ಹುಲಿ ಕುಣಿತದ ತಾಳಕ್ಕೆ ಹೆಜ್ಜೆ ಹಾಕಿದ ಸಚಿವ ರಮಾನಾಥ ರೈ
ಮಂಗಳೂರು, ಅಕ್ಟೋಬರ್ 2: ಅರಣ್ಯ ಸಚಿವ ರಮಾನಾಥ ರೈ ತುಳುನಾಡಿನ ಜನಪದ ಹುಲಿ ಕುಣಿತದ ತಾಳಕ್ಕೆ ಹೆಜ್ಜೆ ಹಾಕಿ ಸುದ್ದಿ ಕೇಂದ್ರಕ್ಕೆ ಬಂದಿದ್ದಾರೆ. ಸಚಿವರ ವ್ಯಾಘ್ರ ಕುಣಿತದ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಬೆಂಗಳೂರಿನಲ್ಲಿ ವನ್ಯಜೀವಿ ಸಪ್ತಾಹದ ಅಂಗವಾಗಿ ನಡೆದ ವಾಕಥಾನ್‍ನಲ್ಲಿ ಹುಲಿವೇಷ ಕುಣಿತವನ್ನು ಆಯೋಜಿಸಲಾಗಿತ್ತು. ಲಾಲ್‍ಬಾಗ್ ಸಮೀಪದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಹುಲಿವೇಷದ ತಾಳ ಜೋರಾಗುತ್ತಿದ್ದಂತೆ ರಮಾನಾಥ ರೈ ಅವರ ಕಾಲುಗಳು ತನ್ನಿಂದ ತಾನೆ ಹೆಜ್ಜೆ ಹಾಕಲು ಆರಂಭಿಸಿದವು.

ತುಳುನಾಡಿನ ಜನಪದದ ತಾಳಕ್ಕೆ ತುಳುವರಾಗಿ ರೈ ಸುಮ್ಮನೆ ಕೂರುವುದುಂಟೇ? ಸಾಧ್ಯವೇ ಇಲ್ಲ. ಹುಲಿ ಕುಣಿತದ ತಾಸೆಯ ಸದ್ದು ಜೋರಾಗುತ್ತಿದ್ದಂತೆ ರೈ ಹುಲಿ ನೃತ್ಯ ಆರಂಭಿಸಿಯೇ ಬಿಟ್ಟರು.
ತಮ್ಮದು ಅಜಾನುಬಾಹು ಶರೀರವಾದರೂ ಸಚಿವ ರಮಾನಾಥ್ ರೈ ಅವರಿಗೆ ಹುಲಿವೇಷ, ಹುಲಿ ಕುಣಿತವೆಂದರೆ ಮೊದಲೇ ಖುಷಿ. ಆ ಖುಷಿಯನ್ನು ತಾವೂ ಕುಣಿಯುವ ಮೂಲಕ ವ್ಯಕ್ತಪಡಿಸಿದರು.
ಇವರ ಕುಣಿತ ನೋಡಿ ಜತೆಯಲ್ಲಿದ್ದ ಖ್ಯಾತ ನಟ ಪ್ರಕಾಶ್ ರೈ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರೂ ಸಚಿವರ ಜತೆ ಸಣ್ಣದಾಗಿ ಹೆಜ್ಜೆ ಹಾಕಿದರು.











Click it and Unblock the Notifications