ಮರಳು ದಂಧೆ, ದ. ಕ. ಜಿಲ್ಲಾಧಿಕಾರಿ ಜಗದೀಶ್ ವಿರುದ್ಧ ಲೋಕಾಯುಕ್ತಕ್ಕೆ ದೂರು
ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರೇ ಜಿಲ್ಲೆಯ ಸ್ವಾಭಾವಿಕ ಸಂಪತ್ತನ್ನು ಲೂಟಿ ಮಾಡಲು ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಕಾರ್ಯದರ್ಶಿ ಶಶಿಧರ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಮಂಗಳೂರು, ಏಪ್ರಿಲ್ 5: ಉಡುಪಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯವರೇ ಮರಳು ದಂಧೆಯನ್ನು ನಿಲ್ಲಿಸಲು ಕಾರ್ಯಾಚರಿಸುತ್ತಿದ್ದಾರೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯವರೇ ಜಿಲ್ಲೆಯ ಸ್ವಾಭಾವಿಕ ಸಂಪತ್ತನ್ನು ಲೂಟಿ ಮಾಡಲು ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಕಾರ್ಯದರ್ಶಿ ಶಶಿಧರ ಶೆಟ್ಟಿ ಆರೋಪಿಸಿದ್ದಾರೆ.
ಮಂಗಳವಾರ ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದ.ಕ. ಜಿಲ್ಲಾಧಿಕಾರಿ ಜಗದೀಶ್ ವಿರುದ್ಧ 232 ಪುಟಗಳ ದೂರನ್ನು ಲೋಕಾಯುಕ್ತಕ್ಕೆ ಸಲ್ಲಿಸಲಾಗಿದೆ ಎಂದರು.[ಮಂಗಳೂರು: ಮೇಯರ್ ಮೇಡಂ, ಜಾಹೀರಾತು ಫಲಕ ತೆರವುಗೊಳಿಸುವುದು ಯಾವಾಗ?]

ಜಿಲ್ಲಾಧಿಕಾರಿ ಈ ಜಿಲ್ಲೆಗೆ ಬಂದ ಮೇಲೆ 432 ಮಂದಿಗೆ ಮರಳು ಗಣಿಗಾರಿಕೆಗೆ ಅನುಮತಿ ನೀಡಿದ್ದಾರೆ. ಚೆನ್ನೈ ಹಸಿರು ನ್ಯಾಯಪೀಠದ ಆದೇಶದ ಪ್ರಕಾರ ಸಿ.ಆರ್.ಝಡ್ ವ್ಯಾಪ್ತಿಯಲ್ಲಿ ಮರಳು ಗಣಿಗಾರಿಕೆ ಮಾಡುವಂತಿಲ್ಲ. ಜಿಲ್ಲಾಧಿಕಾರಿ ಈ ಆದೇಶವನ್ನೇ ಗಾಳಿಗೆ ತೂರಿದ್ದಾರೆ ಎಂದು ದೂರಿದ್ದಾರೆ.
ಮಹಿಳೆಯಾಗಿ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಹಾಗೂ ಎ.ಸಿ. ಶಿಲ್ಪಾ ನಾಗ್ ಪರಿಸರ ಸಂರಕ್ಷಣೆಗೆ ದಿಟ್ಟ ಹೋರಾಟಕ್ಕೆ ಮುನ್ನುಗ್ಗಿರುವುದು ನಿಜಕ್ಕೂ ಅಭಿನಂದನೀಯ. ಅವರ ಮೇಲೆ ಹಲ್ಲೆ ಮಾಡಿರುವುದು ಮಾತ್ರ ಖಂಡನೀಯ ಎಂದರು.[ಮಂಗಳೂರು ಎಎಸ್ಐ ಐತಪ್ಪನ ಮೇಲೆ ಮಾರಣಾಂತಿಕ ಹಲ್ಲೆ]
ನದಿಯಲ್ಲಿ ಮೀನುಗಾರಿಕಾ ದೋಣಿ ಹೋಗಲು ಮರಳು ದಿಣ್ಣೆಗಳು ಅಡ್ಡ ಬಂದಲ್ಲಿ ಮಾತ್ರವೇ ಮರಳು ತೆಗೆಯಬಹುದು. ಅದಕ್ಕೆ ಏಳು ಮಂದಿ ತಜ್ಞರ ಸಿವಿಲ್ ಸೊಸೈಟಿಗೆ ಮೀನುಗಾರರು ದೂರು ನೀಡಿದಾಗ, ಅವರ ಪರಿಶೀಲನೆಯ ಬಳಿಕವಷ್ಟೆ ಒಂದು ಮೀಟರ್ ಅಡಿಯಷ್ಟು ಮರಳು ತೆಗೆಯಲು ಅವಕಾಶ ನೀಡಲಾಗುವುದು. ಆದರೆ, ಈಗ 24 ಅಡಿ ಮರಳನ್ನು ಅಗೆಯಲಾಗುತ್ತಿದೆ ಎಂದು ಹೇಳಿದರು.

ಅಲ್ಲದೆ, ಮರಳಿನಿಂದ ಮೀನುಗಾರಿಕೆಗೆ ಸಮಸ್ಯೆಯಾಗುತ್ತದೆ ಎಂದು ಮೀನುಗಾರರಿಂದ ಒಂದೇ ಒಂದು ದೂರು ಇಲ್ಲಿಯವರೆಗೆ ಬಂದಿಲ್ಲ. ಅದಾಗ್ಯೂ ಇಲ್ಲಿ ಮರಳುಗಾರಿಕೆ ನಡೆದಿದ್ದರೆ ಅದು ಅಕ್ರಮ ಎಂದು ಅವರು ಹೇಳಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಕೋಲಾರಕ್ಕಾದ ಗತಿ ದಕ್ಷಿಣ ಕನ್ನಡ ಜಿಲ್ಲೆಗೂ ಆಗಲಿದೆ ಎಂದು ಅವರು ಎಚ್ಚರಿಸಿದ್ದರು.
ಇಲ್ಲಿನ ಪರಿಸರ ಸಂರಕ್ಷಣೆಗಾಗಿ ಹೋರಾಟ ಮಾಡುವವರಿಗೆ ಈಗಾಗಲೇ ಕೊಲೆ ಬೆದರಿಕೆ, ಕೊಲೆ ಯತ್ನ ನಡೆದಿದೆ. ಈ ಬಗ್ಗೆ ಕಾವೂರು ಠಾಣೆಯಲ್ಲಿ ದೂರು ಕೂಡಾ ದಾಖಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಮನವರಿಕೆ ಮಾಡಲು ಹೇಳಿದರೆ, ತಮಗೆ ಹೋರಾಟ ಮಾಡಲು ಹೇಳಿದವರು ಯಾರು ಎಂದು ಪ್ರಶ್ನಿಸುತ್ತಾರೆ. ಇಂಥಹ ಜಿಲ್ಲಾಧಿಕಾರಿ ಈ ಜಿಲ್ಲೆಗೆ ಖಂಡಿತಾ ಬೇಡ. ಇವರ ವಿರುದ್ಧ ಆಡಳಿತ ಸುಧಾರಣಾ ಇಲಾಖೆಗೆ ಪತ್ರ ಬರೆದು ಇವರ ವರ್ಗಾವಣೆಗೆ ಆಗ್ರಹಿಸಿದ್ದೇವೆ ಎಂದು ಶಶಿಧರ್ ಶೆಟ್ಟಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಶ್ರೀಪತಿ ಆಚಾರ್ಯ, ಅನಿತಾ ಎಸ್. ಭಂಡಾರ್ಕರ್, ನಾರಾಯಣ ಬಂಗೇರಾ, ರತ್ನಾಕರ ಸುವರ್ಣ ಉಪಸ್ಥಿತರಿದ್ದರು.












Click it and Unblock the Notifications