ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಶಂಕಿತ ಉಗ್ರ ಶಾರೀಕ್ ಬಹುತೇಕ ಚೇತರಿಕೆ
ಮಂಗಳೂರು, ಡಿಸೆಂಬರ್ 14: ನಗರದ ಕಂಕನಾಡಿ ಸಮೀಪದ ಗರೋಡಿ ಬಳಿ ನವೆಂಬರ್ 19ರಂದು ಸಂಭವಿಸಿದ ಆಟೋ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟದಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಂಕಿತ ಉಗ್ರ ಮಹಮ್ಮದ್ ಶಾರೀಕ್ ಬಹುತೇಕ ಚೇತರಿಸಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಎನ್‌ಐಎ ತಂಡ ಆತನನ್ನು ತೀವ್ರ ವಿಚಾರಣೆಗೊಳಪಡಿಸುತ್ತಿದೆ.
ಕುಕ್ಕರ್ ಬಾಂಬ್ ಸ್ಫೋಟಗೊಂಡ ಪರಿಣಾಮ ಶಾರೀಕ್ ದೇಹದಲ್ಲಿ ಶೇಕಡಾ 45ರಷ್ಟು ಸುಟ್ಟ ಗಾಯಗಳಾಗಿತ್ತು. ಅಲ್ಲದೇ ಶ್ವಾಸಕೋಶದೊಳಗೆ ರಾಸಾಯನಿಕಯುಕ್ತ ಹೊಗೆ ಕೂಡ ಸೇರಿದ್ದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಹೀಗಾಗಿ ಆತನನ್ನು ವಿಚಾರಣೆ ನಡೆಸಲು ತನಿಖಾ ತಂಡಕ್ಕೆ ಸಾಧ್ಯವಾಗುತ್ತಿರಲಿಲ್ಲ.ಇದೀಗ ಆತ ಚೇತರಿಸಿಕೊಂಡಿರುವ ಹಿನ್ನೆಲೆಯಲ್ಲಿ ಎನ್‌ಐಎ ತಂಡ ವಿಚಾರಣೆಯನ್ನು ತೀವ್ರಗೊಳಿಸಿದೆ. ಇನ್ನು ಒಂದು ವಾರದಲ್ಲಿ ಶಾರೀಕ್ ಸಂಪೂರ್ಣ ಗುಣಮುಖನಾಗುವ ಸಾಧ್ಯತೆ ಇದೆ. ಒಂದು ವಾರದ ಬಳಿಕ ಶಾರೀಕ್‌ನನ್ನು ಡಿಸ್ಚಾರ್ಜ್ ಮಾಡಬಹುದು ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.

ಸಂಪೂರ್ಣ ಗುಣಮುಖನಾದ ಬಳಿಕ ಶಾರೀಕ್‌ನನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ. ಬಳಿಕ ಬೆಂಗಳೂರು ಅಥವಾ ದೆಹಲಿಗೆ ಶಾರೀಕ್‌ನನ್ನು ಸ್ಥಳಾಂತರಿಸುವ ಸಾಧ್ಯತೆಗಳಿವೆ. ಈಗಾಗಲೇ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿರುವ ಎನ್‌ಐಎ ಅಧಿಕಾರಿಗಳು, ಸ್ಥಳೀಯ ಪೊಲೀಸರಿಂದಲೂ ಹಲವು ಮಾಹಿತಿಯನ್ನು ಕ್ರೋಢಿಕರಿಸಿದ್ದಾರೆ.
ಇನ್ನು ಸ್ಥಳೀಯ ಪೊಲೀಸರಿಗೆ ಶಾರೀಕ್ ವಿಚಾರಣೆಗೆ ಅವಕಾಶ ನೀಡುವ ಸಾಧ್ಯತೆ ಕಡಿಮೆಯಿದ್ದು, ಈಗಾಗಲೇ ಎನ್‌ಐಎ ಅಧಿಕಾರಿಗಳ ತಂಡ ಮಂಗಳೂರಿನಲ್ಲಿ ಬೀಡು ಬಿಟ್ಟಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸಿಐಎಸ್ಎಫ್ ಅಧಿಕಾರಿಗಳಿಂದ ಶಾರೀಕ್‌ಗೆ ಭಾರಿ ಭಧ್ರತೆ ನೀಡಲಾಗಿದೆ. ಐದು ಮಂದಿ ಪೊಲೀಸರು ಮೂರು ಶಿಫ್ಟ್‌ನಲ್ಲಿ ಶಾರೀಕ್‌ಗೆ ಭದ್ರತೆ ನೀಡುತ್ತಿದ್ದು, ಶಾರೀಕ್ ಇರುವ ಕೊಠಡಿಗೆ ಮೆಟಲ್ ಡಿಕ್ಟೆಟರ್ ಅಳವಡಿಕೆ ಮಾಡಲಾಗಿದೆ. ಶಾರೀಕ್‌ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಬಗ್ಗೆಯೂ ತೀವ್ರ ನಿಗಾ ವಹಿಸಲಾಗಿದೆ.












Click it and Unblock the Notifications