ನಾಗರ ಪಂಚಮಿ ಸಂಭ್ರಮ: ಕುಕ್ಕೆ, ಕುಡುಪು ದೇವಸ್ಥಾನಕ್ಕೆ ಹರಿದುಬಂದ ಭಕ್ತಸಾಗರ
ಮಂಗಳೂರು, ಆಗಸ್ಟ್, 21: ನಾಗರಾಧನೆಗೆ ವಿಶೇಷ ಸ್ಥಾನಮಾನ ಇರುವ ತುಳುನಾಡಿನಲ್ಲಿ ಇಂದು ನಾಗರ ಪಂಚಮಿಯ ಸಂಭ್ರಮ ಮನೆ ಮಾಡಲಿದೆ. ಅನೇಕ ದೇವಸ್ಥಾನಗಳಲ್ಲಿ, ಕುಟುಂಬದ ನಾಗಬನದಲ್ಲಿ ನಾಗದೇವರಿಗೆ ಪೂಜೆ ಸಲ್ಲಿಸಲಾಗುವುದು. ಅದರಲ್ಲೂ ಕುಕ್ಕೆ ಸುಬ್ರಹ್ಮಣ್ಯ, ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನಗಳಲ್ಲಿ ಭಕ್ತ ಸಾಗರವೇ ಹರಿದುಬರುತ್ತಿದೆ.
ತುಳುನಾಡು ಎಂದೇ ಕರೆಯಲ್ಪಡುವ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ನಾಗರಾಧನೆಗೆ ವಿಶೇಷ ಸ್ಥಾನಮಾನವಿದೆ. ಇಂದು ಎಲ್ಲೆಡೆ ನಾಗರ ಪಂಚಮಿಯ ಸಂಭ್ರಮವಿದ್ದ, ತುಳುನಾಡಿನಲ್ಲಿ ನಾಗರಾಧನೆಗೆ ಪ್ರಸಿದ್ಧಿ ಪಡೆದಿರುವ ಅನೇಕ ದೇವಾಲಯಗಳಲ್ಲಿ ಇಂದು ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಕೆಯಾಗುತ್ತಾ ಇದೆ.

ಈ ಪೈಕಿ ದಕ್ಷಿಣ ಭಾರತದ ಪ್ರಸಿದ್ಧ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ, ಮಂಗಳೂರಿನ ಹೊರ ವಲಯದಲ್ಲಿರುವ ಕುಡುಪು ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನ ನಾಗರಾಧನೆಗೆ ಬಹು ಪ್ರಸಿದ್ದಿ ಪಡೆದಿರುವ ಕ್ಷೇತ್ರವಾಗಿದೆ. ಈ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಸಂತಾನ ಪ್ರಾಪ್ತಿ, ನಾಗ ದೋಷ ನಿವಾರಣೆ ಸಹಿತ ಅನೇಕ ಸಮಸ್ಯೆಗಳಿಗೆ ಪರಿಹಾರ್ಥವಾಗಿ ಈ ಕ್ಷೇತ್ರದಲ್ಲಿ ವಿವಿಧ ವಿಶೇಷ ಸೇವೆಗಳು ನಡೆಯುತ್ತದೆ. ಹಾಗೆಯೇ ನಾಗರ ಪಂಚಮಿಯ ಈ ದಿನ ನಾಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ಕುಕ್ಕೆ ಸುಬ್ರಹ್ಮಣ್ಯದಲ್ಲೂ ನಾಗರ ಪಂಚಮಿ ದಿನವಾದ ಇಂದು ವಿಶೇಷ ಪೂಜೆ ಪುರಸ್ಕಾರಗಳು ನಡೆಯುತ್ತವೆ. ಮುಂಜಾನೆಯೇ ಆದಿ ಸುಬ್ರಹ್ಮಣ್ಯದಲ್ಲಿರುವ ನಾಗದೇವರ ಕಲ್ಲಿನ ಮೂರ್ತಿಗೆ ಹಾಲಿನ ಅಭಿಷೇಕ, ಸೀಯಾಳಾಭಿಷೇಕ ಮಾಡಲಾಗುತ್ತದೆ. ತುಳುನಾಡಿನಲ್ಲಿ ನಾಗರ ಪಂಚಮಿಯಂದು ವಿಶೇಷವಾಗಿ ನಾಗ ದೇವರಿಗೆ ತನು ತಂಬಿಲ ಅರ್ಪಿಸುವ ಆಚರಣೆಯಿದೆ. ಅಳಿಯ ಕಟ್ಟು ಸಂಪ್ರದಾಯ ಪಾಲಿಸುವ ತುಳುನಾಡಿನ ಅನೇಕ ಕುಟುಂಬಗಳು ತಮ್ಮ ಕುಟುಂಬದ ಮನೆಯ ನಾಗ ಬನದಲ್ಲಿ ನಾಗ ದೇವರ ಕಲ್ಲಿಗೆ ಹಾಲಿನ ಅಭಿಷೇಕ, ಸಿಯಾಳಭಿಷೇಕ ಹಾಗೂ ಹಿಂಗಾರವನ್ನು ಅರ್ಪಿಸುವ ಪದ್ಧತಿಯಿದೆ.
ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲೂ ಬೆಳಗ್ಗೆ 6 ಗಂಟೆಯಿಂದ ವಿವಿಧ ಅಭಿಷೇಕಗಳನ್ನು ಮಾಡಿ, ನಾಗ ದೇವರಿಗೆ ಪೂಜೆ ಪುನಸ್ಕಾರಗಳು ನಡೆಯುತ್ತಿದೆ. ಜಾತಿ-ಧರ್ಮ ಭೇದವನ್ನು ಮರೆತು ಸಾವಿರಾರು ಜನರು ನಾಗರ ಪಂಚಮಿಯ ಈ ಸಂಭ್ರಮದಲ್ಲಿ ಭಾಗವಹಿಸಿ ಪ್ರಾರ್ಥಿಸುತ್ತಾರೆ.












Click it and Unblock the Notifications