ಮಂಗಳೂರು: ಎಸ್‌ಡಿಪಿಐ ಮುಖಂಡ ರಿಯಾಜ್ ಫರಂಗಿಪೇಟೆ ಮನೆ ಮೇಲೆ ಎನ್‌ಐಎ ದಾಳಿ
ಮಂಗಳೂರು, ಸೆಪ್ಟೆಂಬರ್ 8: ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ರಿಯಾಜ್ ಫರಂಗಿಪೇಟೆ ಮನೆ ಮೇಲೆ ದಾಳಿ ಮಾಡಿದ ಎನ್‌ಐಎ ಅಧಿಕಾರಿಗಳ ತಂಡ ಸತತ 9 ಗಂಟೆಗಳ ವಿಚಾರಣೆ ಮಾಡಿದೆ. ತನಿಖೆ ಮುಗಿಸಿದ ಅಧಿಕಾರಿಗಳು ರಿಯಾಜ್ ಫರಂಗಿಪೇಟೆಯ ಹಾಗೂ ರಿಯಾಜ್ ಪತ್ನಿಯ ಮೊಬೈಲ್ ವಶಕ್ಕೆ ಪಡೆದ ನಾಲ್ವರು ಅಧಿಕಾರಿಗಳ ತಂಡ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಎನ್‌ಐಎ ದಾಳಿ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ ರಿಯಾಝ್ ಫರಂಗಿಪೇಟೆ "ಜುಲೈನಲ್ಲಿ ಬಿಹಾರದಲ್ಲಿ ಐವರು ಎಸ್ ಡಿ ಪಿ ಐ ಪಕ್ಷದ ಪದಾಧಿಕಾರಿಗಳನ್ನು ಬಂಧಿಸಿದ ಪ್ರಕರಣ ಸಂಬಂಧಿಸಿದಂತೆ ಎನ್‌ಐಎ ಅಧಿಕಾರಿಗಳು ಹಲವು ಪ್ರಶ್ನೆ ಕೇಳಿದ್ದಾರೆ. ಹಲವು ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ. ಎನ್‌ಐಎ ತನಿಖೆ ಪಾರದರ್ಶಕ ವಾಗಿರಲಿ. ತನಿಖಾ ಸಂಸ್ಥೆ ರಾಜಕೀಯ ಪ್ರೇರಿತವಾಗಿ ಕೆಲಸ ಮಾಡುತ್ತಿದೆ. ಸರಕಾರದ ಅಣತಿಯಂತೆ ಕೆಲಸ ಮಾಡುತ್ತಿದೆ" ಎಂದು ಆರೋಪಿಸಿದರು.
ನಾನು ಬಿಹಾರದಲ್ಲಿ ಎಸ್ ಡಿ ಪಿ ಐ ಪಕ್ಷದ ಉಸ್ತುವಾರಿ ವಹಿಸಿಕೊಂಡಿದ್ದೇನೆ. ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯಲ್ಲಿರುವುದರಿಂದ ಬಿಹಾರ ರಾಜ್ಯ ಸಮಿತಿ ಮೀಟಿಂಗ್ ಭಾಗವಹಿಸುತ್ತಿದ್ದೆ. ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಗಡಿಬಿಡಿ ಮಾಡುವ ಊಹಾಪೋಹದಿಂದ ಬಿಹಾರದಲ್ಲಿ ಪಕ್ಷದ ಐದು ಮಂದಿಯನ್ನು ಬಂಧನ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಪೂರಕ ಪರಿಶೀಲನೆ ಮಾಡುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ಬಿಹಾರದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನೂ ಬಂಧನ ಮಾಡಿದ್ದರು ಎಂದು ರಿಯಾಝ್ ಹೇಳಿದ್ದಾರೆ.

2047 ಇಸ್ಲಾಂ ರಾಷ್ಟ್ರ ಸಂಬಂಧ ಪಟ್ಟಂತೆ ಒಂದು ಫೌಂಡೇಶನ್ ಬುಕ್ ಲೇಟ್ ಬಿಡುಗಡೆ ಮಾಡಿತ್ತು. ಈ ಬಗ್ಗೆ ಸಂಬಂಧಪಟ್ಟ ಸಂಘಟನೆ ಹೇಳಿಕೆ ನೀಡಿದೆ. ಪಿಎಫ್ ಐ ಕೂಡಾ ಇದರ ಬಗ್ಗೆ ಸ್ಪಷ್ಟನೆ ನೀಡಿದೆ. ಉತ್ತರ ಪ್ರದೇಶದಲ್ಲಿ ಪ್ರಿಂಟ್ ಆಗಿದ್ದ ಒಂದು ಕಾಪಿಯನ್ನು ಈ ಬುಕ್ ಲೇಟ್‌ಗೆ ಇಡಲಾಗಿತ್ತು. ಕೇಂದ್ರ ಸರಕಾರ ಪ್ರೇರಿತವಾಗಿ ಈ ಕಾರ್ಯ ಮಾಡಲಾಗಿತ್ತು. ಎನ್‌ಐಎ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆ ಕೇಳಿದೆ ಎಂದು ರಿಯಾಝ್ ಹೇಳಿದ್ದಾರೆ.

ನಾಲ್ವರು ಎನ್‌ಐಎ ಅಧಿಕಾರಿಗಳು ಮುಂಜಾನೆ 4.30ಕ್ಕೆ ರಿಯಾಜ್ ಫರಂಗಿಪೇಟೆ ಅವರ ಬಿಸಿರೋಡ್ ನಲ್ಲಿರುವ ಮನೆಗೆ ದಾಳಿ ಮಾಡಿದ್ದರು. ಎನ್‌ಐಎ ದಾಳಿ ವಿರೋಧಿಸಿ ಸ್ಥಳೀಯ ಕಾರ್ಯಕರ್ತರು ಎನ್‌ಐಎ ಅಧಿಕಾರಿಗಳಿಗೆ ಗೋಬ್ಯಾಕ್ ಅಂತಾ ಘೋಷಣೆ ಕೂಗಿದ್ದರು. ಬಳಿಕ ಬಂಟ್ವಾಳ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಕಾರ್ಯಕರ್ತರನ್ನು ಚದುರಿಸಿದ್ದರು.












Click it and Unblock the Notifications