ನೇತ್ರಾವತಿ ಸೇತುವೆ ಬಳಿ ಬೈಕ್ ಇಟ್ಟು ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ
ಮಂಗಳೂರು, ಆಗಸ್ಟ್ 26: ನೇತ್ರಾವತಿ ಸೇತುವೆ ಬಳಿ ಬೈಕ್ ಇರಿಸಿ ಯುವಕ ನಾಪತ್ತೆಯಾಗಿದ್ದ ಪ್ರಕರಣಕ್ಕೆ ತೆರೆಬಿದ್ದಿದೆ. ಯುವಕ ನೇತ್ರಾವತಿ ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕಡಬ ನೂಜಿ ಬಾಳ್ತಿಲ ನಿವಾಸಿ ಸದಾಶಿವ (26) ಎಂಬ ಯುವಕನ ಮೃತದೇಹ ಸಮುದ್ರದಲ್ಲಿ ಪತ್ತೆಯಾಗಿದೆ.
ಭಾನುವಾರ ಕೋಸ್ಟ್‌ಗಾರ್ಡ್ ಸಿಬ್ಬಂದಿ ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಎನ್‌ಎಂಪಿಟಿ ಬಂದರಿನಿಂದ ಸುಮಾರು 12 ನಾಟಿಕಲ್ ಮೈಲ್ ದೂರದಲ್ಲಿ ಸಮುದ್ರದಲ್ಲಿ ಶವವೊಂದು ತೇಲುತ್ತಿರುವುದು ಕಂಡುಬಂದಿದೆ. ಕೂಡಲೇ ಪಣಂಬೂರು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಶವವನ್ನು ಪರಿಶೀಲನೆ ನಡೆಸಿದಾಗ ನಾಪತ್ತೆಯಾದ ಸದಾಶಿವ ಎಂಬಾತನೆಂದು ತಿಳಿದುಬಂದಿದೆ.

ಸದಾಶಿವ ಅವರು ರೈಲ್ವೆ ನಿಲ್ದಾಣದಲ್ಲಿ ರೈಲಿಗೆ ನೀರು ಹಾಕುವ ಕೆಲಸ ನಿರ್ವಹಿಸುತ್ತಿದ್ದರು. ಆಗಸ್ಟ್ 16ರ ರಾತ್ರಿ 9:30ಕ್ಕೆ ಕೆಲಸ ಮುಗಿಸಿ ಬೈಕ್‌ನಲ್ಲಿ ಜಪ್ಪಿನಮೊಗರು ಬಳಿ ಇರುವ ಮನೆಗೆ ಹೊರಟಿದ್ದರು. ಆ ಬಳಿಕ ಮನೆಗೂ ಹೋಗದೆ ರೈಲ್ವೆ ನಿಲ್ದಾಣಕ್ಕೂ ಬಾರದೆ ನಾಪತ್ತೆ ಯಾಗಿದ್ದರು. ಅವರ ಬೈಕ್ ಉಳ್ಳಾಲ ಸೇತುವೆ ಬಳಿ ಪತ್ತೆಯಾಗಿದ್ದು, ಅದರಲ್ಲಿದ್ದ ದಾಖಲೆಯನ್ನು ಪರಿಶೀಲಿಸಿದಾಗ ಸದಾಶಿವ ಅವರ ವಿಳಾಸ ಪತ್ತೆಯಾಗಿತ್ತು.
ಈ ಕುರಿತು ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ನಾಪತ್ತೆಯಾಗಿದ್ದ ಸದಾಶಿವ ಅವರಿಗಾಗಿ ಕುಟುಂಬ ಸದಸ್ಯರು ಹಾಗು ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ ಈಗ ಸದಾಶಿವ ಅವರ ಶವ ಸಮುದ್ರದಲ್ಲಿ ಪತ್ತೆಯಾಗಿದೆ.












Click it and Unblock the Notifications