ಮಂಗಳೂರು: ಯಕ್ಷಗಾನ ತಂಡದ ವಿರುದ್ಧ ರಾಮಾಯಣಕ್ಕೆ ಅಪಮಾನ ಆರೋಪ
ಮಂಗಳೂರು, ಸೆಪ್ಟೆಂಬರ್ 25: ಪೌರಾಣಿಕ ಕಥೆಯಾದ ರಾಮಾಯಣವನ್ನು ಅಪಹಾಸ್ಯ ಮಾಡುವ ರೀತಿಯ ಯಕ್ಷಗಾನ ಪ್ರದರ್ಶಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ.
ಸುಳ್ಯದ ಐವರ್ನಾಡಿನಲ್ಲಿ ದಸರಾ ಕಾರ್ಯಕ್ರಮದ ಅಂಗವಾಗಿ ಇಲ್ಲಿಯ ಯುವಶಕ್ತಿ ಎಂಬ ಸಂಘಟನೆ ರಾಮಾಯಣ ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸಿತ್ತು. ಈ ಯಕ್ಷಗಾನ ಪ್ರಸಂಗದಲ್ಲಿ ಶ್ರೀ ರಾಮ ಹಾಗೂ ಸೀತಾದೇವಿಯನ್ನು ಹಾಸ್ಯಾಸ್ಪದ ರೀತಿಯಲ್ಲಿ ತೋರಿಸಲಾಗಿದ್ದು ಈ ಯಕ್ಷಗಾನ ಪ್ರದರ್ಶನದ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ತುಳುವಿನಲ್ಲಿ ಈ ಯಕ್ಷಗಾನ ಪ್ರದರ್ಶಿಸಲಾಗಿದ್ದು ಹಿಂದೂ ದೇವರುಗಳನ್ನು ಅವಮಾನ ಮಾಡಿ ಕಲಾವಿದರು ಅಪಚಾರ ಎಸಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.
ಈ ಯಕ್ಷಗಾನ ಪ್ರಸಂಗದ ವಿಡಿಯೋ ತುಣುಕೊಂದರಲ್ಲಿ ಅಶೋಕವನದಲ್ಲಿ ಬಂಧನದಲ್ಲಿರುವ ಸೀತಾದೇವಿ , ಶ್ರೀರಾಮನನ್ನು ನೆನೆಯುವ ಪ್ರಸಂಗ ಪ್ರದರ್ಶಿಸಲಾಗಿದೆ .
ಅಶೋಕವನದಲ್ಲಿ ರಾಕ್ಷಸರ ನಡುವೆ ಬಂಧನದಲ್ಲಿರು ಸೀತಾದೇವಿ ಮನದಾಳದ ತೊಳಲಾಟ ವನ್ನು ಅತ್ಯಂತ ಹಾಸ್ಯಾಸ್ಪದವಾಗಿ ಪ್ರದರ್ಶಿಸಲಾಗಿದೆ .
ಸೀತಾದೇವಿಯ ಪ್ರಾತ್ರ ಮಾಡಿದ ಕಲಾವಿದನ ಮಾತು "ಶ್ರೀರಾಮನನ್ನು ಸಂಪರ್ಕಿಸಲು ಮೊಬೈಲ್ ನೆಟ್ ವರ್ಕ್ ಸಿಗುತ್ತಿಲ್ಲ. ವಾಟ್ಸಪ್ ನಲ್ಲಿ ಚಾಟ್ ಮಾಡೋಣ ಅಂದರೆ ಇಂಟರ್ನೆಟ್ ಇಲ್ಲ . ಫೇಸ್ ಬುಕ್ ನಲ್ಲಿ ಕಮೆಂಟ್ ಲೈಕ್ ಮಾಡೋಣ ಅಂದರೆ ಇಂಟರ್ ನೆಟ್ ಇಲ್ಲ . ವೈಫೈ ಯಂತೂ ಇಲ್ಲವೇ ಇಲ್ಲ."

ಯಕ್ಷಗಾನ ಪ್ರಸಂಗದ ಇನ್ನೊಂದು ಸನ್ನಿವೇಶದಲ್ಲಿ ಶ್ರೀರಾಮ ತನ್ನ ಸಹೋದರ ಲಕ್ಷ್ಮಣ ನೊಂದಿಗೆ ಸಂಭಾಷಿಸುವುದನ್ನು ಮೊಬೈಲ್ ನಲ್ಲಿ ನಡೆಸುವ ಸನ್ನಿವೇಶವನ್ನಾಗಿಸಿ ಅಪಹಾಸ್ಯ ಮಾಡುವ ರೀತಿಯಲ್ಲಿ ಪ್ರದರ್ಶಿಸಲಾಗಿದೆ.
ಸುಳ್ಯದಲ್ಲಿ ನಡೆದ ಈ ಯಕ್ಷಗಾನ ಪ್ರದರ್ಶನಕ್ಕೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಯಕ್ಷಗಾನ ಪ್ರದರ್ಶನದ ವಿವಾದ ಈಗ ರಾಜಕೀಯ ಸಂಘರ್ಷಕ್ಕೂ ವೇದಿಕೆಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ .
ಸುಳ್ಯದ ಕಾಂಗ್ರೇಸ್ ಮುಖಂಡ ವೆಂಕಪ್ಪ ಗೌಡ ಈ ವಿವಾದಾತ್ಮಕ ಯಕ್ಷಗಾನ ಪ್ರದರ್ಶಿಸಿದ ಯುವಶಕ್ತಿ ಸಂಘಟನೆಯ ಗೌರವಾಧ್ಯಕ್ಷರಾಗಿದ್ದಾರೆ. ಸೆಪ್ಟೆಂಬರ್ 23 ರಂದು ಸುಳ್ಯದ ಐವರ್ನಾಡಿನಲ್ಲಿ ದಸರಾ ಕಾರ್ಯಕ್ರಮದ ಅಂಗವಾಗಿ ಈ ಯಕ್ಷಗಾನ ಪ್ರದರ್ಶನ ನಡೆದಿತ್ತು . ಈ ದಸರಾ ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಚಾಲನೆ ನೀಡಿದ್ದರು .












Click it and Unblock the Notifications