊಡೆದಿದೆ.
ಲಾರಿಗೆ ಬೈಕ್ ಡಿಕ್ಕಿಹೊಡೆದ ರಭಸಕ್ಕೆ ಬೈಕ್ ಸವಾರ ಕುಂಬ್ರದ ಅರಿಯಡ್ಕ ಗ್ರಾಮದ ಕೌಡಿಚ್ಚಾರ್ ನಿವಾಸಿ ಮನೋಜ್ ಮೇಲೆ ಲಾರಿ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮನೋಜ್ ಸಹಸವಾರನಾಗಿದ್ದ ಚೇತನ್ ಎಂಬಾತನಿಗೆ ಗಂಭೀರ ಗಾಯವಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ತಂಡದ ಬೇರೆ ಸವಾರರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಪ್ರದೇಶ ತಲುಪುವ ವೇಳೆಯಲ್ಲಿ ಮಾಹಿತಿ ಬಂದಿದೆ. ಗುಂಡ್ಯದಿಂದ ಘಟನಾ ಸ್ಥಳಕ್ಕೆ ಬರುತ್ತಿದ್ದ ವೇಳೆ ಇನ್ನೊಂದು ಬೈಕ್ ಕೂಡಾ ಸ್ಕಿಡ್ ಆಗಿದ್ದು,ಇಬ್ಬರಿಗೆ ಗಾಯವಾಗಿದೆ.ಸಚಿನ್ ಎಂಬಾತನ ಕಾಲು ಮರಿತವಾಗಿದ್ದು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ತಂಡದ ಉದ್ಘಾಟನೆಯ ಸಮಯದಲ್ಲೇ ವಿಘ್ನ ಎದುರಾಗಿತ್ತು. ಕುಂಬ್ರದಲ್ಲಿ ಉದ್ಘಾಟನೆ ಮಾಡುವ ಸಂದರ್ಭದಲ್ಲಿ ಮೂರು ಬೈಕ್ ಗಳು ಪಲ್ಟಿಯಾಗಿತ್ತು ಅಂತಾ ತಿಳಿದುಬಂದಿದೆ.
'ಡಾರ್ಕ್ ರೈಡರ್ಸ್' ಅಂತಾ ಹೆಸರಿನ ತಂಡಕ್ಕೆ ಆರಂಭವೇ ಡಾರ್ಕ್ ಆಗಿದೆ. ಬೈಕ್ ಮೇಲೇರಿ ಊರೂರು ಸುತ್ತುವ ಕನಸಿನ ಬೈಕರ್‌ಗಳ ತಂಡಕ್ಕೆ ಆರಂಭವೇ ವಿಘ್ನವಾಗಿದ್ದು ಒಂದು ಅಮೂಲ್ಯ ಜೀವ ಬಲಿಯಾಗಿ, ಇಬ್ಬರ ಸ್ಥಿತಿ ಗಂಭೀರವಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications