ಅಲೆಮಾರಿ ಸಮುದಾಯಗಳ ಹೋರಾಟಗಾರ ಭಾಸ್ಕರ್ ದಾಸ್ ಎಕ್ಕಾರ್ ನಿಧನ
ಮಂಗಳೂರು ನವೆಂಬರ್7: ಅಪಘಾತದಲ್ಲಿ ತೀವ್ರಗಾಯಗೊಂಡಿದ್ದ ಅಲೆಮಾರಿ ಸಮುದಾಯಗಳ ಹೋರಾಟಗಾರ ಭಾಸ್ಕರ್ ದಾಸ್ ಎಕ್ಕಾರ್ ಚಿಕಿತ್ಸೆ ಫಲಿಸದೇ ಭಾನುವಾರ ವಿಧಿವಶರಾಗಿದ್ದಾರೆ.
ಭಾಸ್ಕರ್ ದಾಸ್ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಹಕ್ಕುಗಳ ಸಬಲೀಕರಣ ಸಚಿವಾಲಯದ ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿದ್ದರು.
ಶನಿವಾರ ಬೆಂಗಳೂರಿನಿಂದ ಕಟೀಲಿಗೆ ತನ್ನ ಇನ್ನೊವಾ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಕುಣಿಗಲ್ ಬಳಿ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಬೆಂಗಳೂರಿನ ಜೈನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಭಾಸ್ಕರ್ ದಾಸ್ ಎಕ್ಕಾರ್ ಆರ್‌ಎಸ್‌ಎಸ್ ಕರ್ನಾಟಕ ದಕ್ಷಿಣ ಪ್ರಾಂತದ ಧರ್ಮ ಜಾಗರಣ ಸಮನ್ವಯ ಪರಿಯೋಜನಾ ಸಹಪ್ರಮುಖ್ ಆಗಿದ್ದರು. ಎಕ್ಕಾರ್ ಗ್ರಾಮ ಪಂಚಾಯತ್‌ನಿಂದ ಎರಡು ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಸಾರಿಗೆ, ವ್ಯವಹಾರ, ಹೊಟೇಲ್ ಉದ್ಯಮದಲ್ಲೂ ಭಾಸ್ಕರ್ ದಾಸ್ ತೊಡಗಿಸಿಕೊಂಡಿದ್ದರು.
ರಾಜ್ಯ ಸಾಂಸ್ಕೃತಿಕ ಪ್ರಕೋಷ್ಠದಲ್ಲಿ ಸದಸ್ಯರಾಗಿ, ಕರ್ನಾಟಕ ರಾಜ್ಯ ಅಲೆ ಮಾರಿ, ಅರೆಅಲೆಮಾರಿ ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ರಾಜ್ಯಾಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಚೆನ್ನದಾಸರ್ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾಗಿ, ಆರ್‌ಎಸ್‌ಎಸ್ ಕರ್ನಾಟಕ ದಕ್ಷಿಣ ಪ್ರಾಂತದ ಧರ್ಮ ಜಾಗರಣ ಸಮನ್ವಯ ಪರಿಯೋಜನಾ ಸಹಪ್ರಮುಖ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಸಮಾಜ ಸೇವೆಯಲ್ಲೂ ತೊಡಗಿಸಿ ಅಲೆಮಾರಿ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ್ದಾರೆ.
ಕಳೆದ ಒಂದು ವಾರದಿಂದ ಮಹಾರಾಷ್ಟ್ರ, ಬೆಂಗಳೂರಿನಲ್ಲಿ ಪ್ರಾಧಿಕಾರದ ಕುರಿತು ಸಭೆಗಳಲ್ಲಿ ಭಾಗವಹಿಸಿ, ತನ್ನ ಮನೆ ಕಟೀಲ್‌ಗೆ ವಾಪಾಸಾಗುವ ಸಂದರ್ಭದಲ್ಲಿ ಅಫಘಾತ ಸಂಭವಿಸಿದೆ.

ಭಾಸ್ಕರ್ ದಾಸ್ ಎಕ್ಕಾರ್ ನಿಧನಕ್ಕೆ ಗಣ್ಯರ ಸಂತಾಪ
ಭಾಸ್ಕರ್ ದಾಸ್ ಎಕ್ಕಾರ್ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರು, ರಾಜ್ಯದಲ್ಲಿ ಅಲೆಮಾರಿ ಜನಾಂಗದ ಶ್ರೇಯಸ್ಸಿಗಾಗಿ ಸೇವೆ ಸಲ್ಲಿಸುತಿದ್ದ ಶ್ರೀ ಭಾಸ್ಕರ್ ದಾಸ್ ಎಕ್ಕಾರು ಅವರು ನಿಧನರಾದ ವಿಷಯ ತಿಳಿದು ತುಂಬಾ ದುಃಖಿತನಾಗಿದ್ದೇನೆ. ಭಗವಂತನು ಅವರ ಆತ್ಮಕ್ಕೆ ಸದ್ಗತಿ ನೀಡಿ, ಅವರ ಕುಟುಂಬಕ್ಕೆ ಈ ದು:ಖ ಭರಿಸುವ ಶಕ್ತಿ ಕರುಣಿಸಲಿಯೆಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಇನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಭಾಸ್ಕರ್ ದಾಸ್ ಎಕ್ಕಾರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಆರ್‌ಎಸ್‌ಎಸ್ ಕರ್ನಾಟಕ ದಕ್ಷಿಣ ಪ್ರಾಂತ್ಯದ ಧರ್ಮ ಜಾಗರಣದ ಸಮನ್ವಯ ಪರಿಯೋಜನಾ ಪ್ರಮುಖ್ ಆಗಿದ್ದ ಶ್ರೀ ಭಾಸ್ಕರ್ ದಾಸ್ ಎಕ್ಕಾರ್ ಅವರು ನಿಧನರಾದ ವಿಷಯ ಮನಸ್ಸಿಗೆ ತೀವ್ರ ದುಃಖ ತಂದಿದೆ. ಅಲೆಮಾರಿ ಸಮುದಾಯದವರ ಏಳಿಗೆಗೆ ಶ್ರಮಿಸಿದ್ದ ಅವರು ಸಕ್ರಿಯ ಕಾರ್ಯಕರ್ತರಾಗಿದ್ದರು. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಭಾಸ್ಕರ್ ದಾಸ್ ಎಕ್ಕಾರ್ ಅವರ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಸಂಘಚಾಲಕ ವಿ. ನಾಗರಾಜ್, ಕ್ಷೇತ್ರೀಯ ಕಾರ್ಯವಾಹಕ ನಾ. ತಿಪ್ಪೇಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್,ಕಟೀಲು ಅರ್ಚಕ ಅನಂತಪದ್ಮನಾಭ ಅಸ್ರಣ್ಣ ಮುಂತಾದವರು ಸಂತಾಪ ಸೂಚಿದ್ದಾರೆ.











Click it and Unblock the Notifications