ಶಿರಾಡಿ ಘಾಟ್ ರಸ್ತೆಗೆ ಪರ್ಯಾಯ ಮಾರ್ಗಗಳು
ಮಂಗಳೂರು, ಜು. 28 : ಶಿರಾಡಿ ಘಾಟ್ ನಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯುವಾಗ ಮಂಗಳೂರು-ಬೆಂಗಳೂರು ನಡುವೆ ಸಂಚರಿಸುವ ವಾಹನಗಳಿಗಾಗಿ ಐದು ಪರ್ಯಾಯ ಮಾರ್ಗಗಳನ್ನು ಗುರುತಿಸಲಾಗಿದೆ. ಡಿಸೆಂಬರ್ 1ರಿಂದ ಮುಂದಿನ 2015ರ ಮೇ 31ರವರೆಗೆ ಘಾಟ್ ನಲ್ಲಿ ವಾಹನ ಸಂಚಾರ ಸ್ಥಗಿತಗೊಳ್ಳಲಿದೆ.
ಶಿರಾಡಿ ಘಾಟ್ ಅಭಿವೃದ್ಧಿ ಕಾಮಗಾರಿಯ ಸಭೆಯಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು, ಶಿರಾಡಿ ಘಾಟಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸಕಲ ರೀತಿಯಲ್ಲಿ ಪ್ರಯತ್ನಿಸಲಾಗುವುದು ಎಂದು ಹೇಳಿದರು.[ಅಪಾಯಕಾರಿ ಶಿರಾಡಿ ಘಾಟ್ ರಸ್ತೆಗೆ ಕಾಯಕಲ್ಪ]
ಶಿರಾಡಿ ಘಾಟ್ ನಲ್ಲಿ ಕಾಮಗಾರಿ ನಡೆಯುವ ವೇಳೆಯಲ್ಲಿ ಕರಾವಳಿ ಹಾಗೂ ರಾಜಧಾನಿ ಬೆಂಗಳೂರಿನ ನಡುವೆ ಸಂಚರಿಸುವ ವಾಹನಗಳ ಸಂಚಾರಕ್ಕೆ ಐದು ಪರ್ಯಾಯ ಮಾರ್ಗಗಳನ್ನು ಜಿಲ್ಲಾಡಳಿತ ಸೂಚಿಸಿದೆ. ಪರ್ಯಾಯ ಮಾರ್ಗಗಳ ಸ್ಥಿತಿಗತಿ ಅಧ್ಯಯನ ನಡೆಸುವುದಕ್ಕೆ ರಾಷ್ಟ್ರೀಯ ಹೆದ್ದಾರಿ ವಿಭಾಗ, ಲೋಕೋಪಯೋಗಿ ಇಲಾಖೆ, ಮೆಸ್ಕಾಂ ಹಾಗೂ ಕೆಎಸ್ಆರ್ಟಿಸಿ ಅಧಿಕಾರಿಗಳನ್ನೊಳಗೊಂಡ ತಂಡ ರಚಿಸಲಾಗಿದೆ ಎಂದರು.

ಪರ್ಯಾಯ ಮಾರ್ಗ ಒಂದು
ಮಂಗಳೂರು-ಬೆಂಗಳೂರು ನಡುವೆ ಸಂಚರಿಸುವ ಸಾಮಾನ್ಯ ಬಸ್ಸುಗಳು ಚಾರ್ಮಾಡಿ ಘಾಟಿ ಮೂಲಕ, ಲಕ್ಸುರಿ ಬಸ್ಸುಗಳು ಮಾಣಿ- ಮೈಸೂರು ರಸ್ತೆಯ ಮೂಲಕ, ಬುಲೆಟ್ ಟ್ಯಾಂಕರ್ ಗಳು, ಮಲ್ಟಿ ಆಕ್ಸೆಲ್ ವಾಹನಗಳು ಸುರತ್ಕಲ್-ಉಡುಪಿ- ಸಿದ್ದಾಪುರ-ಹುಲಿಕಲ್ ಘಾಟಿ- ಶಿವಮೊಗ್ಗ ಮಾರ್ಗವಾಗಿ ಸಂಚರಿಸಬೇಕು.

ಈ ಮಾರ್ಗದ ಮೂಲಕವೂ ಸಾಗಬಹುದು
ಲಘು, ಘನ ವಾಹನಗಳು ಈ ಮೂರೂ ಮಾರ್ಗಗಳನ್ನು ಬಳಸಿಕೊಳ್ಳಬಹುದು. ಜತೆಗೆ ಆಗುಂಬೆ ಘಾಟಿ- ಎನ್‌ಆರ್‌ಪುರ- ತರೀಕೆರೆ ಮಾರ್ಗವಾಗಿ ಹಾಗೂ ಮಂಗಳೂರು-ಕಾರ್ಕಳ-ಕೆರಕಟ್ಟೆ ಘಾಟಿ-ಕಳಸ ಚಿಕ್ಕಮಗಳೂರು ಮಾರ್ಗವಾಗಿಯೂ ಸಂಚರಿಸಬಹುದು.

ಎಷ್ಟು ವಾಹನ ಸಂಚಾರವಿದೆ
ಶಿರಾಡಿ ಘಾಟ್ ನಲ್ಲಿ ನಿತ್ಯ 23 ಸಾವಿರ ಪಿಸಿಯುಗಳಷ್ಟು (ಪರ್ ಕಾರ್ ಯೂನಿಟ್) ವಾಹನ ದಟ್ಟಣೆ ಇದೆ. ಇಷ್ಟೊಂದು ವಾಹನಗಳು ಇತರ ಮಾರ್ಗಗಳಲ್ಲಿ ಸಂಚರಿಸುವಾಗ ಅಲ್ಲಿನ ರಸ್ತೆಗಳ ಮೇಲೆ ಬೀಳುವ ಹೊರೆಯ ಬಗ್ಗೆ, ಹಾಗೂ ರಸ್ತೆಯ ಇಕ್ಕೆಲಗಳನ್ನು ಬಲಪಡಿಸುವ ಬಗ್ಗೆ ತಂಡ ಅಧ್ಯಯನ ನಡೆಸಲಿದ್ದು, ವರದಿ ತಯಾರಿಸಲಿದೆ.

ಕಾಂಕ್ರೀಟ್ ರಸ್ತೆ ನಿರ್ಮಾಣ
ಮಾರನಹಳ್ಳಿಯಿಂದ ಗುಂಡ್ಯದವರೆಗಿನ 26 ಕಿ.ಮೀ. ರಸ್ತೆಯನ್ನು 150 ಕೋಟಿ ವೆಚ್ಚದಲ್ಲಿ ಕಾಂಕ್ರಿಟೀಕರಣಗೊಳಿಸಲಾಗುತ್ತದೆ. ಕಾಂಕ್ರೀಟ್ ರಸ್ತೆ 8.5 ಮೀ ಅಗಲ ಹಾಗೂ 1 ಅಡಿ ದಪ್ಪ ಇರಲಿದೆ. 65 ಕೋಟಿ ವೆಚ್ಚದಲ್ಲಿ 13 ಕಿ.ಮೀ. ಉದ್ದದ ರಸ್ತೆ ಕಾಂಕ್ರಿಟೀಕರಣಕ್ಕೆ ಟೆಂಡರ್ ನೀಡಲಾಗಿದೆ. ಉಳಿದ 13 ಕಿ.ಮೀ.ಗೆ ಟೆಂಡರ್ ಪ್ರಕ್ರಿಯೆ ಬಾಕಿ ಇದೆ.

ಎರಡು ಹಂತದ ಕಾಮಗಾರಿ
ಪದೇ-ಪದೇ ಹಾಳಾಗುವ ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿಯ ಶಾಶ್ವತ ಅಭಿವೃದ್ಧಿ ಕಾಮಗಾರಿಯನ್ನು ಸರ್ಕಾರ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕೈಗೊಂಡಿದೆ. ಒಟ್ಟು ಎರಡು ಹಂತದಲ್ಲಿ ರಸ್ತೆಯನ್ನು ಅಭಿವೃದ್ಧಿ ಮಾಡಲು ಯೋಜನೆ ತಯಾರಿಸಲಾಗಿದೆ. ಶಿರಾಡಿ ಘಾಟ್ ಮಂಗಳೂರು ಮತ್ತು ಬೆಂಗಳೂರು ನಗರಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು, ಹಾಸನ, ಕುಣಿಗಲ್, ಚನ್ನರಾಯಪಟ್ಟಣ, ಸಕಲೇಶಪುರ ಮುಂತಾದವು ಹೆದ್ದಾರಿ ವ್ಯಾಪ್ತಿಯಲ್ಲಿ ಬರುತ್ತವೆ.












Click it and Unblock the Notifications