ಪುತ್ತೂರು ನಗರಸಭೆ ಬಿಜೆಪಿ ತೆಕ್ಕೆಗೆ, ಉಳ್ಳಾಲ, ಬಂಟ್ವಾಳದಲ್ಲಿ ಅತಂತ್ರ, ಕೈಗೆ ಮುಖಭಂಗ

ಮಂಗಳೂರು, ಸೆಪ್ಟೆಂಬರ್ 03: ದಕ್ಷಿಣ ಕನ್ನಡ ಜಿಲ್ಲೆಯ 2 ನಗರ ಸಭೆ ಹಾಗೂ 1 ಪುರಸಭೆಗೆ ನಡೆದ ಚನಾವಣೆಯ ಫಲಿತಾಂಶ ಹೊರ ಬಿದ್ದಿದೆ. ಉಳ್ಳಾಲ ಮತ್ತು ಪುತ್ತೂರು ನಗರಸಭೆ ಹಾಗೂ ಬಂಟ್ವಾಳದ ಪುರಸಭೆಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ.

ಈ ಮೂರು ಕಡೆ ನಡೆದ ಜಿದ್ದಾಜಿದ್ದಿನ ಹೋರಾಟದಲ್ಲಿ ಪುತ್ತೂರಿನಲ್ಲಿ ಬಿಜೆಪಿ ಭಾರೀ ಅಂತರದ ಗೆಲುವಿನೊಂದಿಗೆ ಜಯಭೇರಿ ಬಾರಿಸಿದೆ. ಉಳ್ಳಾಲ ಹಾಗು ಬಂಟ್ವಾಳದಲ್ಲಿ ಸ್ಪಷ್ಟ ಬಹುಮತ ಯಾರಿಗೂ ದೊರೆಯದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಉಳ್ಳಾಲ ನಗರ ಸಭೆಯ ಒಟ್ಟು 31 ಸ್ಥಾನಗಳ ಪೈಕಿ ಬಿಜೆಪಿ 6, ಕಾಂಗ್ರೆಸ್ 13 , ಎಸ್ ಡಿಪಿಐ 6, ಜೆಡಿ ಎಸ್ 4 ಸೇರಿದಂತೆ 2 ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ರಾಜ್ಯ ವಸತಿ ಖಾತೆ ಸಚಿವ ಹಾಗು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಅವರ ಸ್ವ ಕ್ಷೇತ್ರ ಉಳ್ಳಾಲದಲ್ಲಿ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ದೊರೆಯದೇ ಮುಖಭಂಗವಾಗಿದೆ.

ಇಲ್ಲಿ ಗಮನಿಸ ಬೇಕಾದ ಇನ್ನೊಂದು ಅಂಶ ಎಂದರೆ ಎಸ್ ಡಿಪಿಐ 6 ಹಾಗೂ ಜೆಡಿಎಸ್ 4 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಕಾಂಗ್ರೆಸ್ ಸ್ಥಾನಗಳನ್ನು ಕಬಳಿಸಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಳ್ಳಾಲದಲ್ಲಿ ಬಿಜೆಪಿ ದುರ್ಬಲ ಎಂದೇ ಪರಿಗಣಿಸಲಾಗುತ್ತದೆ.

ಬಿಜೆಪಿ ಇಲ್ಲಿ ಕೇವಲ 6 ಸ್ಥಾನಗಳಿಗೆ ತೃಪ್ತಿಪಟ್ಟಿದೆ. ಇನ್ನೊಂದು ಕುತೂಹಲದ ಅಂಶ ಎಂದರೆ 16 ನೇ ವಾರ್ಡ್ ನ ಫಲಿತಾಂಶವನ್ನು ಟಾಸ್ ಹಾಕುವ ಮೂಲಕ ನಿರ್ಧರಿಸಲಾಗಿದೆ. ಈ ವಾರ್ಡ್ ನ ಮತ ಎಣಿಕೆ ಸಂದರ್ಭದಲ್ಲಿ ಕಾಂಗ್ರೆಸ್ ಹಾಗು ಬಿಜೆಪಿ ಅಭ್ಯರ್ಥಿಗಳು ಸಮಾನವಾಗಿ 370 ಮತಗಳನ್ನು ಪಡೆದಿದ್ದರು.

ಈ ಹಿನ್ನೆಲೆಯಲ್ಲಿ ಟಾಸ್ ಗೆಲ್ಲುವ ಮೂಲಕ ಬಿಜೆಪಿ ಅಭ್ಯರ್ಥಿ ರಾಜೇಶ್ ಜಯ ಸಾಧಿಸಿದ್ದಾರೆ. ಉಳ್ಳಾಲದ ಈ ಫಲಿತಾಂಶದ ಮೂಲಕ ಸಚಿವ ಯು .ಟಿ ಖಾದರ್ ಅವರಿಗೆ ಮುಖಭಂಗವಾಗಿದೆ ಎಂದು ಹೇಳಲಾಗಿದೆ.

 ಉಳ್ಳಾಲ ನಗರಸಭೆ

ಉಳ್ಳಾಲ ನಗರಸಭೆ

ಉಳ್ಳಾಲ ನಗರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯಲು ಕನಿಷ್ಟ 16 ಸ್ಥಾನಗಳು ಬೇಕು. ಈ ಹಿನ್ನೆಲೆಯಲ್ಲಿ ಇಲ್ಲಿ ಕಾಂಗ್ರೆಸ್, ಜೆಡಿಎಸ್ ಅಥವಾ ಎಸ್ ಡಿ ಪಿ ಐ ನೊಂದಿಗೆ ಮೈತ್ರಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ಕಳೆದ ಬಾರಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ 7 ರಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೂ ಉಳ್ಳಾಲದಲ್ಲಿ ಮಾತ್ರ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು. ಉಳ್ಳಾಲ ಕಾಂಗ್ರೆಸ್ ನ ಭದ್ರಕೋಟೆ ಎಂದೇ ಪರಿಗಣಿಲಾಗುತ್ತದೆ.

ಈ ಹಿನ್ನೆಲೆಯಲ್ಲಿ ಉಳ್ಳಾಲ ನಗರ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಮಡೆದು ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ವಿಮರ್ಶಿಲಾಗಿತ್ತು. ಆದರೆ ಕಾಂಗ್ರೆಸ್ ನ ಲೆಕ್ಕಾಚಾರ ಜೆಡಿಎಸ್ , ಎಸ್ ಡಿ ಪಿ ಐ ತಲೆ ಕೆಳಗಾಗಿಸಿದೆ. ಉಳ್ಳಾಲದಲ್ಲಿ ಕಾಂಗ್ರೆಸ್ ಹಿಡಿತ ಕೈ ತಪ್ಪುತ್ತಿದೆ ಎಂಬುದಕ್ಕೆ ಈ ಫಲಿತಾಂಶ ಸ್ಪಷ್ಟ ಸೂಚನೆ ಎಂದು ವಿಮರ್ಶಿಸಲಾಗುತ್ತದೆ.

 ಬಂಟ್ವಾಳ ಪುರಸಭೆ

ಬಂಟ್ವಾಳ ಪುರಸಭೆ

ಬಂಟ್ವಾಳ ಪುರಸಭೆಯ ಒಟ್ಟು 27 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 11, ಕಾಂಗ್ರೆಸ್ 12 , ಎಸ್ ಡಿ ಪಿ ಐ 4 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಆದರೆ ಇಲ್ಲಿ ಸ್ಪಷ್ಟ ಬಹುಮತ ದೊರೆಯದ ಕಾರಣ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಬಂಟ್ವಾಳದ ಈ ಫಲಿತಾಶ ಕಾಂಗ್ರೆಸ್ ಹಾಗು ಬಿಜೆಪಿಗೆ ಮುಖಭಂಗ ಎಂದೇ ಪರಿಗಣಿಸಲಾಗುತ್ತಿದೆ .

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಬಲ ಅಭ್ಯರ್ಥಿ ಹಾಗು ಸಚಿವರಾಗಿದ್ದ ರಮಾನಾಥ್ ರೈ ಅವರನ್ನು ಸೋಲಿಸಿ ಬಿಜೆಪಿಯ ರಾಜೇಶ್ ನಾಯಕ್ ಗೆಲುವು ಸಾಧಿಸಿದ್ದರು. ಜಿಲ್ಲೆಯಲ್ಲಿ ಬಿಜೆಪಿ ಈ ಗೆಲುವಿಗೆ ಭಾರೀ ಪ್ರಾಮುಖ್ಯತೆ ನೀಡಲಾಗಿತ್ತು.

ಆದರೆ ಈ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿತ ಸ್ಥಾನ ಗಳಿಸುವಲ್ಲಿ ಎಡವಿ ಮುಖಭಂಗ ಅನುಭವಿಸಿದೆ. ಇನ್ನೊಂದೆಡೆ ಕಾಂಗ್ರೆಸ್ ಗೂ ಭಾರೀ ಮುಖಭಂಗ ಎಂದೇ ಪರಿಗಣಿಸಲಾಗುತ್ತಿದೆ. ಬಂಟ್ವಾಳ ಪುರಸಭೆಯಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದ ಸ್ಥಳೀಯ ಸಂಸ್ಥೆ. ಈ ಬಾರಿ ಇಲ್ಲಿ ಮತ್ತೊಮ್ಮೆ ಸ್ಪಷ್ಟ ಬಹುಮತ ಪಡೆಯಬೇಕೆಂದು ಮಾಜಿ ಸಚಿವ ರಮಾನಾಥ್ ರೈ ತಂತ್ರ ರೂಪಿಸಿ ಅಖಾಡಕ್ಕೆ ಇಳಿದಿದ್ದು ಎಲ್ಲೆಡೆ ಸುತ್ತಿ ಭಾರಿ ಪ್ರಚಾರ ನಡೆಸಿದ್ದರು .

ಆದರೆ ಬಂಟ್ವಾಳದಲ್ಲಿ ಸ್ಪಷ್ಟ ಬಹುಮತ ಪಡೆಯುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಅಧಿಕಾರದ ಗದ್ದುಗೆ ಹಿಡಿಯ ಬೇಕಾದರೆ ಕಾಂಗ್ರೆಸ್ ಗೆ ಎಸ್ ಡಿ ಪಿ ಐ ನೊಂದಿಗೆ ಮೈತ್ರಿ ಅನಿವಾರ್ಯ.

ವಿಧಾನ ಸಭಾ ಚುನಾವಣೆಯಲ್ಲಿ ಸೋಲನುಭವಿಸಿದ್ದರೂ, ಮುಂಬರುವ ಲೋಕಸಭೆಯ ಚುನಾವಣೆಗೆ ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಹೊಸ ಇನ್ನಿಂಗ್ಸ್ ಆರಂಭಿಸುವ ಇರಾದೆಯಲ್ಲಿದ್ದ ರಮಾನಾಥ್ ರೈ ಗೆ ಈ ಫಲಿತಾಂಶದಿಂದ ಹಿನ್ನಡೆ ಯಾಗಲಿದೆ ಎಂದು ಹೇಳಲಾಗುತ್ತಿದೆ.

 ಪುತ್ತೂರು ನಗರ ಸಭೆ

ಪುತ್ತೂರು ನಗರ ಸಭೆ

ಪುತ್ತೂರು ನಗರ ಸಭೆ ಬಿಜೆಪಿ ಪಾಲಾಗಿದೆ . ಪುತ್ತೂರು ನಗರ ಸಭೆಗೆ ನಡೆದ ಜಿದ್ದಾಜಿದ್ದಿನ ಹೋರಾಟದಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಪುತ್ತೂರು ನಗರ ಸಭೆ ಬಿಜೆಪಿ ಪಾಲಾಗಿದ್ದು ಅಧಿಕಾರದ ಗದ್ದುಗೆ ಹಿಡಿಯಲಿದೆ. ಪುತ್ತೂರಿನಲ್ಲಿ ಬಿಜೆಪಿ ದಾಖಲೆಯ ಗೆಲುವು ಸಾಧಿಸಿದೆ.

ಇಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ. ಇಲ್ಲಿ ಇನ್ನೊಂದು ಗಮನಾರ್ಹ ಸಂಗತಿ ಎಂದರೆ ಇದೇ ಮೊದಲಬಾರಿಗೆ ಪುತ್ತೂರು ನಗರಸಭೆಯಲ್ಲಿ ಎಸ್ ಡಿ ಪಿ ಐ ಖಾತೆ ತೆರೆದಿದೆ. ಪುತ್ತೂರು ನಗರ ಸಭೆಯ ಒಟ್ಟು 31 ವಾರ್ಡುಗಳ ಪೈಕಿ ಬಿಜೆಪಿ 25 ವಾರ್ಡ್ ಗಳಲ್ಲಿ ಜಯಗಳಿಸುವ ಮೂಲಕ ಜಯಭೇರಿ ಬಾರಿಸಿದೆ. ಕಾಂಗ್ರೆಸ್ ಕೇವಲ 5 ಸ್ಥಾನಗಳಿಗೆ ತೃಪ್ತಿ ಪಟ್ಟರೆ, ಎಸ್.ಡಿ.ಪಿ.ಐ 1 ಸ್ಥಾನದೊಂದಿಗೆ ಖಾತೆ ತೆರೆದಿದೆ.

ಶಕುಂತಲಾ ಶೆಟ್ಟಿ ಮೇಲೆ ಅಸಮಾಧಾನ

ಶಕುಂತಲಾ ಶೆಟ್ಟಿ ಮೇಲೆ ಅಸಮಾಧಾನ

ಪುತ್ತೂರಿನಲ್ಲಿ ಕಳೆದ ಬಾರಿ ಚುನಾವಣೆಯಲ್ಲಿ 27 ವಾರ್ಡ್ ಗಳಲ್ಲಿ 15 ನ್ನು ಕಾಂಗ್ರೆಸ್ ಗೆದಿದ್ದರೆ, ಬಿಜೆಪಿ 12 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿತ್ತು. ನಗರಸಭೆಯಾದ ಬಳಿಕ ವಾರ್ಡ್ ಗಳ ಸಂಖ್ಯೆ 27 ರಿಂದ 31 ಕ್ಕೆ ಏರಿಕೆಯಾಗಿದೆ. ಪುತ್ತೂರಿನಲ್ಲಿ ಕೇವಲ 5 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಭಾರೀ ಮುಖಭಂಗ ಅನುಭವಿಸಿದೆ.

ಈ ಫಲಿತಾಂಶ ಕಾಂಗ್ರೆಸ್ ನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರ ಭವಿಷ್ಯದ ಮೇಲೆ ಪ್ರಶ್ನೆ ಮೂಡಿಸಿದೆ. ಕಾಂಗ್ರೆಸ್ ನ ಈ ಸೋಲಿಗೆ ಪುತ್ತೂರು ಕಾಂಗ್ರೆಸ್ ಪಾಳಯದಲ್ಲಿರುವ ಕಚ್ಚಾಟ ಹಾಗು ಶಕುಂತಾಲಾ ಶೆಟ್ಟಿ ಅವರ ಮೇಲಿರುವ ಅಸಮಾಧಾನ ಕಾರಣ ಎಂದು ಹೇಳಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+