ಕ್ಲೂ ಇಲ್ಲದ ಕೊಲೆ ರಹಸ್ಯ ಪತ್ತೆ ಮಾಡಿದ ಮಂಗಳೂರು ರೈಲ್ವೇ ಪೊಲೀಸರು!
ಬೆಂಗಳೂರು, ಅ. 04: ಎಂಟು ತಿಂಗಳ ಹಿಂದೆ ನಡೆದಿದ್ದ ಸುಳಿವು ಇಲ್ಲದ ಕೊಲೆ ರಹಸ್ಯವನ್ನು ಮಂಗಳೂರು ರೈಲ್ವೇ ಪೊಲೀಸರ ಪತ್ತೆ ಮಾಡುವಲ್ಲಿ ಯಶಸ್ಸಿಯಾಗಿದ್ದಾರೆ. ಮದ್ಯಪಾನದ ವಿಚಾರವಾಗಿ ಕೇವಲ ಐದು ನೂರು ರೂಪಾಯಿಗಾಗಿ ಕೊಲೆ ಮಾಡಿ ಹೊರ ರಾಜ್ಯದಲ್ಲಿ ತಲೆ ಮರೆಸಿಕೊಂಡಿದ್ದ ಅರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಒಡಿಶಾ ಮೂಲದ ಪ್ರದೀಪ್ ಲಕಾರಿ ಬಂಧಿತ ಆರೋಪಿ. ಮೈನುಲ್ ಹಕ್ ಬಾರ್ಬುಯ್ಯಾ ಕೊಲೆಯಾಗಿದ್ದವ. ಮಂಗಳೂರಿನ ಬಂದರಿನ ಬೋಟ್ ವೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮೈನುಲ್ ಹಕ್. ಈತನೂ ಒಡಿಶಾ ಮೂಲದವನಾಗಿದ್ದ. ಎಂಟು ತಿಂಗಳ ಹಿಂದೆ ಮಂಗಳೂರು ರೈಲ್ವೇ ಗೂಡ್ಸ್ ಶೆಡ್ ಯಾರ್ಡ್ ನಲ್ಲಿ ಅಪರಿಚಿತ ವ್ಯಕ್ತಿಯ ದೇಹ ಪತ್ತೆಯಾಗಿತ್ತು. ಮಂಗಳೂರು ರೈಲ್ವೇ ಪೊಲೀಸರು ಪರಿಶೀಲನೆ ನಡೆಸಿದಾಗ ಕೊಲೆಯಾಗಿರುವುದು ಮೇಲ್ನೋಟಕ್ಕೆ ಬೆಳಕಿಗೆ ಬಂದಿತ್ತು. ಮೃತ ದೇಹದ ಗುರುತು ಪತ್ತೆ ಮಾಡಿದಾಗ ಮೆನುಲ್ ಹಕ್ ಕೊಲೆಯಾಗಿರುವ ಸಂಗತಿ ಬೆಳಕಿಗೆ ಬಂದಿತ್ತು. ಈ ಕುರಿತು ಎಲ್ಲಾ ಆಯಾಮದಲ್ಲಿ ತನಿಖೆ ಮಾಡಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಐದು ನೂರು ರೂಪಾಯಿಗಾಗಿ ಕೊಲೆ: ಈ ಪ್ರಕರಣದ ಜಾಡು ಹಿಡಿದು ತನಿಖೆ ನಡೆಸಿದ ಮಂಗಳೂರು ಪೊಲೀಸರು ಸಿಸಿಟಿವಿಯಲ್ಲಿ ಸಿಕ್ಕ ಸಣ್ಣ ಸುಳುವಿನ ಆಧಾರದ ಮೇಲೆ ಆರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮೆನುಲ್ ಹಕ್ ಸ್ನೇಹೀತ ಪ್ರದೀಪ್ ಲಕಾರಿ ಎಂಬಾತನನ್ನು ಬಂಧಿಸಿದ್ದಾರೆ. ಪ್ರದೀಪ್ ಮತ್ತು ಮೆನುಲ್ ಹಕ್ ಬಾರ್ಬುಯ್ಯ ಒಂದೇ ರಾಜ್ಯದವರು. ಇಬ್ಬರೂ ಪರಸ್ಪರ ಸ್ನೇಹಿತರಾಗಿದ್ದರು. ಕುಡಿತದ ಚಟಕ್ಕೆ ಬಿದ್ದಿದ್ದ ಮೈನುಲ್ ಒಮ್ಮೆ ಪ್ರದೀಪ್ ನ ಜೇಬಿನಲ್ಲಿ ಐದು ನೂರು ರೂ. ಕದ್ದು ಕುಡಿದಿದ್ದ. ಈ ವಿಚಾರವಾಗಿ ಜಗಳ ಮಾಡಿಕೊಂಡಿದ್ದು, ಆ ಬಳಿಕ ಐದು ನೂರು ರೂಪಾಯಿಯನ್ನು ವಾಪಸು ನೀಡಿದ್ದ. ಇದೇ ರೀತಿ ಅನೇಕ ಸ್ನೇಹಿತರ ಜತೆ ಲಕಾರಿ ಜಗಳ ಮಾಡಿಕೊಂಡಿದ್ದ. ಇದೇ ವಿಚಾರವಾಗಿ ಮೈನುಲ್ ಮತ್ತು ಪ್ರದೀಪ್ ಲಕಾರಿ ನಡುವೆ ಜಗಳ ನಡೆದಿದೆ. ಪ್ರದೀಪ್ ತಲೆಗೆ ಹೊಡೆದು ಮನುಲ್ ನನ್ನು ಕೊಲೆ ಮಾಡಿ ಒರಿಸ್ಸಾಗೆ ಪರಾರಿಯಾಗಿದ್ದ. ಕೆಲ ದಿನಗಳ ಬಳಿಕ ಮಂಗಳೂರಿನ ಬಂದರಿಗೆ ವಾಪಸು ಬಂದಿದ್ದು, ಎಂದಿನಂತೆ ಕೆಲಸ ಮಾಡಿಕೊಂಡಿದ್ದ.

ಸಿಸಿಟಿವಿ ದೃಶ್ಯ ಹಾಗೂ ಮೈನುಲ್ ಕೊಲೆ ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಿಸಿ ಪ್ರದೀಪ್ ನನ್ನು ವಿಚಾರಣೆಗೆ ಒಳಪಡಿಸಿದಾಗ ಆತ ಕೊಲೆ ಮಾಡಿರುವ ವಿಚಾರವನ್ನು ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ರೈಲ್ವೇ ಎಸ್ಪಿ ಸಿರಿಗೌರಿ ಮಾರ್ಗದರ್ಶನದಲ್ಲಿ ಮಂಗಳೂರು ರೈಲ್ವೇ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರಕರಣವನ್ನು ಪತ್ತೆ ಮಾಡಿದ್ದಾರೆ. ರೈಲ್ವೇ ಪೊಲೀಸರ ತನಿಖಾ ಶೈಲಿಗೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿದೆ.
ಇತ್ತೀಚೆಗೆ ಬೆಂಗಳೂರು ರೈಲ್ವೇ ಪೊಲೀಸರು ನಿಗೂಢವಾಗಿ ಕೊಲೆಯಾಗಿದ್ದ ರಹಸ್ಯವನ್ನು ಪತ್ತೆ ಮಾಡಿ ಸುದ್ದಿಯಾಗಿದ್ದರು. ಸಾಲದ ಹಣ ಕೇಳಿದ್ದ ಮಹಿಳೆಯನ್ನ ಕೊಲೆ ಮಾಡಿದ್ದ ಬಿಎಂಟಿಸಿ ನಿರ್ವಾಹಕ ಮತ್ತು ಆತನ ಪ್ರೇಯಸಿ ಮೃತ ದೇಹವನ್ನು ಲಾರಿಯಲ್ಲಿ ಹಾಕಿ ಉತ್ತರ ಕರ್ನಾಟಕಕ್ಕೆ ರವಾನಿಸಿದ್ದರು. ದೇಹ ಕ್ಯಾತಸಂದ್ರದ ಬಳಿ ಪತ್ತೆಯಾಗಿದ್ದರೆ, ರುಂಡ ಹಾವೇರಿಯಲ್ಲಿ ಸಿಕ್ಕಿತ್ತು. ಮೃತ ಮಹಿಳೆ ಗುರುತು ಪತ್ತೆ ಮಾಡಿದಾಗ ಮಂಡ್ಯ ಮೂಲದ ಮಹಿಳೆ ಎಂಬುದು ಗೊತ್ತಾಗಿತ್ತು. ಪಿಂಚಣಿ ಹಣ ತರಲೆಂದು ಮಂಡ್ಯದಿಂದ ತುಮಕೂರಿಗೆ ಬಂದಿದ್ದ ಮಹಿಳೆಯನ್ನು ಕೊಲೆ ಮಾಡಿ ತಲೆಯನ್ನು ಉತ್ತರ ಕರ್ನಾಟಕಕ್ಕೆ ಪಾರ್ಸಲ್ ಮಾಡಿದ್ದ ನಿರ್ವಾಹಕ ಮತ್ತು ಆತನ ಪತ್ನಿ ಸಿಕ್ಕಿಬಿದ್ದಿದ್ದರು. ಯಾವುದೇ ಕ್ಲೂ ಇಲ್ಲದ ಈ ಪ್ರಕರಣವನ್ನು ಪತ್ತೆ ಮಾಡುವ ಮೂಲಕ ರೈಲ್ವೇ ಪೊಲೀಸರು ಸಾಮಾನ್ಯ ಪೊಲೀಸರಿಗಿಂತಲೂ ತನಿಖೆಯಲ್ಲಿ ಒಂದು ಹೆಜ್ಜೆ ಮುಂದೆ ಇದ್ದೀವಿ ಎಂಬುದನ್ನು ಬಿಂಬಿಸಿಕೊಂಡಿದ್ದರು.












Click it and Unblock the Notifications