ಯುವತಿ ಬರೆದ ಫೇಸ್ಬುಕ್ ಸ್ಟೇಟಸ್ ನಿಂದ ಚುಡಾಯಿಸದ ಯುವಕನ ಮೇಲೆ ಕೇಸ್
ಮಂಗಳೂರು, ಜೂನ್ 29: ನಗರದ ಅಲೋಶಿಯಸ್ ಕಾಲೇಜಿನಿಂದ ಬಲ್ಮಠ ರಸ್ತೆಯಾಗಿ ನಡೆದುಕೊಂಡು ಹೋಗುತ್ತಿದ್ದ ಯುವತಿಯೋರ್ವಳಿಗೆ ಬೈಕ್ ನಲ್ಲಿ ಬಂದ ರೋಡ್ ರೋಮಿಯೋ ಒಬ್ಬ ಚುಡಾಯಿಸಿದ. ಈ ಬಗ್ಗೆ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿದೆ.
ಈ ಸ್ವಯಂ ಪ್ರೇರಿತ ದೂರು ದಾಖಲಾಗಲು ಕಾರಣ ಯುವತಿ ಅನುಸರಿಸಿವ ವಿಶೇಷ ಮಾರ್ಗ. ಅದೇನು ಎನ್ನುವುದೇ ಈ ಸ್ಟೋರಿ.

ರಶ್ಮಿ ಶೆಟ್ಟಿ ಎಂಬುವರು ಎರಡು ದಿನಗಳ ಹಿಂದೆ ಅಲೋಶಿಯಸ್ ಕಾಲೇಜಿನ ಬಳಿಯಿಂದ ಬಲ್ಮಠವರೆಗೆ ನಡೆದುಕೊಂಡು ಹೋಗುತ್ತಿದ್ದಾಗ ರಶ್ಮಿ ಹಿಂದೆಯೇ ಬಂದ ಯುವಕನೊಬ್ಬ ಹಾರ್ನ್ ಮಾಡಿ ಆಕೆಯನ್ನೇ ದಿಟ್ಟಿಸಿ ನೋಡುತ್ತಿದ್ದ. ಇದು ಪದೇ ಪದೇ ಮುಂದುವರಿದಾಗ ಆಕೆ ಆತನ ಸ್ಕೂಟರ್‌ನ ಫೊಟೋ ತೆಗೆದಿದ್ದಳು. ಬಳಿಕ ಅದರಲ್ಲಿದ್ದ ನೋಂದಣಿ ಸಂಖ್ಯೆ ಆಧಾರದಲ್ಲಿ ಸ್ಕೂಟರ್‌ನ ಮಾಲೀಕತ್ವದ ವಿವರಗಳನ್ನು ಶೋಧಿಸಿ ಎಫ್‌ಬಿಯಲ್ಲಿ ಹಾಕಿದ್ದಳು.
ಇದು ರಿಝ್ವಾನ್ ಅಹ್ಮದ್ ಎಂಬಾತನಿಗೆ ಸೇರಿದ ವಾಹನವಾಗಿದ್ದು, ಅದನ್ನು ಚಲಾಯಿಸುತ್ತಿದ್ದುದು ಯಾರೆನ್ನುವುದು ತಿಳಿದು ಬಂದಿಲ್ಲ. ಈ ಬಗ್ಗೆ ಆಕೆ ಈವರೆಗೆ ಪೊಲೀಸರಿಗೆ ದೂರು ನೀಡಿಲ್ಲ. ಇದೀಗ ಪೊಲೀಸರೇ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡಿದ್ದಾರೆ.

"ನಾನು ಹೆದರಿ ಮನೆಯಲ್ಲಿ ಕೂರುವ ಪ್ರಶ್ನೆಯೇ ಇಲ್ಲ. ನಾನು ಹೆದರಿ, ನಾಚಿಕೆಯಿಂದ ಮುದುಡಿಕೊಂಡಿರುತ್ತೇನೆ ಎಂದುಕೊಂಡಿದ್ದೀಯಲ್ಲವೇ? ಒಂದು ವೇಳೆ ನಾನು ಯಾರಲ್ಲಾದರೂ ಈ ವಿಚಾರ ಹೇಳಿದರೂ ಅದನ್ನು ಸಾಬೀತುಪಡಿಸಲು ಅಸಾಧ್ಯ. ಜನ ನನ್ನ ಪರವಾಗಿ ಮಾತನಾಡಲಿಕ್ಕಿಲ್ಲ ಎಂದು ತಿಳಿದಿದ್ದೀಯಲ್ಲವೇ? ನನ್ನ ಪರವಾಗಿ ನಾನೇ ಇದ್ದೇನೆ. ನಿಮ್ಮಂಥ ನೂರು ಮಂದಿ ಬಂದರೂ ನಮ್ಮನ್ನು ಹೆದರಿಸುವುದು ಸಾಧ್ಯವಿಲ್ಲ. ನನ್ನ ಸ್ವಾತಂತ್ರ್ಯಕ್ಕೆ ಅಡ್ಡಿ ಮಾಡಲು ಬಂದರೆ ತಿರುಗಿ ಬೀಳುತ್ತೇನೆ ಎಂದು ಫೇಸ್ ಬುಕ್ ನಲ್ಲಿ ಎಚ್ಚರಿಕೆ ನೀಡಿದ್ದಾರೆ.
ರಶ್ಮಿ ಶೆಟ್ಟಿಯ ಈ ಪೋಸ್ಟ್ ಗೆ 3 ಸಾವಿರಕ್ಕಿಂತಲ್ಲೂ ಅಧಿಕ ಲೈಕ್ ಬಂದಿದ್ದರೆ, 2 ಸಾವಿರಕ್ಕಿಂತಲೂ ಅಧಿಕ ಷೇರ್ ಆಗಿದೆ. ಪರಿಣಾಮ ಸದ್ಯದಲ್ಲೇ ಬೈಕ್ ಮಾಲಿಕ ಜೈಲು ಸೇರುವ ಸಾಧ್ಯತೆ ಇದೆ.












Click it and Unblock the Notifications