‘SDPI ಮುಖಂಡನ ಕೊಲೆ ಆರೋಪಿಗೆ ಪ್ರಭಾಕರ ಭಟ್ ನಂಟು’
ಮಂಗಳೂರು, ಜೂನ್ 26 : 'ಬಂಟ್ವಾಳ ತಾಲ್ಲೂಕಿನ ಬೆಂಜನಪದ ಬಳಿ ಇದೇ 21ರಂದು ನಡೆದ ಅಶ್ರಫ್ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳು ಆರ್ ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಜತೆ ನಂಟು ಹೊಂದಿದ್ದು, ಕಾಂಗ್ರೆಸ್ ಪಕ್ಷದ ಆಪಾದನೆ ಸತ್ಯ ಎಂಬುದು ಸಾಬೀತಾಗಿದೆ'ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಕಲ್ಲಡ್ಕದಲ್ಲಿನ ಗಲಭೆ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಅವರು, 'ಕಲ್ಲಡ್ಕದಲ್ಲಿನ ಗಲಭೆ ಪ್ರಕರಣ ಕುರಿತು ಪ್ರಭಾಕರ ಭಟ್ ಕೆಲವು ದಿನಗಳ ಹಿಂದೆ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದರು. ಅಶ್ರಫ್ ಕೊಲೆಗೆ ಸಂಚು ರೂಪಿಸಿದ್ದ ಪ್ರಮುಖ ಆರೋಪಿಯೊಬ್ಬ ಪ್ರಭಾಕರ ಭಟ್ ಜೊತೆ ಪತ್ರಿಕಾಗೋಷ್ಠಿಯಲ್ಲಿ ವೇದಿಕೆ ಹಂಚಿಕೊಂಡಿದ್ದ. ಇದು ಅವರ ನಂಟಿಗೆ ಸಾಕ್ಷಿ ಒದಗಿಸುತ್ತದೆ' ಎಂದರು.

'ಕೊಲೆ ಪ್ರಕರಣದ ಆರೋಪಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ವಿಚಾರದ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು' ಎಂದು ಅವರು ಇದೇ ವೇಳೆ ಒತ್ತಾಯಿಸಿದರು.
'ಅಶ್ರಫ್ ಕೊಲೆ ನಡೆಯುವ ಹಿಂದಿನ ದಿನ ಪ್ರಭಾಕರ ಭಟ್, ಸಂಘ ಪರಿವಾರದ ಕೆಲವು ಮುಖಂಡರು ಉಳ್ಳಾಲ ವಿಧಾನಸಭಾ ಕ್ಷೇತ್ರದ ಬೋಳಿಯಾರ್ ನಲ್ಲಿ ಬಿಜೆಪಿ ಮುಖಂಡರೊಬ್ಬರ ಮನೆಯಲ್ಲಿ ರಹಸ್ಯ ಸಭೆ ನಡೆಸಿದ್ದರು ಎಂಬ ಮಾಹಿತಿ ಇದೆ. ಈ ಬಗ್ಗೆಯೂ ಪೊಲೀಸರು ಪರಿಶೀಲಿಸಬೇಕು' ಎಂದು ಮನವಿ ಮಾಡಿದರು.












Click it and Unblock the Notifications