ಸುರತ್ಕಲ್ ಟೋಲ್ ವಿರೋಧಿ ಹೋರಾಟಗಾರರಿಗೆ ನೋಟಿಸ್, ಆಕ್ರೋಶ
ಮಂಗಳೂರು, ಅಕ್ಟೋಬರ್, 16; ಮಂಗಳೂರು ನಗರದ ಎನ್ಐಟಿಕೆ ಬಳಿಯ ಸುರತ್ಕಲ್ ಟೋಲ್ ಗೇಟ್ ತೆರವು ಮಾಡಬೇಕೆಂದು ಅಕ್ಟೋಬರ್ 18ರಂದು ಪ್ರತಿಭಟನೆ ನಡೆಸಲು ಹಲವಾರು ಸಂಘನಟನೆಗಳು ಸಜ್ಜಾಗಿದ್ದವು. ಇದೀಗ ಪ್ರತಿಭಟನೆಯನ್ನು ಕೈಬಿಡುವಂತೆ ರಾತ್ರೋರಾತ್ರಿ ಪ್ರತಿಭಟನಾಕಾರರ ಮನೆಗೆ ಭೇಟಿ ನೀಡಿ ಪೊಲೀಸರು ನೋಟಿಸ್ ನೀಡಿದ್ದಾರೆ.
ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಬಿ. ಕೆ. ಇಮ್ತಿಯಾಝ್, ಪ್ರತಿಭಾ ಕುಳಾಯಿ, ರಾಘವೇಂದ್ರ ರಾವ್ ಸೇರಿದಂತೆ ಹಲವು ಮುಖಂಡರ ಮನೆಗಳಿಗೆ ಅಕ್ಟೋಬರ್ 15ರ ರಾತ್ರಿ ವೇಳೆ ಭೇಟಿ ನೀಡಿರುವ ಸುರತ್ಕಲ್ ಪೊಲೀಸರು ಪ್ರತಿಭಟನೆ ಕೈಬಿಡುವಂತೆ ನೋಟಿಸ್ ನೀಡಿದ್ದಾರೆ.
ಈಗಾಗಲೇ ಜಿಲ್ಲಾಡಳಿತ, ಎನ್ಎಚ್ಎಐ, ಪ್ರತಿಭಟನಾ ಸಮಿತಿಯ ಸಭೆಯನ್ನು ಕರೆದು ಟೋಲ್‌ಗೇಟ್ ವಿರುದ್ಧದ ಹೋರಾಟವನ್ನು ಹಿಂಪಡೆಯುವಂತೆ ಸೂಚಿಸಿತ್ತು. ಆದರೆ ಅದನ್ನು ಹೋರಾಟ ಸಮಿತಿ ತಿರಸ್ಕರಿಸಿತ್ತು. ಹಾಗಾಗಿ ನೋಟಿಸ್ ತಲುಪಿದ ಕೂಡಲೇ ಡಿಸಿಪಿ ಅವರ ಕಚೇರಿಗೆ ಭೇಟಿ ನೀಡಿ ಹೋರಾಟ ಮುಂದುವರಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದು ಕೊಡುವಂತೆ ಹೇಳಲಾಗಿದೆ. 2 ಲಕ್ಷ ರೂಪಾಯಿ ಬಾಂಡ್, ಸರ್ಕಾರಿ ಅಧಿಕಾರಿ ಜಾಮೀನು ನೀಡಿ ಮುಚ್ಚಳಿಕೆ ಬರೆದುಕೊಡಲು ಸೂಚಿಸಲಾಗಿದೆ.
ಫೇಸ್ ಬುಕ್‌ನಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, "ಮಧ್ಯರಾತ್ರಿ ಪೊಲೀಸರನ್ನು ಹೋರಾಟಗಾರರ ಮನೆಗಳಿಗೆ ಕಳುಹಿಸುತ್ತೀರಾ?. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತರೆ? ಮಹಿಳಾ ಹೋರಾಟಗಾರರ ಮನೆಗೂ ರಾತ್ರಿ ಪುರುಷ ಪೊಲೀಸರ ದಂಡು ಬಂದಿದೆ. ಅದಕ್ಕೆಲ್ಲ ಜನ ಹೆದರುವ ಕಾಲ ಮುಗಿದಿದೆ. ತುಳುನಾಡಿನ ಮುಂದೆ ಬೆತ್ತಲಾಗುತ್ತಿದ್ದೀರಿ ಬಿಜೆಪಿಗರೇ ಎಚ್ಚರ" ಎಂದು ಬರೆದಿದ್ದಾರೆ.

ಪೊಲೀಸರ ವಿರುದ್ಧ ಆಕ್ರೋಶ
ಇನ್ನು ತನ್ನ ಮನೆಗೆ ಶನಿವಾರ ರಾತ್ರಿ ಪೊಲೀಸರು ಬಂದು ನೋಟಿಸ್ ಜಾರಿ ಮಾಡಿರುವುದರ ವಿರುದ್ಧ ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್, ಟೋಲ್‌ಗೇಟ್ ವಿರೋಧಿ ಹೋರಾಟಗಾರರು ಮಾಡಿರುವ ನೇರ ಕಾರ್ಯಾಚರಣೆ ಎಂಬ ಪದ ಪ್ರಯೋಗ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಅವಶ್ಯಕತೆ ಎಂದಿದ್ದಾರೆ.

ಟೋಲ್ ವಿರೋಧಿ ಮನೆಗಳ ಮೇಲೆ ದಾಳಿ
ರಾತ್ರೋರಾತ್ರಿ ಪೊಲೀಸರು ಮನೆಗೆ ಬಂದಿರುವ ಬಗ್ಗೆ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಪ್ರತಿಭಾ ಕುಳಾಯಿಯವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಪೊಲೀಸರ ವರ್ತನೆಯಿಂದ ತನ್ನ 74 ವರ್ಷದ ಅತ್ತೆ ಭಯಭೀತರಾಗಿದ್ದಾರೆ. ಮಂಗಳೂರು ಸುರಕ್ಷಿತವೇ? ಇಲ್ಲಿ ಮಹಿಳೆಯರು ಸುರಕ್ಷಿತರೇ?, ಮಹಿಳೆಯರು ಇರುವ ಮನೆಯ ಬಾಗಿಲನ್ನು ಪೊಲೀಸರು ಮಧ್ಯರಾತ್ರಿ ಬಂದು ತಟ್ಟಬಹುದೇ? ಇದೆಂತಹ ಪ್ರಜಾಪ್ರಭುತ್ವ?" ಎಂದು ಪ್ರಶ್ನಿಸುವ ಮೂಲಕ ಪ್ರತಿಭಾ ಕುಳಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೋರಾಟ ಹತ್ತಿಕ್ಕಲು ಪೊಲೀಸರಿಂದ ನೋಟಿಸ್
ಈ ಬಗ್ಗೆ ಫೇಸ್ ಬುಕ್‌ನಲ್ಲಿ ಬರೆದುಕೊಂಡಿರುವ ಅವರು "ಬಿಜೆಪಿ ಎಂಎಲ್ಎ, ಎಂಪಿ ಅವರು ಸುರತ್ಕಲ್ ಟೋಲ್ ಗೇಟ್ ವಿಚಾರದಲ್ಲಿ ಮಾನಸಿಕ ಸ್ವಾಸ್ಥ್ಯವನ್ನು ಕಳೆದುಕೊಂಡಂತಿದೆ. ಅಕ್ಟೋಬರ್ 18ರ ಟೋಲ್ ಗೇಟ್ ಹೋರಾಟವನ್ನು ಹತ್ತಿಕ್ಕಲು ನನ್ನ ಮನೆಗೆ ಮಧ್ಯರಾತ್ರಿ ಪೊಲೀಸರನ್ನು ಕಳುಹಿಸಿ ನೋಟಿಸ್ ನೀಡಿರುವ ಜಿಲ್ಲಾಡಳಿತಕ್ಕೆ ನಾಚಿಕೆ ಆಗಬೇಕು. ನಾನೊಬ್ಬ ಸಾಮಾಜಿಕ ಕಾರ್ಯಕರ್ತೆಯೇ ಹೊರತು ಉಗ್ರಗಾಮಿ ಅಲ್ಲ. ನಾನೊಬ್ಬ ಭಾರತ ದೇಶದ ಜವಾಬ್ದಾರಿಯುತ ಪ್ರಜೆಯಾಗಿ ಈ ದೇಶದ ಕಾನೂನನ್ನು ಗೌರವಿಸುತ್ತೇನೆ. ನಿನ್ನೆ ಮಧ್ಯರಾತ್ರಿ ಸುರತ್ಕಲ್ ಠಾಣೆಯ 5 ಜನ ಪೊಲೀಸರು ಕುಳಾಯಿಯಲ್ಲಿರುವ ನನ್ನ ಮನೆಗೆ ಬಂದಿರುವುದು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಈ ಸಂದರ್ಭದಲ್ಲಿ ಮನೆಯಲ್ಲಿ 74 ವರ್ಷದ ನಮ್ಮ ಅತ್ತೆ ಇದ್ದು, ಪೊಲೀಸರ ನಡವಳಿಕೆಯಿಂದ ವರು ಭಯಭೀತರಾಗಿದ್ದರು," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಚೋದನಕಾರಿ ಹೇಳಿಕೆ, ನಿಗಾ ಇಡಲು ಸೂಚನೆ
ಈ ಬಗ್ಗೆ ಸ್ಪಷ್ಟನೆ ನೀಡಿರುವ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. 'ಸುರತ್ಕಲ್ ಟೋಲ್ ಗೇಟ್ ವಿರೋಧಿ ಆಂದೋಲನದಲ್ಲಿ ಭಾಗವಹಿಸುವ ಪ್ರಮುಖರು ಕೆಲವು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲ ಮುಖಂಡರ ಮೇಲೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದಕ್ಕಾಗಿ ಅವರನ್ನು ಡಿಸಿಪಿ ಮುಂದೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರ ಖಾಸಗಿತನವನ್ನು ಗೌರವಿಸಬೇಕು. ಆದ್ದರಿಂದ ಪೊಲೀಸರು ತಡರಾತ್ರಿ ಮನೆಗೆ ತೆರಳಿ ನೋಟಿಸ್ ಜಾರಿ ಬಗ್ಗೆ ತನಿಖೆ ನಡೆಸಿ. ಹಾಗೂ ಇದರ ವರದಿ ನೀಡುವಂತೆ ನಗರದ ಉತ್ತರ ಎಸಿಪಿ ಮಹೇಶ್ ಕುಮಾರ್ ಅವರಿಗೆ ತಿಳಿಸಿದ್ದೇನೆ," ಎಂದು ಹೇಳಿದ್ದಾರೆ.












Click it and Unblock the Notifications