ಸಿಡ್ನಿಯಲ್ಲಿ ಮೋದಿ ಹವಾ: ಪ್ರಧಾನಿಗಳ ಮುಂದೆ ಹೆಜ್ಜೆ ಹಾಕಲಿದ್ದಾರೆ ಕುಡ್ಲದ ಕುವರಿ
ಮಂಗಳೂರು, ಮೇ 23: ದೇಶದ ಪ್ರಧಾನಿ ನರೇಂದ್ರ ಮೋದಿಯವರ ವಿದೇಶಿ ಪ್ರವಾಸದ ವೇಳೆ ಅವರಿಗೆ ಭರ್ಜರಿ ಸ್ವಾಗತ ಕೋರುವುದು, ಅಲ್ಲಿ ಅವರು ಮಹತ್ವದ ಒಪ್ಪಂದ ಮಾಡಿಕೊಳ್ಳುವುದು ನಮಗೆಲ್ಲಾ ತಿಳಿದೇ ಇದೆ. ಇದೇ ರೀತಿ ಇಂದು ಮೇ 23ರಂದು ಮೋದಿಯವರು ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಅಲ್ಲಿನ ಪ್ರಧಾನಿ ಆಂಥೊನಿ ಆಲ್ಬನೀಸ್ ಅವರೊಂದಿಗೆ ಸಿಡ್ನಿಯಲ್ಲಿ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.
ಈ ಸಭೆಯ ಬಳಿಕ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಕರಾವಳಿಗೂ ಸಂಬಂಧವಿದೆ. ಪ್ರಧಾನಿ ಮೋದಿಯವರನ್ನು ಸ್ವಾಗತಿಸಲು ಸಿಡ್ನಿಯ Indian Australian Diaspora Foundation (IADF) ಭರದಿಂದ ಸಿದ್ಧತೆ ನಡೆಸುತ್ತಿದೆ. ಸಭೆಯ ಬಳಿಕ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಂಗಳೂರು ಮೂಲದ ಬಿಜೈ ಕಾಪಿಕಾಡು ಮೂಲದ ಯುವತಿ ಅನಿಷಾ ಪೂಜಾರಿಯವರನ್ನು ಒಳಗೊಂಡ ನೃತ್ಯ ತಂಡವು ನೃತ್ಯ ಪ್ರದರ್ಶನ ಮಾಡಲಿದೆ.

ಸುಮಾರು 20,000 ಕ್ಕೂ ಅಧಿಕ ಮಂದಿ ಭಾಗವಹಿಸಲಿರುವ ಈ ಕಾರ್ಯಕ್ರಮದಲ್ಲಿ ಉಡುಪಿ ಕುಂದಾಪುರ ಮೂಲದ ನಾಟ್ಯ ವಿದುಷಿ ಪಲ್ಲವಿ ಭಾಗವತ್ ತಮ್ಮ ನೃತ್ಯ ಸಂಸ್ಥೆಯ ನಾಟ್ಯೋಕ್ತಿ ಶಿಷ್ಯ ವೃಂದದೊಂದಿಗೆ ಕಾಂತಾರ ಸಿನಿಮಾದ ಹಾಡಿನ ನಾಟ್ಯ ಪ್ರದರ್ಶಿಸಲಿದ್ದಾರೆ. ಕರ್ನಾಟಕದ ಹಳ್ಳಿಯ ಸೊಬಗನ್ನು ತೋರಿಸುವ ಜಾನಪದ ಹಾಗೂ ಯಕ್ಷಗಾನವನ್ನು ಅಳವಡಿಸಿ ಈ ನೃತ್ಯವನ್ನು ಪ್ರದರ್ಶಿಸಲಿದ್ದಾರೆ.
ಈ ತಂಡದಲ್ಲಿ ಅನಿಷಾ ಪೂಜಾರಿಯೂ ತಮ್ಮ ನೃತ್ಯ ಚಾತುರ್ಯವನ್ನು ಪ್ರದರ್ಶಿಸಲಿದ್ದಾರೆ. ತಮ್ಮ ನಾಲ್ಕನೇ ವಯಸ್ಸಿಗೆ ಭರತನಾಟ್ಯ ಕಲೆಯನ್ನು ಕಲಿಯಲು ತೊಡಗಿದ ಅವರು ವಿದ್ವಾನ್ ಪ್ರೇಮನಾಥ ಮಾಸ್ಟರ್ ರಲ್ಲಿ ಹೆಚ್ಚಿನ ಶಿಕ್ಷಣ ಪಡೆದರು. ರಾಜ್ಯ ಹೊರರಾಜ್ಯಗಳಲ್ಲೂ ನಾಟ್ಯ ಪ್ರದರ್ಶನ ಮಾಡಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ವಿವಾಹದ ಬಳಿಕ ಪತಿ ಮಗುವಿನೊಂದಿಗೆ ಸಿಡ್ನಿಯಲ್ಲಿ ನೆಲೆಸಿದ್ದಾರೆ. ಆ ಬಳಿಕವೂ ತಮ್ಮ ನೃತ್ಯ ಕಲಿಕೆಯನ್ನು ಮುಂದುವರಿಸಿದ್ದಾರೆ. ಇದೀಗ ಅವರು ನಾಟ್ಯ ವಿದುಷಿ ಪಲ್ಲವಿ ಭಾಗವತ್ ರೊಂದಿಗೆ ತಮ್ಮ ನಾಟ್ಯ ಕಲಿಕೆಯನ್ನು ಮುಂದುವರಿಸಿದ್ದಾರೆ.
ಈ ತಂಡ ಪಲ್ಲವಿ ಭಾಗವತ್ ಮಾರ್ಗದರ್ಶನಲ್ಲಿ ವರಾಹಂ ರೂಪಂಗೆ ಡ್ಯಾನ್ಸ್ ಮಾಡಲಿದೆ. ಇನ್ನು ಈ ತಂಡದಲ್ಲಿ ಮಂಗಳೂರಿನ ಅನಿಷಾ ಪೂಜಾರಿ ಇರಲಿದ್ದು,ಕಾಂತಾರಾ ಸಿನಿಮಾದ ವರಾಹ ರೂಪಂ ಹಾಡು ಮತ್ತು ತುಳು ಆಲ್ಬಂ ಸಾಂಗ್ "ವಾ ಪೊರ್ಲುಯಾ" ಹಾಡಿಗೆ ಡ್ಯಾನ್ಸ್ ಮಾಡಲಿದ್ದಾರೆ..

ಮೋದಿಯೆದು ಮಗಳ ನೃತ್ಯಕ್ಕೆ ಮಂಗಳೂರಿನ ಅನಿಷಾ ಪೂಜಾರಿ ಪೋಷಕರ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅನಿಷಾ ತಂದೆ ಪದ್ಮನಾಭ, 'ಮಗಳು ಅನಿಷಾ ಪೂಜಾರಿ ಆರು ವರ್ಷದಿಂದ ಸಿಡ್ನಿಯಲ್ಲಿದ್ದಾಳೆ. ಕುಟುಂಬ ಸಮೇತ ಸಿಡ್ನಿಯಲ್ಲೇ ವಾಸವಿದ್ದಾರೆ. ಚಿಕ್ಕಂದಿನಿಂದಲೂ ಡ್ಯಾನ್ಸ್ ನಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದಳು. ನಾಟ್ಯ ಗುರು ಪಲ್ಲವಿ ಭಾಗವತ್ ಅವರ ತಂಡದಲ್ಲಿ ಮಗಳೂ ಇರೋದು ಹೆಮ್ಮೆ ತಂದಿದೆ. ಮೋದಿಯೆದುರು ಮಗಳು ಡ್ಯಾನ್ಸ್ ಮಾಡುತ್ತಿರುವುದು ಸಂತಸ ತಂದಿದೆ' ಎಂದು ಖುಷಿ ವ್ಯಕ್ತಪಡಿಸಿದ್ದಾರೆ.
ಇನ್ನು ಈ ತಂಡದಲ್ಲಿ ವಿಧೂಷಿ ಪಲ್ಲವಿ ಭಾಗವತ್, ಅಶ್ವಿಕಾ ರಾವ್, ಆರುಷಿ ಬಾದ್ಲೆ, ಮೇನುಕಾ ಪ್ರಧಾನ್, ರಿಹಾ ಶ್ರೀಕಾಂತ್, ಅನುಶ್ರೀ ಉಷಾರಾಜನ್, ನಯನ ಶ್ರೀಧರ್, ಅನಿತಾ, ಅಭಿಜಿತ್, ವಾದಿರಾಜ್ ಮತ್ತು ಗೌತಮ್ ಇರಲಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications