Breaking: ಮಂಗಳೂರು ಆಟೋ ಸ್ಪೋಟ ಪ್ರಕರಣ ಎನ್ಐಎಗೆ ಹಸ್ತಾಂತರ
ಮಂಗಳೂರು, ನವೆಂಬರ್ 23: ಮಂಗಳೂರಿನಲ್ಲಿ ಆಟೋರಿಕ್ಷಾದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣವನ್ನು ಬುಧವಾರ ಅಧಿಕೃತವಾಗಿ ರಾಷ್ಟ್ರೀಯ ತನಿಖಾ ತಂಡ(ಎನ್ಐಎ)ಕ್ಕೆ ಹಸ್ತಾಂತರಿಸಲಾಗಿದೆ ಎಂದು ಡಿಜಿಪಿ ಪ್ರವೀಣ್ ಸೂದ್ ತಿಳಿಸಿದ್ದಾರೆ.
"ಯುಎಪಿಎಗೆ ಸಂಬಂಧಿಸಿದ ಯಾವುದೇ ಪ್ರಕರಣವಾಗಿದ್ದರೂ ಅದನ್ನು ಎನ್ಐಎ ತಂಡಕ್ಕೆ ಹಸ್ತಾಂತರ ಮಾಡಲಾಗುತ್ತದೆ. ನಿನ್ನೆ ಸಂಜೆಯೇ ನಾವು ಮಂಗಳೂರು ಆಟೋರಿಕ್ಷಾ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು ಎನ್ಐಎ ತಂಡಕ್ಕೆ ರವಾನಿಸಿದ್ದೇವೆ. ಅದನ್ನು ಇಂದು ಕೇಂದ್ರ ಗೃಹ ಸಚಿವಾಲಯಕ್ಕೆ ತಲುಪಿಸಲಾಗುತ್ತದೆ," ಎಂದು ತಿಳಿಸಿದರು.
ಮಂಗಳೂರಿನಲ್ಲಿ ಸಂಭವಿಸಿದ ಸ್ಫೋಟ ಪ್ರಕರಣವೂ ಸೇರಿದಂತೆ ಇಂಥ ಪ್ರಕರಣಗಳಲ್ಲಿ ಆರಂಬದಿಂದಲೂ ಕೇಂದ್ರೀಯ ತನಿಖಾ ತಂಡಗಳು ವಿಚಾರಣೆಯಲ್ಲಿ ಪೊಲೀಸರ ಜೊತೆಗೆ ಕೈ ಜೋಡಿಸಿರುತ್ತವೆ. ಸೂಕ್ಷ್ಮ ಅಂಶಗಳನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ತನಿಖೆಯನ್ನು ನಡೆಸುತ್ತವೆ. ಆದರೆ ಈಗ ಅಧಿಕೃತವಾಗಿ ಎನ್ಐಎ ತಂಡಕ್ಕೆ ಈ ಪ್ರಕರಣವನ್ನು ಹಸ್ತಾಂತರ ಮಾಡಲಾಗುತ್ತಿದೆ ಎಂದು ಡಿಜಿಪಿ ಪ್ರವೀಣ್ ಸೂದ್ ಮಾಹಿತಿ ನೀಡಿದರು.

ಮಂಗಳೂರಿನಲ್ಲಿ ಸ್ಫೋಟ ಸಂಭವಿಸಿದ್ದ ಸ್ಥಳಕ್ಕೆ ಆರಗ ಜ್ಞಾನೇಂದ್ರ ಭೇಟಿ
ಮಂಗಳೂರಿನ ಆಟೋ ಸ್ಪೋಟಗೊಂಡ ಸ್ಥಳಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಡಿಜಿಪಿ ಪ್ರವೀಣ್ ಸೂದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಪೋಟಗೊಂಡ ಆಟೋವನ್ನು ಘಟನಾ ಸ್ಥಳದಲ್ಲೇ ಇರಿಸಲಾಗಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ಆಟೋ ವೀಕ್ಷಿಸಿ ಪೊಲೀಸರಿಂದ ಮಾಹಿತಿ ಪಡೆದರು.
ಕಳೆದ ನವೆಂಬರ್ 19ರಂದು ಸಂಜೆ ಶಂಕಿತ ಭಯೋತ್ಪಾದಕ ಶಾರೀಕ್ ಪಂಪ್ ವೆಲ್ ಕಡೆಗೆ ಆಟೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಆತನ ಬಳಿಯಿದ್ದ ಕುಕ್ಕರ್ ಬಾಂಬ್ ಗರೋಡಿ ಬಳಿಯಲ್ಲಿ ಸ್ಪೋಟಗೊಂಡಿತ್ತು. ಆ ಬಳಿಕ ಆಟೋದಲ್ಲಿ ಸ್ಫೋಟ ನಡೆದಿರುವ ಸ್ಥಳವನ್ನು ಬ್ಯಾರಿಕೇಡ್ ಹಾಕಿ ಯಾರೂ ಅಲ್ಲಿ ಓಡಾಡದಂತೆ ರಸ್ತೆಯಿಂದ ಪ್ರತ್ಯೇಕಿಸಲಾಗಿತ್ತು. ಈ ಸ್ಥಳದಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಬಿಗಿ ಭದ್ರತೆಯನ್ನು ಒದಗಿಸಲಾಗಿತ್ತು.












Click it and Unblock the Notifications