ಬೆಳ್ಳಂಬೆಳಗ್ಗೆ ಪ್ರಶಾಂತ್ ಪೂಜಾರಿ ಹತ್ಯೆ ಪ್ರಕರಣ ಆರೋಪಿ ಮೇಲೆ ದಾಳಿ
ಮಂಗಳೂರು, ಸೆಪ್ಟೆಂಬರ್.24: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಮಾರಕಾಸ್ತ್ರಗಳು ಝಳಪಿಸಿವೆ. ಇಂದು ಬೆಳ್ಳಂಬೆಳಗ್ಗೆ ಮೂಡಬಿದ್ರೆಯಲ್ಲಿ ನೆತ್ತರು ಹರಿದಿದೆ. ಮೂಡಬಿದ್ರೆಯ ಹಿಂದೂ ಸಂಘಟನೆಯ ಮುಖಂಡ ಪ್ರಶಾಂತ್ ಪೂಜಾರಿ ಹತ್ಯೆ ಪ್ರಕರಣದ ಆರೋಪಿಯ ಮೇಲೆ ದುಷ್ಕರ್ಮಿಗಳ ತಂಡ ದಾಳಿ ನಡೆಸಿದೆ.
ಮೂಡಬಿದರೆ ಹೊರವಲಯದ ಗಂಟಾಲ್ ಕಟ್ಟೆ ಎಂಬಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ 6.30ಕ್ಕೆ ಇನ್ನೋವಾ ಕಾರೊಂದರಲ್ಲಿ ಬಂದ ತಂಡ ಇಮ್ತಿಯಾಜ್ (30) ಎಂಬಾತನನ್ನು ತಲವಾರಿನಿಂದ ಕಡಿದು ಪರಾರಿಯಾಗಿದೆ.

ಇಮ್ತಿಯಾಜ್ ಗಂಟಾಲ್ ಕಟ್ಟೆ ಯಲ್ಲಿ ಹೋಟೆಲ್ ಹೊಂದಿದ್ದು, ಇಂದು ಮುಂಜಾನೆ ಇನ್ನೋವಾ ಕಾರಿನಲ್ಲಿ ಅಪರಿಚಿತರ ತಂಡ ಹೊಟೇಲ್ ಗೆ ಬಂದಿತ್ತು. ಕಾರಿನಲ್ಲಿ ಬಂದಿದ್ದ ಯುವಕರು ಬೆಳಗ್ಗೆ ಚಹಾ ಕುಡಿಯಲೆಂದು ಹೋಟೆಲ್ ಒಳಗೆ ಬಂದರು.
ಚಹಾಕ್ಕೆಂದು ಇಮ್ತಿಯಾಜ್ ಒಳಹೋದಾಗಲೇ ತಲವಾರಿನೊಂದಿಗೆ ನುಗ್ಗಿದ ತಂಡ ಆತನ ತಲೆ ಮತ್ತು ಕಾಲಿಗೆ ಕಡಿದು ಪರಾರಿಯಾಗಿದೆ. ಗಂಭೀರವಾಗಿ ಹಲ್ಲೆಗೊಳಗಾದ ಇಮ್ತಿಯಾಜ್ ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆ ಗೆ ದಾಖಲಿಸಲಾಗಿದೆ.

ಇಮ್ತಿಯಾಜ್, ಪ್ರಶಾಂತ್ ಪೂಜಾರಿ ಹತ್ಯೆ ಪ್ರಕರಣದ ಆರೋಪಿ ಎನ್ನಲಾಗುತ್ತಿದ್ದು ಪ್ರತೀಕಾರಕ್ಕಾಗಿ ಕೊಲೆ ಯತ್ನ ನಡೆದಿರುವ ಸಾಧ್ಯತೆಯಿದೆ.
ಮೂಡಬಿದ್ರೆ ಠಾಣೆ ಪೊಲೀಸರು ಹಾಗೂ ಮಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಠಿಯಾಗಿದ್ದು ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದಾರೆ.

ದುಷ್ಕರ್ಮಿಗಳ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಕುರಿತು ಪೊಲೀಸರು ತನಿಖೆ ಅರಂಭಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಇನ್ನೋವಾ ಕಾರ್ ಗಾಗಿ ಪೊಲೀಸರು ಹುಡುಕಾಟ ಅರಂಭಿಸಿದ್ದಾರೆ.
ಬಜರಂಗದಳ ಮುಖಂಡ ಪ್ರಶಾಂತ್ ಪೂಜಾರಿಯನ್ನು ಎರಡು ವರ್ಷಗಳ ಹಿಂದೆ ಮೂಡಬಿದ್ರೆಯ ಹೂವಿನ ಪೇಟೆಯಲ್ಲಿ ಅವರ ತಂದೆ ಎದುರಲ್ಲೇ ದುಷ್ಕರ್ಮಿಗಳು ಬೆಳ್ಳಂಬೆಳಗ್ಗೆ ಕಡಿದು ಹತ್ಯೆ ಮಾಡಿದ್ದರು. ಈ ಪ್ರಕರಣ ರಾಜ್ಯಾದ್ಯಂತ ಸಂಚಲನ ಸೃಷ್ಟಿ ಮಾಡಿತ್ತು.












Click it and Unblock the Notifications