ನಿಪಾಹ್ ಎಫೆಕ್ಟ್ ಗೆ ಭಾರಿ ನಷ್ಟದಲ್ಲಿದ್ದಾರೆ ಶೇಂದಿ ವ್ಯಾಪಾರಿಗಳು!
ಮಂಗಳೂರು ಮೇ 27: ಕೇರಳ ರಾಜ್ಯದಲ್ಲಿ 12 ಜನರನ್ನು ಬಲಿತೆಗೆದುಕೊಂಡ ಮಾರಣಾಂತಿಕ ನಿಪಾಹ್ ವೈರಸ್ ನ ಭೀತಿ ಇಡೀ ದೇಶಕ್ಕೆ ಹಬ್ಬಿದೆ. ಈ ವೈರಸ್ ಬಾವಲಿಗಳಿಂದ ಹರಡುತ್ತದೆ ಎಂಬ ಸುದ್ದಿ ದಟ್ಟವಾಗುತ್ತಿದಂತೆ ನಿಶಾಚರಿಯಾಗಿರುವ ಬಾವಲಿಯ ಸಂಪರ್ಕಕ್ಕೆ ಬರುವ ಎಲ್ಲಾ ವಸ್ತುಗಳಿಂದ ಜನರು ದೂರ ಒಡುತ್ತಿದ್ದಾರೆ.
ಮರದಿಂದ ಬೀಳುವ ಹಣ್ಣುಗಳನ್ನು ಮುಟ್ಟಲು ಜನರು ಮುಂದಾಗುತ್ತಿಲ್ಲ. ಈ ನಿಪಾಹ್ ವೈರಸ್ ಭೀತಿ ಒಂದೆಡೆ ಹಣ್ಣಿನ ವ್ಯಾಪಾರದ ಮೇಲೆ ಬಿದ್ದರೆ ಇನ್ನೊಂದಡೆ ಶೇಂದಿ ವ್ಯಾಪಾರಕ್ಕೆ ಭಾರೀ ಹೊಡೆತ ನೀಡಿದೆ.
ಹೌದು, ನಿಪಾಹ್ ವೈರಸ್ ಸೋಂಕಿನ ಯಾವುದೇ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ತೆಯಾಗದಿದ್ದರೂ ಜನರು ಮಾತ್ರ ಈ ವೈರಸ್ ಗೆ ಹರಡುವ ಭೀತಿಯಿಂದ ಹೊರಬಂದಿಲ್ಲ. ಮುಖ್ಯವಾಗಿ ಬಾವಲಿಯಿಂದ ಈ ವೈರಸ್ ಹರಡುತ್ತದೆ ಎಂಬ ಸುದ್ದಿ ಜನರ ಮನದಲ್ಲಿ ಮನೆಮಾಡಿದೆ.

ಈ ಹಿನ್ನೆಲೆಯಲ್ಲಿ ಬಾವಲಿಗಳ ಮುಖ್ಯ ಆಹಾರವಾದ ಮಾವಿನ ಹಣ್ಣು, ಪೇರಳೆ, ಗೇರು ಮತ್ತಿತ್ತರರ ಹಣ್ಣುಗಳಿಂದ ಜನ ದೂರ ಸರಿಯುತ್ತಿದ್ದಾರೆ.
ಈ ನಡುವೆ ಇದೀಗ ಗ್ರಾಮೀಣ ಪ್ರದೇಶದ ಸಂಪ್ರದಾಯಿಕ ಪಾನೀಯ ಎಂದೇ ಹೇಳಲಾಗುವ ಶೇಂದಿಯ ಮೇಲೆ ನಿಪಾಹ್ ವೈರಸ್ ಪ್ರಭಾವ ಬೀರಿದೆ. ಕೆಲ ದಿನಗಳ ಕಾಲ ಶೇಂದಿ ಮಾರಾಟದ ಮೇಲೆ ನಿಷೇಧ ಹೇರುವ ಸಾಧ್ಯತೆ ಇದೆ ಎಂಬ ಸುದ್ದಿ ಗ್ರಾಮೀಣ ಪ್ರದೇಶದಲ್ಲಿ ಹರಡಿದೆ.
ಬಾವಲಿಗಳು ಹಣ್ಣು ಹಂಪಲುಗಳನ್ನು ಸೇವಿಸಿದ ಬಳಿಕ ಬಾಯಾರಿಕೆಗೆ ತಾಳೆ ಹಾಗು ತೆಂಗಿನ ಮರದ ಮೇಲೆ ಸಂಗ್ರಹಿಸಲಾಗುವ ಶೇಂದಿಯನ್ನು ಕುಡಿಯುತ್ತವೆ ಎನ್ನಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಮೂರ್ತೆದಾರ ಸಮುದಾಯದವರು ತಾಳೆ ಮರ ಮತ್ತು ತೆಂಗಿನ ಮರಗಳಿಂದ ಶೇಂದಿ ತೆಗೆಯುತ್ತಾರೆ. ಮರದಲ್ಲಿ ಮಣ್ಣಿನ ಮಡಕೆಯನ್ನು ಕಟ್ಟಿ ಶೇಂದಿ ಅದರಲ್ಲಿ ಸಂಗ್ರಹವಾಗುವಂತೆ ನೋಡಿಕೊಳ್ಳುತ್ತಾರೆ.
ಹೆಚ್ಚಾಗಿ ಈ ಮಡಕೆಗಳಿಗೆ ಯಾವುದೇ ಮುಚ್ಚಳಗಳು ಇರುವುದಿಲ್ಲ. ಇದರಿಂದ ಆಹಾರವನ್ನು ಹುಡುಕುತ್ತಾ ರಾತ್ರಿ ಹೊತ್ತು ತಿರುಗುವ ಈ ಬಾವಲಿಗಳು ಈ ಮಡಕೆಯಲ್ಲಿ ಸಂಗ್ರಹವಾದ ಶೇಂದಿಯನ್ನೂ ಕುಡಿಯುವ ಸಾದ್ಯತೆ ಹೆಚ್ಚು ಎಂದು ಹೇಳಲಾಗಿದೆ. ಈ ಕಾರಣ ಜನರು ಶೇಂದಿ ಸೇವನೆಯಿಂದ ದೂರ ಸರಿದಿದ್ದು, ಶೇಂದಿ ವ್ಯಾಪಾರಿಗಳು ಭಾರಿ ನಷ್ಟ ಅನುಭವಿಸುತ್ತಿದ್ದಾರೆ.
ಮೂಲ್ಕಿ ಮೂರ್ತೆದಾರರ ಸಹಕಾರಿ ಸಂಘದ ವ್ಯಾಪ್ತಿಯಲ್ಲಿ ಮೂಲ್ಕಿ, ಪಂಜಿನಡ್ಕ, ಕುಕ್ಕಟ್ಟೆ, ಸಂಕಲಕರಿಯ, ಏಳಿಂಜೆ , ಪಕ್ಷಿಕೆರೆ, ಹಳೆಯಂಗಡಿ, ಸುರತ್ಕಲ್, ಕಾಟಿಪಳ್ಳ ದಲ್ಲಿ ಶೇಂದಿ ಮಾರಾಟ ಕೇಂದ್ರಗಳಿದ್ದು ತಿಂಗಳಿಗೆ ಸುಮಾರು 2500 ಲೀಟರ್ ನಷ್ಟು ಶೇಂದಿ ಮಾರಾಟವಾಗುತ್ತಿದೆ.
ಆದರೆ ಶೇಂದಿ ಸೇವನೆ ಇತ್ತಿಚಿನ ದಿನಗಳಲ್ಲಿ ಗಣನೀಯವಾಗಿ ಕುಗ್ಗಿದೆ ಎಂದು ಹೇಳಲಾಗಿದೆ. ಅಬಕಾರಿ ಇಲಾಖೆ ಇಂದು ಕೆಲದಿನಗಳ ಕಾಲ ಶೇಂದಿ ಮಾರಾಟ ನೀಷೇಧಿಸುವ ಮಾಹಿತಿ ಹರಿದಾಡುತ್ತಿದೆ. ಅದರೆ ಈ ಬಗ್ಗೆ ಯಾವುದೇ ಅಧಿಕೃತ ಸುತ್ತೋಲೆ ಹೊರಡಿಸಲಾಗಿಲ್ಲ.












Click it and Unblock the Notifications