ಇ-ಬೀಟ್ ವ್ಯವಸ್ಥೆ ಜಾರಿಗೆ ತಂದ ಮಂಗಳೂರು ಪೊಲೀಸರು
ಮಂಗಳೂರು, ಜೂ 24 : ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿ ಪೊಲೀಸ್ ಠಾಣೆಗಳಲ್ಲಿ 'ಪೊಲೀಸ್ ಐಟಿ' ವ್ಯವಸ್ಥೆ ಕಲ್ಪಿಸಲಾಗಿದೆ. ದಾಖಲಿಸುವ ದೂರುಗಳು ಸೇರಿದಂತೆ ಠಾಣಾ ವ್ಯಾಪ್ತಿಯ ಎಲ್ಲ ಮಾಹಿತಿಗಳನ್ನು ಗಣಕೀಕೃತ ಮಾಡಲಾಗುತ್ತಿದೆ. ಇದರ ಲಿಂಕ್‌ನ್ನು ನ್ಯಾಯಾಲಯದ ವೆಬ್‌ಸೈಟ್‌ಗೂ ನೀಡಲಾಗುತ್ತಿದೆ. ಈ ಮೂಲಕ ಇಡೀ ಪೊಲೀಸ್ ವ್ಯವಸ್ಥೆ ಇನ್ನಷ್ಟು ಪಾರದರ್ಶಕವಾಗಿ ಕಾರ್ಯನಿರ್ವಹಿಸಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶರಣಪ್ಪ ಎಸ್.ಡಿ. ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎಫ್‌ಐಆರ್ ದಾಖಲು, ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆ, ಪ್ರತಿಯೊಂದು ಗ್ರಾಮದ ಸಮಗ್ರ ಮಾಹಿತಿ ಹೀಗೆ ಎಲ್ಲಾ ಅಂಶಗಳು ಪೊಲೀಸ್ ಮಾಹಿತಿ ತಂತ್ರಜ್ಞಾನದೊಳಗೆ ಬರಲಿವೆ. ಪ್ರತಿ ಠಾಣೆಗೆ ಕನಿಷ್ಠ 5-6 ಕಂಪ್ಯೂಟರ್ ಒದಗಿಸಲಾಗುತ್ತಿದೆ. ಪೇಪರ್‌ಲೆಸ್ ಪೊಲೀಸ್ ಠಾಣೆಗಳನ್ನಾಗಿಸುವುದರ ಜತೆಗೆ,ನ್ಯಾಯಾಲಯಕ್ಕೂ ಇಲ್ಲಿಂದ ಯಾವುದೇ ಸಂದರ್ಭದಲ್ಲೂ ಮಾಹಿತಿ ಪಡೆಯಲು ಸಾಧ್ಯವಿದೆ.

ಈ ಹಿನ್ನೆಲೆಯಿಂದ ಪೊಲೀಸ್ ಠಾಣೆ ಸಂಪೂರ್ಣ ಪಾರದರ್ಶಕತೆಯಲ್ಲಿ ಕಾರ್ಯನಿರ್ವಹಿಸಲಿದೆ. ಜತೆಗೆ ಜನತೆಯ ಸಮಸ್ಯೆಗೆ ಸಕಾಲದಲ್ಲಿ ಸೂಕ್ತ ರೀತಿಯಲ್ಲಿ ಸ್ಪಂದಿಸುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಕೇಂದ್ರ ಸಿಸಿಟಿಎನ್ಎಸ್ ಅಡಿಯಲ್ಲಿ ಈ ಮಾಹಿತಿ ಕೇಂದ್ರ ಕಾರ್ಯನಿರ್ವಹಿಸುತ್ತದೆ ಎಂದರು.
ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇ-ಬೀಟ್ ವ್ಯವಸ್ಥೆಯ ಮೂಲಕ ಗ್ರಾಮೀಣ ಭಾಗದ ಜನತೆಯ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಠಾಣೆಯಲ್ಲಿ 10 ಮಂದಿ ಸಿಬ್ಬಂದಿಗಳನ್ನೊಳಗೊಂಡ ಇ-ಬೀಟ್ ವ್ಯವಸ್ಥೆ ಮಾಡಲಾಗಿದೆ. ತಂಡದ ಸಿಬ್ಬಂದಿ ಯಾವಸಮಯದಲ್ಲಿ ಎಲ್ಲೆಲ್ಲಿ ಹೋಗಿದ್ದಾರೆ ಎಂಬ ಮಾಹಿತಿ ಸಂಗ್ರಹಿಸುವ ವ್ಯವಸ್ಥೆಯೇ ಇದಾಗಿದೆ. ಪ್ರತಿ ಸಿಬ್ಬಂದಿಗೆ ಕನಿಷ್ಠ ಮೂರು ಗ್ರಾಮದ ಜವಾಬ್ದಾರಿ ನೀಡಲಾಗಿದೆ. ಆ ಗ್ರಾಮಗಳ ಎಲ್ಲ ಮಾಹಿತಿ ಸಿಬ್ಬಂದಿಯ ಬಳಿ ಇರುತ್ತದೆ. ನಾನಾ ಸಂಘಟನೆಗಳು, ಶಾಲೆ, ಧಾರ್ಮಿಕ ಕೇಂದ್ರಗಳು ಸೇರಿದಂತೆ ಗ್ರಾಮದ ಸುಮಾರು 50 ಮಂದಿಯ ಸಂಪರ್ಕ ಸಂಖ್ಯೆ ಸಿಬ್ಬಂದಿ ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ. ಯಾವುದೇ ಘಟನೆ ನಡೆದಾಗ ಅವರನ್ನು ಸಂಪರ್ಕಿಸಿ ಪೂರಕ ಮಾಹಿತಿ ಪಡೆದುಕೊಳ್ಳಲಾಗುತ್ತದೆ.
ಮುಂದಿನ ಒಂದು ತಿಂಗಳೊಳಗೆ ಜಿಲ್ಲೆಯೆ ಎಲ್ಲ ಪೊಲೀಸ್ ಇಲಾಖೆಗೆ ಐಎಸ್‌ಒ ಪ್ರಮಾಣ ಪತ್ರ ದೊರೆಯುವ ಸಾಧ್ಯತೆಯಿದೆ. ಇದರೊಂದಿಗೆ ಜವಾಬ್ದಾರಿಯೂ ಹೆಚ್ಚಲಿದೆ. ಪೊಲೀಸ್ ಸಿಬ್ಬಂದಿ ಸಮಸ್ಯೆಯನ್ನು ನೀಗಿಸುವಲ್ಲಿ ಸರಕಾರದ ಗಮನ ಸೆಳೆಯಲಾಗಿದೆ. ಈಗಾಗಲೇ ಹೆಚ್ಚುವರಿಯಾಗಿ ಎರಡು ಪೊಲೀಸ್ ಠಾಣೆಗಳು ಮಂಜೂರಾಗಿವೆ ಎಂದು ಅವರು ತಿಳಿಸಿದರು.
ಎಲ್ಲ ಧಾರ್ಮಿಕ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆಗೆ ಸೂಚನೆ ನೀಡಲಾಗಿದೆ. ಈಗಾಗಲೇ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 30 ಲಕ್ಷ ವೆಚ್ಚದಲ್ಲಿ ಆಡಳಿತ ಮಂಡಳಿ ಸಿಸಿಟಿವಿ ಅಳವಡಿಸಲು ಮುಂದಾಗಿದೆ. ಸೂಕ್ಷ್ಮ ಪ್ರದೇಶ, ಜಂಕ್ಷನ್, ಚೆಕ್‌ಪೋಸ್ಟ್‌ಗಳಲ್ಲಿ ಸಿಸಿ ಟಿವಿ ಅಳವಡಿಸಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಶಾಲಾ, ಕಾಲೇಜುಗಳ ಸಹಕಾರದೊಂದಿಗೆ ಮಾಡಿದ್ದೇವೆ. ಮಾದಕ ದ್ರವ್ಯದ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ದೂರುಗಳು ಕಡಿಮೆ ಇವೆ ಎಂದರು.
ಉಪ್ಪಿನಂಗಡಿ ಪುಷ್ಪಾವತಿ ಸಾವು ಪ್ರಕರಣ ಎದುರಾದ ದೊಡ್ಡ ಸವಾಲು. ಈ ಪ್ರಕರಣದ ಆರೋಪಿಗಳನ್ನು ಇನ್ನೂ ಪತ್ತೆ ಮಾಡಲು ಆಗಲಿಲ್ಲ. ಪ್ರಯತ್ನ ಸಾಗಿದೆ ಎಂದರು.
ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳು ಪೊಲೀಸ್ ಠಾಣೆಗೆ ಭೇಟಿ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ. ಇದರಿಂದ ಪೊಲೀಸರ ಬಗ್ಗೆ ಭಯ ನಿವಾರಣೆಯಾಗುತ್ತದೆ. ಅಲ್ಲದೇ ಅಲ್ಲಿನ ವೈರ್ ಲೆಸ್, ಇತರ ವ್ಯವಸ್ಥೆಗಳು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಬಗ್ಗೆ ಮಾಹಿತಿ ನೀಡಲು ಉದ್ದೇಶಿಸಲಾಗಿದೆ. ಇದಕ್ಕೆ ತೆರೆದ ಮನೆ ಎಂಬ ಹೆಸರಿಡಲಾಗಿದೆ ಎಂದು ಅವರು ವಿವರಿಸಿದರು.
ಜಿಲ್ಲೆಯಲ್ಲಿ ಬಳಸುವ ಮೋರಲ್ ಪೊಲೀಸಿಂಗ್ ಶಬ್ದವನ್ನು ಇನ್ನು ಮುಂದೆ ಬಳಸಬೇಡಿ. ಇದರಲ್ಲಿ ಮೋರಲ್ ಇಲ್ಲ ಹಾಗೆಯೇ ಪೊಲೀಸಿಂಗ್ ಇಲ್ಲ. ಇದು ಇಮ್ಮೋರಲ್ ರೌಡಿಸಂ. ಇಂತಹ ಘಟನೆಯಾದಾಗ ಇದು ರೌಡಿಸಂ ಎಂದೇ ಪರಿಗಣಿಸಬೇಕಾಗುತ್ತದೆ ಎಂದರು.












Click it and Unblock the Notifications