ಮಂಗಳೂರಿನ ಪಚ್ಚನಾಡಿ ಡಂಪಿಂಗ್ ಯಾರ್ಡ್‌ಗೆ ಬೆಂಕಿ, ಹೊಗೆಯಿಂದ ಕಂಗಾಲಾದ ಜನ
ಮಂಗಳೂರು, ಜನವರಿ, 13: ಮಂಗಳೂರಿನ ಪಚ್ಚನಾಡಿ ಡಂಪಿಂಗ್ ಯಾರ್ಡ್‌ಗೆ ಬೆಂಕಿ ಬಿದ್ದು ವಾರ ಕಳೆದಿದೆ. ಅಗ್ನಿಶಾಮಕ ದಳ ನಿರಂತರ ಪ್ರಯತ್ನ ಮಾಡಿದರೂ ಬೆಂಕಿ ನಂದಿಸಲು ಸಾಧ್ಯವಾಗುತ್ತಿಲ್ಲ. ಇದೀಗ ಮಣ್ಣು ಸುರಿದು ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರೆದಿದೆ. ಇದರಿಂದ ಮುಗಿಲ ಎತ್ತರಕ್ಕೆ ದಟ್ಟ ಹೊಗೆ ಆವರಿಸಿದ್ದು, ಪಚ್ಚನಾಡಿ ಡಂಪಿಂಗ್ ಯಾರ್ಡ್ ಸುತ್ತಮುತ್ತಲಿನ ಜನರು ಆರೋಗ್ಯ ಸಮಸ್ಯೆಯಿಂದ ಹೈರಾಣಾಗಿದ್ದಾರೆ. ತಾಜ್ಯದ ಹೊಗೆ ಈಗಾಗಲೇ ಊರನ್ನು ಆವರಿಸಿದ್ದು, ಜನರು ಕೆಮ್ಮು, ಕಣ್ಣುರಿಯಿಂದ ಕಂಗೆಟ್ಟು ಹೋಗಿದ್ದಾರೆ.
ಪಚ್ಚನಾಡಿ ಡಂಪಿಂಗ್ ಯಾರ್ಡ್‌ಗೆ ಕಳೆದ ಶುಕ್ರವಾರ ಬೆಂಕಿ ಬಿದ್ದಿದ್ದು, ಎಲ್ಲೆಡೆ ಹೊಗೆ ಆವರಿಸಿ ಇಲ್ಲಿನ ಜನರು ಕಣ್ಣುರಿ, ಉಸಿರಾಟದ ಸಮಸ್ಯೆ, ಗಂಟಲು ಕಟ್ಟುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತ್ಯಾಜ್ಯದ ಹೊಗೆಯಿಂದ ಜನರ ಆರೋಗ್ಯದ ಪರಿಣಾಮ ಬೀರುತ್ತಲೇ ಇದೆ. ಇದರಿಂದ ಮಂಗಳನಗರ, ಆಶಾಜ್ಯೋತಿ, ಸಂತೋಷ್ ನಗರ, ಮಂದಾರ ಭಾಗದ ಜನರು ಬೇಸತ್ತು ಮನೆಯನ್ನೇ ತೊರೆದು ಬೇರೆಡೆಗೆ ಹೋಗಿದ್ದಾರೆ.
ದಟ್ಟ ಹೊಗೆಯಿಂದ ವಿದ್ಯಾರ್ಥಿಗಳ ಪರದಾಟ
ಈಗಾಗಲೇ ಪಚ್ಚನಾಡಿಯ ಮಂಗಳಜ್ಯೋತಿ ಶಾಲೆಯ ವಿದ್ಯಾರ್ಥಿಗಳು ಕೂಡ ಕಣ್ಣುರಿ, ದಮ್ಮು, ಕೆಮ್ಮಿನಿಂದ ಅನಾರೋಗ್ಯಕ್ಕೀಡಾಗಿದ್ದಾರೆ. ಇನ್ನು ಶಾಲೆಯ ಸಿಬ್ಬಂದಿ ಸುಜಾತ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಮಕ್ಕಳು ಹೊಗೆಯಿಂದ ಶಾಲೆಯಲ್ಲಿ ಕುಳಿತುಕೊಳ್ಳಲು ಆಗದಂತಂಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಜೆ ಆಗುತ್ತಿದ್ದಂತೆಯೇ ಗಾಳಿ ಬೀಸುವುದರಿಂದ ಶಾಲೆಯ ಕಡೆ ದಟ್ಟ ಹೊಗೆ ಆವರಿಸತ್ತಿದ್ದು, ಮಕ್ಕಳನ್ನು ಶಾಲೆಯಿಂದ ಬೇಗ ಮನೆಗೆ ಬಿಡಲಾಗುತ್ತದೆ. ಇನ್ನು ವಿಶೇಷ ಚೇತನ ಮಕ್ಕಳು ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ ಅಂತಾ ಹೇಳಿದ್ದಾರೆ.

ಜನರ ಸಮಸ್ಯೆಗೆ ಸ್ಪಂದಿಸದ ಜನಪ್ರತಿನಿಧಿಗಳು
ಇಷ್ಟೆಲ್ಲ ಗಂಭೀರ ಸಮಸ್ಯೆ ಆದರೂ ಕೂಡ ಜನಪ್ರತಿನಿಧಿಗಳು, ಅಧಿಕಾರಿಗಳು ಮಾತ್ರ ಕ್ಯಾರೆ ಅನ್ನುತ್ತಿಲ್ಲ. ಜನರು ಕಳೆದ ಐದು ವರ್ಷಗಳಿಂದ ಪ್ರತೀ ವರ್ಷಕ್ಕೊಮ್ಮೆ ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ಯಾರೂ ಬಡಜನರ ಕಷ್ಟಗಳ ಕಡೆಗೆ ತಿರುಗಿಯೂ ನೋಡುತ್ತಿಲ್ಲ ಎಂದು ಸ್ಥಳೀಯ ನಿವಾಸಿ ಹರೀಶ್ ಬೆಳ್ಚಡ ಅಳಲು ತೋಡಿಕೊಂಡಿದ್ದಾರೆ.
ತ್ಯಾಜ್ಯ ರಾಶಿಯಲ್ಲಿ ಮೀಥೇನ್ ಅನಿಲ ಉದ್ಭವವಾಗಿ ತನ್ನಷ್ಟಕ್ಕೆ ಬೆಂಕಿ ಸೃಷ್ಟಿಯಾಗುತ್ತದೆ ಎಂಬುದು ಜನಪ್ರತಿನಿಧಿಗಳ ವಾದವಾಗಿದೆ. ಆದರೂ ಇದು ತನ್ನಷ್ಟಕ್ಕೆ ಸೃಷ್ಟಿಯಾಗುವ ಬೆಂಕಿಯಲ್ಲ, ಮಾನವ ಸೃಷ್ಟಿಸಿರುವ ಬೆಂಕಿಯಾಗಿದೆ. ತ್ಯಾಜ್ಯ ರಾಶಿ ಹೆಚ್ಚಾದಾಗ ಡಂಪಿಂಗ್ ಯಾರ್ಡ್‌ನವರೇ ತ್ಯಾಜ್ಯಕ್ಕೆ ಬೆಂಕಿ ಕೊಡುತ್ತಾರೆ ಎನ್ನುವುದು ಸ್ಥಳೀಯರ ವಾದವಾಗಿದೆ. ನಮ್ಮ ಬದುಕು ನರಕ ಸದೃಶವಾಗಿದೆ. ನಮಗೆ ಇಂತಹ ಜೀವನದಿಂದ ಒಂದು ಸಲ ಮುಕ್ತಿಕೊಡಿ ಎಂದು ಸ್ಥಳೀಯ ನಿವಾಸಿ ಲಲಿತಾ ಅಳಲು ತೋಡಿಕೊಂಡಿದ್ದಾರೆ.












Click it and Unblock the Notifications