ಕಾಂಗ್ರೆಸ್ ಪಾಂಡವರಂತೆ, ಬಿಜೆಪಿ ಕೌರವರಂತೆ : ರಾಹುಲ್ ಗಾಂಧಿ
ಮಂಗಳೂರು, ಮಾರ್ಚ್ 20 : 'ನಿಕ್ಲೆಗ್ ಮಾತ್ರೆಗ್ಲಾ ನಮಸ್ಕಾರ' ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳೂರಿನಲ್ಲಿ ತುಳುವಿನಲ್ಲಿ ಭಾಷಣ ಆರಂಭಿಸಿದರು. ರಾಹುಲ್ ಗಾಂಧಿ ಅವರು 3ದಿನಗಳ ಪ್ರವಾಸಕ್ಕಾಗಿ ಮಂಗಳವಾರ ಕರ್ನಾಟಕಕ್ಕೆ ಆಗಮಿಸಿದ್ದಾರೆ.
ಮಂಗಳೂರಿನ ನೆಹರೂ ಮೈದಾನದಲ್ಲಿ ಮಂಗಳವಾರ ಸಂಜೆ ಜನಾಶೀರ್ವಾದ ಸಮಾವೇಶವನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿದರು. 'ನಿಕ್ಲೆಗ್ ಮಾತ್ರೆಗ್ಲಾ ನಮಸ್ಕಾರ' ಎಂದು ತುಳುವಿನಲ್ಲಿ ಭಾಷಣ ಪ್ರಾರಂಭಿಸಿದ ರಾಹುಲ್ ಜನರ ಚಪ್ಪಾಳೆ ಗಿಟ್ಟಿಸಿದರು.
In Pics: ಕರಾವಳಿಯಲ್ಲಿ ರಾಹುಲ್ ಗಾಂಧಿ ಮಿಂಚಿನ ಸಂಚಾರ
'ನೂರಾರು ವರ್ಷಗಳ ಹಿಂದೆ ಮಹಾಭಾರತದಲ್ಲಿ ಕೌರವ ಹಾಗೂ ಪಾಂಡವರ ನಡುವೆ ಯುದ್ಧ ನಡೆದಿತ್ತು. ಅಲ್ಲಿ ನಡೆದಿದ್ದು ಅಧಿಕಾರ ಹಾಗು ಸತ್ಯದ ನಡುವಿನ ಯುದ್ದ. ಕೌರವರು ಅಧಿಕಾರಕ್ಕೆ ಯುದ್ಧ ಮಾಡಿದರು, ಆದರೆ, ಪಾಂಡವರು ಸತ್ಯಕ್ಕಾಗಿ ಯುದ್ಧ ಮಾಡಿದರು. ಬಿಜೆಪಿ ಕೌರವರಂತೆ ಅಧಿಕಾರಕ್ಕಾಗಿ ಹಂಬಲಿಸುತ್ತಾರೆ' ಎಂದು ರಾಹುಲ್ ಗಾಂಧಿ ಟೀಕಿಸಿದರು...
ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಸೇರಿದಂತೆ ಹಲವು ನಾಯಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಬಿಜೆಪಿ ಅಧಿಕಾರದ ಹಿಂದೆ ಓಡುತ್ತಿದೆ
ಕೌರವರು ಅಧಿಕಾರಕ್ಕೆ ಯುದ್ಧ ಮಾಡಿದರು, ಆದರೆ, ಪಾಂಡವರು ಸತ್ಯಕ್ಕಾಗಿ ಯುದ್ಧ ಮಾಡಿದರು. ಬಿಜೆಪಿ ಕೌರವರಂತೆ ಇಂದು ಅಧಿಕಾರಕ್ಕಾಗಿ ಹಂಬಲಿಸುತ್ತಾರೆ. ಗೋವಾ, ಮಣಿಪುರ, ಮೇಘಾಲಯದಲ್ಲಿ ಹಣ ಕೊಟ್ಟು ನಾಯಕರನ್ನು ಬಿಜೆಪಿಗರು ಖರೀದಿಸಿ ಅಧಿಕಾರ ಹಿಡಿದರು.
ಹಿಂಸೆ ಮಾಡಿ, ಹಣ ಬಲ ಪ್ರಯೋಗ, ವಿಭಾಗಿಸುವ ತಂತ್ರದಿಂದ ಬಿಜೆಪಿ ಎಲ್ಲವನ್ನೂ ಖರೀದಿಸುವ ಕೆಲಸ ಮಾಡುತ್ತಿದೆ. ಮೋದಿ ಬಂದು ಒಂದರ ಹಿಂದೊಂದು ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿ ಅಧಿಕಾರದ ಹಿಂದೆ ಓಡುತ್ತಿದೆ ಎಂದು ರಾಹುಲ್ ವಾಗ್ದಾಳಿ ನಡೆಸುತ್ತಿದೆ.
ಬಿಜೆಪಿ ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತದೆ. ಕಾಂಗ್ರೆಸ್ ಸತ್ಯಕ್ಕಾಗಿರುವುದು, ದೇಶಕ್ಕಾಗಿ ಕಾಂಗ್ರೆಸ್ ದುಡಿದಿದೆ , ದುಡಿಯುತ್ತಿದೆ. ನಾವು ಕಾಂಗ್ರೆಸ್ ಪಕ್ಷದವರು ಪಾಂಡವರಂತೆ, ಬಿಜೆಪಿಯವರು ಕೌರವರಂತೆ.

ನುಡಿದಂತೆ ನಡೆ ಮೋದಿಜಿ ಎಂದ ರಾಹುಲ್
15 ಲಕ್ಷ ರೂಪಾಯಿ ಬ್ಯಾಂಕ್ ಖಾತೆ ಹಾಕುತ್ತೇನೆ, ನನ್ನನ್ನು ಪ್ರಧಾನಿ ಮಾಡಿ ಎಂದು ಮೋದಿ ಹೇಳಿದ್ದರು. ಆದರೆ, ನುಡಿದಂತೆ ನಡೆದಿಲ್ಲ ಮೋದಿ. ಅಮೇರಿಕಕ್ಕೆ ಹೋಗಿ ಮೋದಿ 60 ವರ್ಷ ಭಾರತದಲ್ಲಿ ಏನೂ ನಡೆದಿಲ್ಲ ಎನ್ನುತ್ತಾರೆ. ಇದು ಅವರು ಪೂರ್ವಜರಿಗೆ ಅವಮಾನ ಮಾಡಿದಂತೆ. ಅವರು ಹೇಳುವಂತೆ ಹಿಂದೆ ನಾರಾಯಣ ಗುರು, ಅಬ್ಬಕ್ಕ, ಬಸವಣ್ಣ ಇರಲಿಲ್ಲವೇ? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.

ಶ್ರೀಮಂತರು ಹಣ ಪಡೆದು ಪರಾರಿಯಾದರು
ತನಗೆ ಇಷ್ಟವಿಲ್ಲವೆಂದು ನವೆಂಬರ್ 8 ರಂದು 500, 1000 ಸಾವಿರದ ನೋಟುಗಳನ್ನು ಪ್ರಧಾನಿ ಮೋದಿ ಬ್ಯಾನ್ ಮಾಡಿದರು. ಜನರ ದುಡ್ಡನ್ನು ನೀರವ್ ಮೋದಿ ತೆಗೆದುಕೊಂಡು ಪರಾರಿಯಾದಾಗ ಮೌನವಾಗಿದ್ದರು. ಬ್ಯಾಂಕ್ ಮುಂದೆ ಕ್ಯೂ ನಿಂತರೂ ನಿಮಗೆ ಹೊಸ ನೋಟು ಸಿಗಲಿಲ್ಲ. ಆದರೆ, ಶ್ರೀಮಂತರಿಗೆ ಹಣ ಸುಲಭವಾಗಿ ಸಿಕ್ಕಿತು ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

ಕರ್ನಾಟಕದಲ್ಲಿ ನಮ್ಮ ಪಕ್ಷದ ಆಡಳಿತ
ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಆಡಳಿತ ನಡೆಸಲಿದೆ. ಈ ಹಿಂದೆ ಮಾಡಿದ್ದಕ್ಕಿಂತ ದ್ವಿಗುಣ ಕೆಲಸ ಕಾಂಗ್ರೆಸ್ ರಾಜ್ಯದಲ್ಲಿ ಮಾಡಲಿದೆ. ಬಿಜೆಪಿ ಅಧಿಕಾರಕ್ಕಾಗಿ ಸಂಘಟನೆ ಮಾಡುತ್ತದೆ. ಮೋದಿ ಬಂದು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ.
ಆ ವೇದಿಕೆಯಲ್ಲಿ 4 ಮುಖಂಡರು ಜೈಲಿನಲ್ಲಿ ಸಮಯ ಕಳೆದವರು ಇರುತ್ತಾರೆ. ಜೈಲಿಗೆ ಹೋಗಿ ಬಂದ ಮುಖ್ಯಮಂತ್ರಿಯಾಗಿದ್ದವರು ಕೂಡಾ ವೇದಿಕೆಯಲ್ಲಿರುತ್ತಾರೆ. ಭಾರತೀಯರು ಯೋಚನೆ ಮಾಡುತ್ತಾರೆ ಮೋದಿಜೀ ಅವರು ಮುರ್ಖರಲ್ಲ ಎಂದು ರಾಹುಲ್ ಕುಟುಕಿದರು.

ನರೇಂದ್ರ ಮೋದಿ ವ್ಯಂಗ್ಯವಾಡಿದ ರಾಹುಲ್
ಡೋಕ್ಲಾಮ್ ನಲ್ಲಿ ಚೀನಾ ಬಂದು ಕುಳಿತಿದೆ, ರಸ್ತೆ ನಿರ್ಮಾಣ ಮಾಡಿದೆ. ಆದರೆ, 56 ಇಂಚಿನ ಎದೆಯಿಂದ ಒಂದು ಶಬ್ದ ಆಚೆಗೆ ಬಂದಿಲ್ಲ. ಮೋದಿಯವರೇ ನಿಮ್ಮಲ್ಲಿ ಒಂದು ವರ್ಷದ ಕಾಲ ಸಮಯವಿದೆ. ಯುವಕರಿಗೆ ಉದ್ಯೋಗ ನೀಡಿ, ರೈತರ ಬೆಳೆಗೆ ಸರಿಯಾದ ಮೌಲ್ಯ ಒದಗಿಸಿ. ಮೇಕ್ ಇನ್ ಇಂಡಿಯಾ, ಸ್ವಚ್ಛ ಭಾರತ್ ಎಲ್ಲವೂ ಫ್ಲಾಪ್ ಆಗಿದೆ.

ಕೆಲಸ ಮಾಡಿ ಮೋದಿಜಿ
ನರೇಂದ್ರ ಮೋದಿ ಅವರೇ ಸ್ವಲ್ಪವಾದರೂ ಕೆಲಸ ಮಾಡಿ, ಮಾತಿನಿಂದ ದೇಶ ನಡೆಯುವುದಿಲ್ಲ. ದೇಶ ಸತ್ಯದ ಹಾದಿಯಲ್ಲಿ ನಡೆದಲ್ಲಿ, ಯಾವುದೇ ದೇಶವನ್ನು ಎದುರಿಸುವ ತಾಕತ್ ಹೊಂದಲಿದೆ.ಕಾರ್ಯಕರ್ತರ ಧ್ವನಿ ಕೇಳಿ ಅವರಿಗೆ ಟಿಕೆಟ್ ಒದಗಿಸಲಾಗುವುದು, ಯಾವುದೇ ದ್ವೇಷದಿಂದ, ರೋಷದಿಂದಲ್ಲ, ಪ್ರೀತಿಯಿಂದ ಬಿಜೆಪಿಯನ್ನು ಸೋಲಿಸಿ.












Click it and Unblock the Notifications